ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರು ಅಕ್ಷರ ವಂಚಿತರ ಬದುಕಿಗೆ ಬೆಳಕಾದವರು. ಏಕಾಂಗಿಯಾಗಿ ಹೋರಾಟ ಆರಂಭಿಸಿ, ಅದನ್ನು ಬೃಹತ್ ಚಳವಳಿಯನ್ನಾಗಿ ರೂಪಿಸಿದವರು.

ಕನ್ನಡಪ್ರಭ ವಾರ್ತೆ, ತುಮಕೂರು

ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರು ಅಕ್ಷರ ವಂಚಿತರ ಬದುಕಿಗೆ ಬೆಳಕಾದವರು. ಏಕಾಂಗಿಯಾಗಿ ಹೋರಾಟ ಆರಂಭಿಸಿ, ಅದನ್ನು ಬೃಹತ್ ಚಳವಳಿಯನ್ನಾಗಿ ರೂಪಿಸಿದವರು. ಗಾಂಧೀಜಿ ಆದರ್ಶ ಮೈಗೂಡಿಸಿಕೊಂಡು, ಜಾತ್ಯತೀತ ತಳಹದಿ ಮೇಲೆ ರೈತ ಚಳವಳಿಯನ್ನು ಸಂಘಟಿಸಿದರು ಎಂದು ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಅಣ್ಣಪ್ಪ ಮಳಿಮಠ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠ ಹಾಗೂ ಶೇಷಾದ್ರಿಪುರಂ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ "ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ವಿಚಾರಧಾರೆ: ಭಾರತದ ರೈತ ಚಳವಳಿ " ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚ‍ಳವಳಿಯಲ್ಲಿ ಒಬ್ಬನೇ ನಾಯಕನಿರಬಾರದು. ಪ್ರತಿಯೊಬ್ಬ ರೈತನು ನಾಯಕನಾಗಬೇಕು ಎಂಬುದು ಎಂ.ಡಿ.ಎನ್ ಅವರ ಆಶಯವಾಗಿತ್ತು. ಹಸಿರು ಶಾಲನ್ನು ರೈತನ ಕಿರೀಟ ಎಂದು ಪರಿಗಣಿಸಿದ ಅವರು, ರೈತರಿಗೆ ಆತ್ಮಗೌರವದ ಸಂಕೇತ ನೀಡಿದರು. ರೈತ ತಾವು ಬೆಳೆದ ಬೆಳೆ ನೇರವಾಗಿ ಗ್ರಾಹಕರಿಗೆ ತಲುಪಿಸಿ, ಸ್ವಾವಲಂಬಿ ಜೀವನ ನಡೆಸಬೇಕು. ಅವೈಜ್ಞಾನಿಕ ಕೀಟನಾಶಕಗಳನ್ನು ವಿರೋಧಿಸಿದ ಅವರು, ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿದ್ದರು ಎಂದು ಹೇಳಿದರು. ನರಗುಂದ-ನವಲಗುಂದದ ರೈತ ಚಳವಳಿಯು ದೇಶದ ಇತಿಹಾಸದಲ್ಲೇ ಮಹತ್ವದ ತಿರುವು ನೀಡಿತು. ಸರ್ಕಾರಗಳು ಈಗಲಾದರೂ ನೆಲಮೂಲದ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಮೋಹನ್ ಎಚ್.ಎಸ್. ಮಾತನಾಡಿ, ದೇಶದಲ್ಲಿ ದುಡಿಯುವ ವರ್ಗ ಅಧಿಕಾರಕ್ಕೆ ಬರಬೇಕು ಮತ್ತು ಅನ್ನ ನೀಡುವ ರೈತನಿಗೆ ಸಮಾಜದಲ್ಲಿ ಸೂಕ್ತ ಗೌರವ ಸಿಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಇಂದಿನ ಯುವಜನತೆ ಪಡೆಯುವ ಓದಿಗೂ ಅವರ ಬದುಕಿಗೂ ಸಂಬಂಧವಿಲ್ಲದಂತಾಗಿದೆ. ವಿದ್ಯಾರ್ಥಿಗಳಿಗೆ ಕೃಷಿ ಬಗ್ಗೆ ಅರಿವು ಇರುವುದು ಅತ್ಯಗತ್ಯ. ಮೊಬೈಲ್‌ನಲ್ಲಿ ಸಮಯ ವ್ಯರ್ಥ ಮಾಡುವ ಬದಲು, ಭವಿಷ್ಯದ ಕನಸು ನನಸಾಗಿಸಲು ಶ್ರಮಿಸಬೇಕು. ಬದುಕು ಕಟ್ಟಿಕೊಡುವಂತಹ ವಿದ್ಯಾಭ್ಯಾಸ ಇಂದಿನ ತುರ್ತು ಅಗತ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಟಿ. ಜಗದೀಶ, ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಮುನಿರಾಜು ಎಂ., ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.