ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಬೋಧನೆ ಮಾಡಿದರೆ ವೃತ್ತಿಗೆ ಗೌರವ ಬರುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎ.ಎಸ್.ದೇವರಾಜು ಹೇಳಿದರು.ಕೆಂಪಯ್ಯನ ದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಮೃತ ಮಹೋತ್ಸವದ ಅಂಗವಾಗಿ ಹಳೇ ವಿದ್ಯಾರ್ಥಿಗಳ ಸಂಘದಿಂದ ದಿ.ಸ್ಕೂಲ್ ಮಾಸ್ಟರ್ ಚೌಡಶೆಟ್ಟಿ ಮತ್ತು ಬಸವಯ್ಯ ಮಾಸ್ಟರ್ ಅವರ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುನಮನ, ಗುರು ಶಿಷ್ಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕ ಎಂದರೆ ಶಾಲೆಗೆ ಸಮಯಕ್ಕೆ ಸರಿಯಾಗಿ ಬಂದು ಪಾಠ ಮಾಡಿ ಹೋಗುವುದಲ್ಲ. ಮಕ್ಕಳಿಗೆ ಸಮರ್ಪಣಾ ಮನೋಭಾವದಿಂದ ಬೋಧನೆ ಮಾಡಬೇಕು. ಮಕ್ಕಳ ಎಲ್ಲಾ ಚಲನವಲನಗಳನ್ನು ಗಮನಿಸಿ ಗುಣಮಟ್ಟದ ಶಿಕ್ಷಣ ಕೊಡುವ ಜೊತೆಗೆ ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ಹೋಗುವಂತೆ ತಿಳಿವಳಿಕೆ ನೀಡಬೇಕು ಎಂದರು.ಶಾಲೆಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ವಿಷಯದಲ್ಲಿ ಸ್ಪರ್ಧೆ ಇರಬೇಕು. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ತಿದ್ದಿ ದಂಡಿಸಬಹುದು. ಆ ಕ್ಷಣದಲ್ಲಿ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಶಿಕ್ಷಕರು ಏನೇ ಮಾಡಿದರೂ ತಪ್ಪಾಗಿ ಕಂಡರು ಭವಿಷ್ಯದಲ್ಲಿ ಅವರಿಗೆ ಅರಿವಾಗುತ್ತದೆ ಎಂದರು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವು ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೆ ನಮ್ಮ ಹಿರಿಯ ಶಿಕ್ಷಕರು ನಮಗೆ ಮಾಡಿದ ಬೋಧನೆ ಕಾರಣ. ಕೆಂಪಯ್ಯನ ದೊಡ್ಡಿ ಚಿಕ್ಕ ಗ್ರಾಮವಾದರೂ ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರ ಸಹಕಾರದಿಂದ ಒಳ್ಳೆಯ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ರಾಜಕೀಯವನ್ನು ಹೊರತುಪಡಿಸಿ ಎಲ್ಲರೂ ಒಂದಾಗಿ ಗುರುವಂದನ ಕಾರ್ಯಕ್ರಮ ನಡೆಸುತ್ತಿದ್ದಾರೆ. ತುಂಬಾ ಒಳ್ಳೆಯ ಸಂಗತಿ. ಗುರು ಶಿಷ್ಯರ ಸಂಬಂಧ ಯಾವಾಗಲೂ ಈ ರೀತಿ ಚೆನ್ನಾಗಿದ್ದರೆ ಯಾವುದೇ ಸ್ಥಾನದಲ್ಲಿದ್ದರೂ ಅವರಿಗೆ ಗೌರವ ಸಿಗುತ್ತದೆ ಎಂದರು.
ಶಿಕ್ಷಕ ವೃತ್ತಿ ದೇವರ ವರ. ಇದು ಎಲ್ಲರಿಗೂ ಸಿಗುವುದಿಲ್ಲ. ಶಿಕ್ಷಕರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಲೆಕ್ಕಿಸದೆ ಶಾಲೆಗೆ ಬಂದು ಪಾಠ ಮಾಡಿ ನಿಮಗೆ ವಿದ್ಯಾಭ್ಯಾಸ ನೀಡಿದ್ದರಿಂದ ನೀವು ವಿದ್ಯಾವಂತರಾಗಿ ಸಾಮಾಜಿಕವಾಗಿ ಒಳ್ಳೆಯ ಪರಿಪೂರ್ಣ ವ್ಯಕ್ತಿ ಗಳಾಗಿ ರೂಪುಗೊಳ್ಳಲು ಸಾಧ್ಯವಾಗಿದೆ ಎಂದರು.ಸರ್ಕಾರಿ ಶಾಲೆಗಳಲ್ಲಿ ಸರ್ಕಾರದಿಂದ ಎಲ್ಲಾ ಸವಲತ್ತುಗಳು ಸಿಗುತ್ತವೆ. ಎಲ್ ಕೆ ಜಿ ಮತ್ತು ಯುಕೆಜಿ ವಿದ್ಯಾಭ್ಯಾಸ ಕೊಡಲಾಗುತ್ತಿದೆ. ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಡಿ. ಸರ್ಕಾರಿ ಶಾಲೆಗಳಿಗೆ ಸೇರಿಸಿ ಉತ್ತಮ ಶಿಕ್ಷಣದೊಂದಿಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದರು.
ಬೆಂಗಳೂರು ಜಲಮಂಡಳಿ ನಿವೃತ್ತ ಮುಖ್ಯ ಅಭಿಯಂತರ ಎನ್.ಸಿ.ಕಾಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಸೇರಿ ಗುರುಗಳಿಗೆ ಗುರು ನಮನ ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಶಿಕ್ಷಕರು ತಮ್ಮ ಅನುಭವ ಹಂಚಿಕೊಂಡರು.ಕಾರ್ಯಕ್ರಮಕ್ಕೆ ಆಗಮಿಸಿದ ಶಿಕ್ಷಕರನ್ನು 5 ಎತ್ತಿನಗಾಡಿಯಲ್ಲಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾ ನಂದಿ ಜೊತೆ ಕುಣಿತದೊಡನೆ ವೇದಿಕೆಗೆ ಕರೆತರಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ, ನಿವೃತ್ತಿಗೊಂಡ ಶಿಕ್ಷಕರಾದ ಶಿವಲಿಂಗಯ್ಯ, ಜಿ.ಕೆ.ವಿಜಯ್ ಕುಮಾರ್ ಎನ್. ಬಸವರಾಜು, ಎನ್.ಸೌಭಾಗ್ಯ, ಟಿ.ವಿ.ಸುಬ್ರಹ್ಮಣ್ಯ, ನಾಗರಾಜು, ಜ್ಯೋತಿ, ಲಕ್ಷ್ಮಿ, ಸತೀಶ್, ವೀಣಾ ,ಜ್ಯೋತಿ, ವಸಂತ, ಸುಂದರಪ್ಪ, ಪಿ.ಪವಿತ್ರ, ರಾಜೇಶ್ವರಿ, ಎಚ್.ಎಸ್.ನಳಿನಿ, ಎಂ.ರಮ್ಯಾ, ಧನುಶ್ರೀ, ರಚನಾ, ಶರತ್ ಕುಮಾರ್ ಸೇರಿದಂತೆ ಅಗಲಿದ ಗುರು ಚೇತನರ ಕುಟುಂಬಕ್ಕೂ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಸರ್ವ ಸದಸ್ಯರು ಉಪಸಿದ್ದರು.