ಸುಜನಾ ಅವರು ಕೇವಲ ನನ್ನ ಗುರುಗಳಾಗಿರಲ್ಲಿಲ್ಲ. ನನ್ನ ಬದುಕಿನ ಧಿಕ್ಕನ್ನು ತೋರಿಸಿಕೊಟ್ಟವರು. ನನ್ನಂತಹ ಅನೇಕ ವಿದ್ಯಾರ್ಥಿಗಳಿಗೆ ಬದುಕಿನ ದಾರಿ ತೋರಿಸಿದ ನಿತ್ಯ ಸ್ಮರಣೀಯರು. ವ್ಯಕ್ತಿತ್ವ ಎನ್ನುವುದು ಅಮೂರ್ತವಾದುದು. ಅದು ಕ್ರಿಯಾತ್ಮಕ ಆಲೋಚನೆಗಳ ಮೂಲಕ ರೂಪುಗೊಳ್ಳುತ್ತದೆ.

ಕೆ.ಆರ್.ಪೇಟೆ: ಪರಿಶ್ರಮ ಮತ್ತು ಪ್ರಾಮಾಣಿಕತೆಯ ಪ್ರತಿರೂಪವಾಗಿದ್ದ ಪ್ರೊ.ಸುಜನಾ ವಿದ್ಯಾರ್ಥಿಗಳ ಪಾಲಿಗೆ ಆದರ್ಶ ಗುರುವಾಗಿದ್ದರು ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ಕನ್ನಡ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸುಜನಾ: ನೆಲದ ಕಂಪು ಕುರಿತ ಒಂದು ದಿನದ ವಿಚಾರಗೋಷ್ಠಿಯಲ್ಲಿ ಪ್ರೊ.ಸುಜನಾರ ಅನನ್ಯ ವ್ಯಕ್ತಿತ್ವ, ಬೋಧನಾ ವೈಶಿಷ್ಟ್ಯ ಮತ್ತು ಚಿಂತನಾಶೀಲತೆ ಕುರಿತು ವಿಚಾರ ಮಂಡಿಸಿದರು. ಸುಜನಾ ಅವರು ಕೇವಲ ನನ್ನ ಗುರುಗಳಾಗಿರಲ್ಲಿಲ್ಲ. ನನ್ನ ಬದುಕಿನ ಧಿಕ್ಕನ್ನು ತೋರಿಸಿಕೊಟ್ಟವರು. ನನ್ನಂತಹ ಅನೇಕ ವಿದ್ಯಾರ್ಥಿಗಳಿಗೆ ಬದುಕಿನ ದಾರಿ ತೋರಿಸಿದ ನಿತ್ಯ ಸ್ಮರಣೀಯರು. ವ್ಯಕ್ತಿತ್ವ ಎನ್ನುವುದು ಅಮೂರ್ತವಾದುದು. ಅದು ಕ್ರಿಯಾತ್ಮಕ ಆಲೋಚನೆಗಳ ಮೂಲಕ ರೂಪುಗೊಳ್ಳುತ್ತದೆ ಎಂದರು.

ಪರಿಶ್ರಮ ಮತ್ತು ಪ್ರಾಮಾಣಿಕತೆ ನೆಲೆಗಟ್ಟಿನಿಂದ ಸುಜನಾ ಅವರ ವ್ಯಕ್ತಿತ್ವ ರೂಪುಗೊಂಡಿದೆ. ಅವರ ಪ್ರತಿಯೊಬ್ಬ ಶಿಷ್ಯರ ಮೇಲೂ ಸುಜನಾ ಅವರ ವ್ಯಕ್ತಿತ್ವದ ಪ್ರಭಾವಳಿ ಇದೆ. ಆದರ್ಶ ಅಧ್ಯಾಪಕ, ಶ್ರೇಷ್ಠ ವಿಮರ್ಶಕ ಮತ್ತು ಧೀಮಂತ ಸಾಹಿತಿಯಾಗಿದ್ದ ಸುಜನಾ ದೂರದೃಷ್ಠಿಯ ಯೋಜಕರಾಗಿದ್ದರು. ಸುಜನಾ ಅವರಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಿಗಬೇಕಾದಷ್ಟು ಪ್ರಾತಿನಿಧ್ಯ ದೊರಕಲಿಲ್ಲ ಎಂದರು.

ಸುಜನಾರ ಯುಗಸಂಧ್ಯಾ ಮಹಾಕಾವ್ಯ ಹಾಗೂ ವರ್ತಮಾನದ ಸ್ಥಿತಿಗತಿಗಳನ್ನು ಕುರಿತು ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಎಚ್.ಎಲ್.ಮಲ್ಲೇಶಗೌಡ ಮಾತನಾಡಿದರು. ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಿ.ಎಸ್.ಕೆಂಡಗಣ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕಿ ಎಚ್.ಆರ್.ಸುಜಾತಾ, ಕೀರ್ತಿ ಬೈಂದೂರು, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಕೆ.ಪಿ.ಪ್ರತಿಮಾ, ಐಕ್ಯೂಎಸಿ ಸಂಚಾಲಕ ಜಿ.ಮಧು, ಪ್ರಾಧ್ಯಾಪಕರಾದ ಚೂಡಲಿಂಗಯ್ಯ, ಡಾ.ಪುಟ್ಟಮಾದಪ್ಪ, ವಸಂತಕುಮಾರ್, ನಫೀಜಾ ನಾಯಕವಾಡಿ ಇದ್ದರು.