ರೈತ ಸಂಘಟನೆಗೆ ಒತ್ತು ಕೊಟ್ಟವರು ಪ್ರೊ.ಎಂಡಿಎನ್

| Published : Feb 05 2024, 01:45 AM IST

ಸಾರಾಂಶ

ರೈತ ಸಂಘಟನೆಗೆ ಸಾತ್ವಿಕ ಸ್ವರೂಪ ಕೊಟ್ಟು ರೈತ ವರ್ಗದ ಎಲ್ಲಾ ಸಮಸ್ಯೆಗಳ ಬಗ್ಗೆ ಎಲ್ಲಾ ವರ್ಗದ ರೈತರನ್ನು ಒಗ್ಗೂಡಿಸಿ ಹೋರಾಟ ಮಾಡಿಸಿದವರು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಎಂದು ನಂಜುಂಡಸ್ವಾಮಿ ಒಡನಾಡಿ ಪ್ರೊ.ರವಿವರ್ಮಕುಮಾರ್ ಹೇಳಿದರು.

ಪ್ರೊ. ರವಿವರ್ಮಕುಮಾರ್ ಅಭಿಮತ । ಪ್ರೊ.ಎಂಡಿಎನ್‌ ಕುರಿತ ಡೈರೆಕ್ಟ್ ಆ್ಯಕ್ಷನ್ ನಾಟಕ ಪ್ರದರ್ಶನ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರೈತ ಸಂಘಟನೆಗೆ ಸಾತ್ವಿಕ ಸ್ವರೂಪ ಕೊಟ್ಟು ರೈತ ವರ್ಗದ ಎಲ್ಲಾ ಸಮಸ್ಯೆಗಳ ಬಗ್ಗೆ ಎಲ್ಲಾ ವರ್ಗದ ರೈತರನ್ನು ಒಗ್ಗೂಡಿಸಿ ಹೋರಾಟ ಮಾಡಿಸಿದವರು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಎಂದು ನಂಜುಂಡಸ್ವಾಮಿ ಒಡನಾಡಿ ಪ್ರೊ.ರವಿವರ್ಮಕುಮಾರ್ ಹೇಳಿದರು.

ನಗರದ ಜಿಲ್ಲ್ಲಾಡಾ.ರಾಜ್‌ಕುಮಾರ್‌ ಕಲಾ ಮಂದಿರದಲ್ಲಿ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ 20ನೇ ಸಂಸ್ಮರಣ ದಿನೋತ್ಸವದ ಅಂಗವಾಗಿ ರಂಗತರಂಗ ಟ್ರಸ್ಟ್, ಸಾಮೂಹಿಕ ನಾಯಕತ್ವದಲ್ಲಿ ರೈತ ಸಂಘ ಹಾಗೂ ಶಾಂತಲಾ ಕಲಾವಿದರ ಸಹಕಾರದೊಂದಿಗೆ ಪ್ರೊ.ಎಂ.ಡಿ.ಎನ್. ಕುರಿತ ರೈತ ಹೋರಾಟದ ಯಶೋಗಾಥೆ ಕುರಿತ ನಗ್ನ ಥಿಯೇಟರ್ ಬೆಂಗಳೂರು ತಂಡದ ಅಭಿನಯನದ ಡೈರೆಕ್ಟ್ ಆ್ಯಕ್ಷನ್ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಸಂಘಟನೆ ಬೇಕು ಅದು ಎಲ್ಲಾ ವರ್ಗದ ರೈತರನ್ನು ಒಳಗೊಂಡಿರಬೇಕು ಎಂದು ಮೊಟ್ಟ ಮೊದಲು ಕರೆಕೊಟ್ಟವರು ವಿಶ್ವರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು, ಇಡೀ ಪ್ರಪಂಚದಲ್ಲಿ ಎಲ್ಲಾ ರೈತರನ್ನೂ ಒಳಗೊಂಡ ಸಂಘಟನೆ ಕಟ್ಟಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಸೈದ್ಧಾಂತಿಕ ಸ್ಪಷ್ಟತೆಯಿಂದ ಹೋರಾಟ ರೂಪಿಸುತ್ತಿದ್ದರು. ರಾಜ್ಯದಲ್ಲಿ ಸರ್ಕಾರವನ್ನು ಸೋಲಿಸಲು ಕಾರಣರಾಗಿದ್ದರು, ಬೆಲೆ ನೀತಿ, ಸಾಲದ ನೀತಿ ಹಾಗೂ ಸಂಘಟನೆ ನೀತಿಯನ್ನು ಪ್ರೊ.ಎಂಡಿಎನ್ ರೂಪಿಸಿದರು. ರಾಜ್ಯಾದ್ಯಂತ ಅದಕ್ಕೆ ಅಭೂತಪೂರ್ವ ಬೆಂಬಲ ದೊರಕಿತು. ರೈತ ಸಂಘ ವೈಚಾರಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ತಾತ್ವಿಕವಾಗಿ ಮುನ್ನಡೆಯಿತು. ಗುರಿ ಮತ್ತು ಮಾರ್ಗದ ಬಗ್ಗೆ ಸ್ಪಷ್ಟತೆಯನ್ನುಇಟ್ಟುಕೊಂಡು ಸಾಗಬೇಕು ಎಂಬುದು ಅವರ ನಿಲುವಾಗಿತ್ತು ಎಂದು ಹೇಳಿದರು.

ಸಮಾಜವಾದಿ ಚಳವಳಿ, ಕಾಗೋಡು ಚಳವಳಿ ಕಾಲಕ್ಕೆ ಕಬ್ಬು ಬೆಳೆಯುವ ರೈತರನ್ನು ಹೊರತುಪಡಿಸಿ ಬೇರೆ ಯಾವ ರೈತರು ಶಿವಮೊಗ್ಗದಲ್ಲಿ ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಹೋರಾಟ ಮಾಡದಿದ್ದಾಗ ಅದರ ಸಾರಥ್ಯ ವಹಿಸಿಕೊಳ್ಳುವಂತೆ ಆಹ್ವಾನ ಬಂದಾಗ ಕಬ್ಬು ಬೆಳೆಗಾರರಿಗಿಂತಲೂ ಸಂಕಷ್ಟದಲ್ಲಿರುವ ರೈತರಿದ್ದು ಎಲ್ಲಾ ರೈತರ ಪರವಾಗಿ ಚಳವಳಿ ಮಾಡುವುದಿದ್ದರೆ ಬರುತ್ತೇನೆ ಎಂದು ಷರತ್ತು ಹಾಕಿ ನಂಜುಂಡಸ್ವಾಮಿ ಭಾಗವಹಿಸಿದ್ದರು. ಅಲ್ಲಿಯವರೆಗೆ ಹಳ್ಳಿಗಳಲ್ಲಿ ರೈತರು ಒಗ್ಗಟ್ಟಿನಿಂದ ಇರಲಿಲ್ಲ ಎಂದರು.

ಮತೀಯಭಾವನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರೈತ ಸಂಘಟನೆಗಳು ಮತೀಯ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಸಿದ್ಧವಾಗಬೇಕು ಎಂದರು.

ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಪಚ್ಚೆ ನಂಜುಂಡಸ್ವಾಮಿ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅಲೂರು ಮಹೇಶ್ ಪ್ರಭು, ರೈತ ಮುಖಂಡ ಹೊನ್ನೂರು ಪ್ರಕಾಶ್, ರಂಗಕರ್ಮಿಅಬ್ರಾಹಂ ಡಿಸಿಲ್ವಾ, ಕಲಾವಿದ ಅಂಬಳೆ ಸಿದ್ದರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಂತಲಾಕಲಾವಿದರ ಸಂಸ್ಥೆಯ ಕೆ.ವೆಂಕಟರಾಜು ಸ್ವಾಗತಿಸಿದರು. ರಂಗತರಂಗ ಸಂಸ್ಥೆಯ ಅಧ್ಯಕ್ಷ ಸಾಹಿತಿ ಸೋಮಶೇಖರ ಬಿಸಲ್ವಾಡಿ ನಿರೂಪಿಸಿದರು. ತುಂಬಿದ ರಂಗಮಂದಿರದಲ್ಲಿ ನಗ್ನಥಿಯೇಟರ್ ಬೆಂಗಳೂರು ತಂಡದ ಕಲಾವಿದರು ಪ್ರೊ.ಎಂ.ಡಿ.ಎನ್. ಕುರಿತ ರೈತ ಹೋರಾಟದ ಯಶೋಗಾಥೆ ಕುರಿತ ನಾಟಕವನ್ನು ಮನಮುಟ್ಟುವಂತೆ ಅಭಿನಯಿಸಿದರು. ಪ್ರೊ. ನಟರಾಜ್ ಹುಳಿಯಾರ್ ಇದನ್ನು ಬರೆದಿದ್ದು, ನರೇಂದ್ರಬಾಬು ನಿರ್ದೇಶಿಸಿದ್ದಾರೆ.