ಸಾರಾಂಶ
ಕನ್ನಡಪ್ರಭ ವಾರ್ತೆ ನಿಪ್ಪಾಣಿ
ವಿದ್ಯಾ ಸಂವರ್ಧಕ ಮಂಡಳ ಸ್ಥಾಪನೆಯಾಗಿ 65 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಫೆ.2 ರಿಂದ ಒಂದು ವಾರದವರೆಗೆ ವಿವಿಧ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸ್ಥಳೀಯ ವಿಎಸ್‌ಎಂ ಫೌಂಡೇಶನ್ ಚೇರಮನ್ ರುದ್ರಕುಮಾರ ಕೋಠಿವಾಲೆ ಹೇಳಿದರು.ವಿಎಸ್‌ಎಂ ಸಭಾಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾ ಸಂವರ್ಧಕ ಮಂಡಳ ಹಾಗೂ ವಿಎಸ್‌ಎಂ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ನಿತ್ಯ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಫೆ.2ರಂದು ಬೆಳಗ್ಗೆ 10ಕ್ಕೆ ವಿಎಸ್‌ಎಂ ಸೋಮಶೇಖರ ಆರ್.ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ(ವಿಎಸ್‌ಎಂಎಸ್‌ಆರ್‌ಕೆಐಟಿ)ದ ಆವರಣದಲ್ಲಿಯ ವಿಎಸ್‌ಎಂ ಕನ್ವೆನ್ಶನ್ ಹಾಲ್‌ನಲ್ಲಿ ಹಳೆಯ ವಿದ್ಯಾರ್ಥಿಗಳ ಸಮ್ಮೇಳನ ಕಾರ್ಯಕ್ರಮ ನಡೆಯಲಿದ್ದು, ಸಂಸ್ಥೆಯಲ್ಲಿ ಕಲಿತು ದೇಶ-ವಿದೇಶಗಳಲ್ಲಿ ಉನ್ನತ ಸೇವೆಯಲ್ಲಿದ್ದ ವಿದ್ಯಾರ್ಥಿಗಳು ಸಹಿತ ಸುಮಾರು 1500ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೆ ಸ್ಥಳದಲ್ಲಿ ಫೆ.3ರಂದು ಬೆಳಗ್ಗೆ 10ಕ್ಕೆ ದೇಶದ ಪ್ರತಿಷ್ಠಿತ ಕಂಪೆನಿಗಳ ಸಹಕಾರದಿಂದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.ಫೆ.4ರಂದು ಅದೆ ಸ್ಥಳದಲ್ಲಿ ಬೆಳಗ್ಗೆ 10ಕ್ಕೆ ವ್ಯಕ್ತಿತ್ವ ವಿಕಸನ ಕುರಿತು ಇತಿಹಾಸ ವಿದ್ವಾಂಸ, ಲೇಖಕ, ಪ್ರೇರಕ ಭಾಷಣಕಾರ ನಿತೀನ ಬಾನುಗಡೆ ಪಾಟೀಲ ಉಪನ್ಯಾಸ ನೀಡುವರು. ಫೆ.5ರಂದು ಬೆಳಗ್ಗೆ 10ಕ್ಕೆ ಮಂಡಳದ ಹಳೆಯ ಆವರಣದಲ್ಲಿ ವಿವಿಧ ನುರಿತ ಉಪನ್ಯಾಸಕರಿಂದ ಕೆ-ಸಿಇಟಿ, ಜೆಇಇ, ನೀಟ್ ಕ್ರ್ಯಾಕ್ ಮಾಡುವ ಕುರಿತು ವಿದ್ಯಾರ್ಥಿಗಳಿಗಾಗಿ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿದೆ. ಫೆ.6ರಂದು ಬೆಳಗ್ಗೆ 10ಕ್ಕೆ ಹಳೆಯ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಆಯೋಜಿಸಲಾಗಿದೆ. ಫೆ.7ರಂದು ವಿಎಸ್‌ಎಂಎಸ್‌ಆರ್‌ಕೆಐಟಿ ಆವರಣದಲ್ಲಿ 1 ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳಿಂದ ಪಾಲಕರಿಗೆ ಪಾದ ಪೂಜೆ ಜರುಗಲಿದೆ ಎಂದು ತಿಳಿಸಿದರು.ಫೆ.8ರಂದು ಬೆಳಗ್ಗೆ 6ಕ್ಕೆ ಹಳೆಯ ಆವರಣದಿಂದ ವಿಎಸ್‌ಎಂಎಸ್‌ಆರ್‌ಕೆಐಟಿ ಆವರಣದವರೆಗೆ ಭವ್ಯ ಮ್ಯಾರಾಥಾನ್ ಓಟ, ನಂತರ ಅಲ್ಲಿ ಹೊಸ ಟರ್ಫ್ ಮೈದಾನದ ಉದ್ಘಾಟನೆ, ಸಂಜೆ ಹಳೆಯ ಆವರಣದಲ್ಲಿ ಕನ್ನಡದ ಪ್ರಮುಖ ಚಲನಚಿತ್ರ ಗಾಯಕ ರಾಜೇಶ ಕೃಷ್ಣನ್ ಅವರಿಂದ ಕನ್ನಡ ಮತ್ತು ಹಿಂದಿ ಹಾಡುಗಳ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಎಸ್‌ಎಂನ ಎಲ್ಲ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಮಂಡಳದ ಸದಸ್ಯರು, ಹಿತೈಷಿಗಳು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶೋಭೆ ತರಬೇಕು ಎಂದು ಕೋರಿದರು.ಈ ಸಂದರ್ಭದಲ್ಲಿ ಮಂಡಳದ ಅಧ್ಯಕ್ಷ ಚಂದ್ರಕಾಂತ ತಾರಳೆ, ಚೇರಮನ್ ಚಂದ್ರಕಾಂತ ಕೋಠಿವಾಲೆ, ವೈಸ್-ಚೇರಮನ್ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ಹರಿಶ್ಚಂದ್ರ ಶಾಂಡಗೆ, ಭರತ ಕುರಬೆಟ್ಟಿ, ಸಂಜಯ ಮೊಳವಾಡೆ, ಅವಿನಾಶ ಪಾಟೀಲ, ಫೌಂಡೇಶನ್ ಸಂಚಾಲಕ ಸಂತೋಷ ಕೋಠಿವಾಲೆ, ರೋಹನ ಕೋಠಿವಾಲೆ, ವಿನಾಯಕ ಪಾಟೀಲ, ಡಾ.ಸಿದ್ದಗೌಡ ಪಾಟೀಲ, ಡಾ.ನಿಂಗಪ್ಪ ಮಾದಣ್ಣವರ, ಯಲ್ಲಪ್ಪ ಹಂಡಿ, ಜ್ಞಾನದೇವ ನಾಯಿಕ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))