ಸಾರಾಂಶ
ಚಳ್ಳಕೆರೆ ನಗರದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರರವರ ಕಚೇರಿಯಲ್ಲಿ ಶಿವಮೊಗ್ಗ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಸಚಿವರಿಗೆ ದೀಪಾವಳಿ ಶುಭಾಶಯ ಕೋರಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಇತ್ತೀಚೆಗೆ ಶಿವಮೊಗ್ಗ ಹಾಲು ಒಕ್ಕೂಟ ನೂತನವಾಗಿ ನಂದಿನಿ ಉತ್ಪನ್ನವಾದ ಅಸ್ಸೋರ್ಟೆಡ್ ಸ್ವೀಟ್ಸ್ ಸಿದ್ದಪಡಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರವರಿಗೆ ನೂತನ ಉತ್ಪನ್ನದ ಸಿಹಿ ನೀಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.ಶಿವಮೊಗ್ಗ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಸಚಿವರ ಕಚೇರಿಗೆ ತೆರಳಿ ನಂದಿನಿ ಹೊಸ ಉತ್ಪನ್ನದ ಬಗ್ಗೆ ಮಾಹಿತಿ ನೀಡಿದರಲ್ಲದೆ, ಶಿವಮೊಗ್ಗ ಹಾಲು ಒಕ್ಕೂಟದ ಪ್ರಗತಿಯನ್ನು ಸವಿಸ್ತಾರವಾಗಿ ತಿಳಿಸಿದರು. ಶಿವಮೊಗ್ಗ ಹಾಲುಒಕ್ಕೂಟವೂ ಪ್ರಾರಂಭದ ಹಂತದಲ್ಲಿ 7 ಕೋಟಿ ನಷ್ಟದಲ್ಲಿದ್ದು ಎಲ್ಲರ ಪರಿಶ್ರಮದಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳ ದಕ್ಷತೆ, ಪ್ರಾಮಾಣಿಕತೆ ಕಾರ್ಯದಿಂದ ಒಕ್ಕೂಟ ಲಾಭದತ್ತ ಮುನ್ನಡೆದಿದೆ. ಇತ್ತೀಚಿನ ಮಾಹಿತಿ ಪ್ರಕಾರ ಶಿವಮೊಗ್ಗ ಹಾಲು ಒಕ್ಕೂಟ ಸುಮಾರು 11 ಕೋಟಿ ರು. ಲಾಭವನ್ನು ಗಳಿಸಲಿದೆ ಎಂದು ಅಂದಾಜಿಸಲಾಗಿದೆ ಎಂದರು.
ಶಿವಮೊಗ್ಗ ಹಾಲು ಒಕ್ಕೂಟದ ಪ್ರಗತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇತ್ತೀಚೆಗೆ ತಾನೇ ಕೆಎಂಎಫ್ ಅಧ್ಯಕ್ಷರೊಂದಿಗೆ ಹಾಲು ಉತ್ಪಾದನೆ ಮತ್ತು ಮಾರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ. ಕೆಲವೊಂದು ಅಮೂಲಾಗ್ರ ಬದಲಾವಣೆಗಳನ್ನು ತರಲಾಗಿದೆ. ವಿಶೇಷವಾಗಿ ದಕ್ಷಿಣ ಭಾರತದ ಪುಣ್ಯಕ್ಷೇತ್ರದಲ್ಲಿ ಒಂದಾದ ತಿರುಪತಿಯ ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪವನ್ನು ಉಪಯೋಗಿಸಲಾಗುತ್ತಿದೆ. ಇದು ಲಾಭಗಳಿಸಲು ಹೆಚ್ಚಿಸಹಕಾರಿಯಾಗಿದೆ ಎಂದರು. ಶಿವಮೊಗ್ಗ ಹಾಲುಒಕ್ಕೂಟದ ಅಭಿವೃದ್ದಿಯ ಬಗ್ಗೆ ಎಲ್ಲರೂ ಸೇರಿ ಸಕರಾತ್ಮಕ ಚಿಂತನೆ ನಡೆಸೋಣವೆಂದರು. ಶಿವಮೊಗ್ಗ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಇರ್ಫಾನ್, ಅಭಿಷೇಕ್, ಸುರೇಶ್‌ಬಾಬು, ಮುಂತಾದವರು ಉಪಸ್ಥಿತರಿದ್ದರು.