ಆಧ್ಯಾತ್ಮದ ಆಚರಣೆಯಿಂದ ದೇಶದ ಪ್ರಗತಿ ಸಾಧ್ಯ: ಸ್ವಾಮಿ ಜಪಾನಂದ ಶ್ರೀ

| Published : Jul 05 2024, 12:53 AM IST

ಸಾರಾಂಶ

ಆಧ್ಯಾತ್ಮ, ಅಕ್ಷರ, ಆರೋಗ್ಯ ಆಚರಣೆಯಲ್ಲಿದ್ದಾಗ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಜಿ ಮಹಾರಾಜ್‌ ಅಭಿಪ್ರಾಯಪಟ್ಟರು. ಮಧುಗಿರಿಯಲ್ಲಿ ಕುಡಿಯುವ ನೀರಿನ ಘಟಕ ಹಾಗೂ ದೂರ ತರಂಗ ಶಿಕ್ಷಣ ಯೋಜನೆ ಉದ್ಘಾಟಿಸಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನೀರಿನ ಘಟಕ ಉದ್ಘಾಟನೆ । ದೂರ ತರಂಗ ಶಿಕ್ಷಣ ಯೋಜನೆ ಆರಂಭ

ಕನ್ನಡಪ್ರಭ ವಾರ್ತೆ ಮಧುಗಿರಿ

ಆಧ್ಯಾತ್ಮ, ಅಕ್ಷರ, ಆರೋಗ್ಯ ಆಚರಣೆಯಲ್ಲಿದ್ದಾಗ ಮಾತ್ರ ದೇಶ ಪ್ರಗತಿ ಕಾಣಲು ಸಾಧ್ಯ ಎಂದು ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಜಿ ಮಹಾರಾಜ್‌ ಅಭಿಪ್ರಾಯಪಟ್ಟರು.

ಪಟ್ಟಣದ ಎಂಜಿಎಂ ಬಾಲಿಕಾ ಪ್ರೌಢಶಾಲೆಯಲ್ಲಿ ಬುಧವಾರ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ದೂರ ತರಂಗ ಶಿಕ್ಷಣ ಯೋಜನೆ ಉದ್ಘಾಟಿಸಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಇಂದಿನ ಪೋಷಕರು ತಮ್ಮ ಮಕ್ಕಳು ಡಾಕ್ಟರ್‌, ಎಂಜಿನಿಯರ್, ಆಡಿಟರ್‌ ಹೀಗೆ ಹತ್ತಾರು ಲಾಭದಾಯಕ ಹುದ್ದೆಗಳನ್ನು ಪಡೆದು ಹೆಚ್ಚು ಸಂಪಾದನೆ ಮಾಡಬೇಕೆಂದು ಬಯಸುತ್ತಾರೆಯೇ ಹೊರತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ತನ್ನ ಏಳಿಗೆ ಮತ್ತು ಸಮಾಜದ ಏಳಿಗೆ ಆಗಬೇಕೆಂದು ಬಯಸುತ್ತಿಲ್ಲ ಎಂದು ವಿಷಾದಿಸಿದರು.

ಪೋಷಕರು ಮಕ್ಕಳಿಗೆ ಇತಿಹಾಸ, ಧರ್ಮ, ಆಚಾರ-ವಿಚಾರ, ಆದರ್ಶ ಮಹನೀಯರ ಜೀವನ ಚರಿತ್ರೆಗಳನ್ನು ಮಾದರಿಯಾಗಿ ಇಟ್ಟುಕೊಂಡು ಅವರ ಜೀವನದ ತತ್ವಾದರ್ಶಗಳನ್ನು ಪರಿಚಯಿಸದಿರುವುದು ನೋವಿನ ಸಂಗತಿಯಾಗಿದೆ. ವಿದ್ಯಾರ್ಥಿಗಳು ಇಂದಿನ ಸಿನಿಮಾ ನಟರು, ಕ್ರಿಕೆಟ್‌ ಆಟಗಾರರನ್ನು ಆದರ್ಶ ವ್ಯಕ್ತಿಗಳನ್ನಾಗಿರಿಸಿಕೊಂಡು ಬದುಕುತ್ತಿರುವುದು ಕಂಡು ಬರುತ್ತಿದೆ. ಇದನ್ನು ಗಮನಿಸಿದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ ಎನ್ನುವುದು ಇದರಿಂದ ತಿಳಿಯುತ್ತದೆ. ಪೋಷಕರು ಮಾನವೀಯ ಧರ್ಮ, ತತ್ವ, ಮಾನವೀಯತೆಯ ವಿಚಾರ ಧಾರೆಗಳನ್ನು ಮನೆಯಲ್ಲಿ ಕಲಿಸುವುದು ಅತಿ ಮುಖ್ಯ ಎಂದರು.

ನಮ್ಮ ದೇಶವನ್ನು ಆಂತರಿಕವಾಗಿ ಕಾಪಾಡುತ್ತಿರುವ ರೈತರು ಮತ್ತು ದೇಶದ ಗಡಿಗಳಲ್ಲಿ ದೇಶದ ಭದ್ರತೆಗಾಗಿ ಹೋರಾಡುತ್ತಿರುವ ಸೈನಿಕರ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಈ ಇಬ್ಬರನ್ನು ಅವರ ತತ್ವದಾರ್ಶಗಳನ್ನು ಪಾಲಿಸದಿದ್ದಲ್ಲಿ ದೇಶ ಪ್ರಗತಿ ಕಾಣದು. ಮಕ್ಕಳು ಜೈ ಜವಾನ್‌ ಜೈ ಕಿಸಾನ್‌ ಎಂಬ ಮಾತನ್ನು ಮರೆಯದೇ ದೇಶ ಮತ್ತು ರೈತರ ರಕ್ಷಣೆಗೆ ಬದ್ಧರಾಗಿ ಎಂದರು.

ವಿದ್ಯಾರ್ಥಿಗಳಿಗೆ ದೇಶದ ಏಳಿಗೆಗ ಕಂಕಣ ಬದ್ಧರಾಗುವ ಶಿಕ್ಷಣವನ್ನು ಆಡಳಿತ ಮಂಡಳಿ ನೀಡಿ ಪ್ರೋತ್ಸಾಹಿಸಬೇಕು. ಬಾಲ್ಯದಲ್ಲಿಯೇ ಮಕ್ಕಳಿಗೆ ಭವಿಷ್ಯದ ಭಾರತ ಮುನ್ನಡೆಸುವ ಶಕ್ತಿ ಕೊಡಬೇಕು. ಪ್ರತಿ ವಿದ್ಯಾರ್ಥಿ ಈ ದೇಶದ ಸಂಸ್ಕೃತಿಯನ್ನು ಸಾಕಾರಗೊಳಿಸಬೇಕು ಎಂದರು. ಈ ವಿದ್ಯಾ ಸಂಸ್ಥೆ ಬೃಹದಾಕರವಾಗಿ ಬೆಳೆಯಲು ಅಗತ್ಯವಾದ ಸಹಕಾರ ನೀಡಿ, ಭೂಮಿ ಮಂಜೂರು ಮಾಡಿಸುವಂತೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ನಾಹಿದ ಝಂಝಂ ಮಾತನಾಡಿ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಶೈಕ್ಷಣಿಕ ಸ್ಪರ್ದೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುತ್ತಿರುವ ಶಾಲಾ ಆಡಳಿತ ಮಂಡಳಿಯ ಕಾರ್ಯ ಶ್ಲಾಘನೀಯ. ವಿದ್ಯಾರ್ಥಿಗಳು ಪೋಷಕರ ಕನಸು ನನಸುಗೊಳಿಸಿ ಶಿಕ್ಷಕ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಚನ್ನಾಗಿ ಓದಿ ಮುಂದೆ ಬನ್ನಿ ಎಂದರು.

ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಂ.ಎಸ್‌. ಶಂಕರನಾರಾಯಣ್‌ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಬಿಇಒ ಕೆ.ಎನ್‌.ಹನುಮಂತರಾಯಪ್ಪ, ಪುರಸಭೆ ಮುಖ್ಯಾಧಿಕಾರಿ ಸುರೇಶ್‌, ಸದಸ್ಯರಾದ ಸುಜಾತ, ಖಜಾಂಚಿ ಡಿ.ಜಿ. ಶಂಕರನಾರಾಯಣ ಶ್ರಿಷ್ಟಿ, ನಿರ್ದೇಶಕರಾದ ಡಿ.ಎಸ್‌. ನಟರಾಜು, ಎಂ.ಎಸ್‌. ಸಂದೀಪ್‌, ಮುಖ್ಯ ಶಿಕ್ಷರಾದ ಚೇತನ ಕುಮಾರಿ, ನಾಗರಾಜು, ಸೇವಾಶ್ರಮದ ಸಂಯೋಜಕ ಎಚ್‌.ಆರ್‌. ಶಶಿಕುಮಾರ್‌, ವಿದ್ಯಾರ್ಥಿಗಳಿದ್ದರು.