ಸಾರಾಂಶ
ಕುಕನೂರು:
ಅಧಿಕಾರಿಗಳ ಕಾರ್ಯ, ಅಭಿವೃದ್ಧಿ ದೃಷ್ಟಿ ಒಂದಾಗಿದ್ದರೆ ಪ್ರಗತಿ ಸಾಧ್ಯವೆಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ತಾಲೂಕಿನ ಕುಕನೂರ ಹೋಬಳಿ ಗ್ರಾಮ ಪಂಚಾಯಿತಿಗಳವಾರು ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಎರಡು ತಿಂಗಳಿಗೊಮ್ಮೆ ಜರುಗುವ ದಿಶಾ ಸಭೆಯಲ್ಲಿ ಅಧಿಕಾರಿಗಳು ಶೇ.80ರಷ್ಟು ಪ್ರಗತಿ ಕಾರ್ಯ ತೋರಿಸುತ್ತಿದ್ದರು. ಆದರೆ, ಗ್ರಾಮಕ್ಕೆ ಹೋದಾಗ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲವೆಂದು ಗ್ರಾಮಸ್ಥರು ಮನವಿ ಮಾಡುತ್ತಿದ್ದರು. ಆ ನಿಟ್ಟಿನಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ತಾಪಂ ಅಧಿಕಾರಿಗಳು, ಇಲಾಖೆ ತಾಲೂಕಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಇದರಿಂದ ಅಧಿಕಾರಿಗಲ ಕಾರ್ಯ ವೈಖರಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಜೆಜೆಎಂ ಕಾಮಗಾರಿಯಲ್ಲಿ ವಿಳಂಬ ಹಾಗೂ ನೀರು ಪೂರೈಕೆ ಆಗದಿರುವ ಕುರಿತು ಕೆಲ ಗ್ರಾಪಂ ಸದಸ್ಯರು ಪ್ರಸ್ತಾಪಿಸಿದರು. ಗ್ರಾಮಸ್ಥರಿಗೆ ಕುಡಿಯುವ ನೀರು ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.ಕೃಷಿ ಇಲಾಖೆ ಅಡಿ ಗೊಬ್ಬರ, ಬಿತ್ತನೆ ಬೀಜ ವಿತರಣೆ ಸಮಸ್ಯೆ ಆಗದಂತೆ ಬೀಜ ವಿತರಿಸಬೇಕು. ಇದೀಗ ಉತ್ತಮ ಮಳೆ ಸುರಿದಿದ್ದು ಬಿತ್ತನೆ ಬೀಜ ವಿತರಣೆ ಕಾರ್ಯ ಆರಂಭಿಸಬೇಕೆಂದು ಸೂಚಿಸಿದ ಸಂಸದರು, ತೋಟಗಾರಿಕೆ, ಎನ್‌ಆರ್‌ಎಲ್‌ಎ ಯೋಜನೆಯಡಿ ಸೇರಿದಂತೆ ಇತರೆ ಯೋಜನೆಯಡಿ ಸರ್ಕಾರದ ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಿಕೊಳ್ಳಬೇಕು ಎಂದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಆಶ್ರಯ ಇಲ್ಲವರು ದಾಖಲಾತಿ ನೀಡಿದರೆ ಹಂತ-ಹಂತವಾಗಿ ಮನೆ ಮಂಜೂರಾತಿ ನೀಡಲಾಗುವುದು ಎಂದು ಸಂಸದರು ಹೇಳಿದರು. ಈ ಹಿಂದೆ ನೀಡಲಾದ ಆಶ್ರಯ ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ ಎಂದು ಇಟಗಿಯ ಗ್ರಾಪಂ ಸದಸ್ಯ ಗವಿಸಿದ್ದನಗೌಡ ಮುದ್ದಾಬಳ್ಳಿ ಪ್ರಸ್ತಾಪಿಸಿದರು. ಅದಕ್ಕೆ ಸಂಸದರು, ಈ ಬಗ್ಗೆ ಶೀಘ್ರ ಪರಿಹಾರಕ್ಕೆ ಸರ್ಕಾರದ ಹಂತದಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ ಎಂದರು.ಕುಕನೂರು ಪಪಂನ ಸಮಸ್ಯೆಗಳ ಕುರಿತು ಸದಸ್ಯರು ಸಂಸದರ ಎದುರು ಪ್ರಸ್ತಾಪಿಸಿದರು. ಅವುಗಳನ್ನು ತ್ವರಿತಗತಿಯಲ್ಲಿ ಮಾಡಲು ಪಪಂ ಮುಖ್ಯಾಧಿಕಾರಿಗೆ ಸೂಚಿಸಿದರು.
ತಾಪಂ ಇಒ ಸಂತೋಷ ಬಿರಾದರ್ ಪಾಟೀಲ್, ಉಪ ತಹಸೀಲ್ದಾರ್ ಮುರಳಿಧರ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ತಾಪಂ ಸಿಬ್ಬಂದಿ ಇದ್ದರು.