ಸಾಂವಿಧಾನಿಕ ಮೌಲ್ಯಗಳ ಸಾಕಾರದಿಂದ ಪ್ರಗತಿ: ಗುರುರಾಜಪ್ಪ

| Published : May 06 2024, 12:30 AM IST

ಸಾಂವಿಧಾನಿಕ ಮೌಲ್ಯಗಳ ಸಾಕಾರದಿಂದ ಪ್ರಗತಿ: ಗುರುರಾಜಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಈ ದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬಹುಸಂಖ್ಯಾತ ಸಮುದಾಯದವರು ಸಂವಿಧಾನದ ಮಹತ್ವವನ್ನು ಅರ್ಥಮಾಡಿಕೊಂಡು, ಸಂವಿಧಾನದಲ್ಲಿ ಅಡಕವಾಗಿರುವ ಮಹತ್ವದ ಅಂಶಗಳನ್ನು ಯಥಾವತ್ತಾಗಿ ಜಾರಿ ಮಾಡಲು ಆಳುವ ಸರ್ಕಾರಗಳಿಗೆ ಹೋರಾಟದ ಮೂಲಕ ಒತ್ತಾಯಿಸುವುದು ಅಗತ್ಯ. ಕಾಲಹರಣ ಮಾಡಿದಲ್ಲಿ ಮುಂದಿನ ಬದುಕು ಸುಗಮವಾಗುವುದಿಲ್ಲ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಸಾಂವಿಧಾನಿಕ ಮೌಲ್ಯಗಳು ಬಿಕ್ಕಟ್ಟಿನಲ್ಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಆತಂಕಗಳು ಎದುರಾಗುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಆಶಯಗಳ ಸಾಕಾರ ಆಳುವ ಸರ್ಕಾರಗಳ ಗುರಿಯಾಗಬೇಕು ಎಂದು ದೊಡ್ಡಬಳ್ಳಾಪುರ ತಾಲೂಕು ಛಲವಾದಿ ಮಹಾಸಭಾದ ಅಧ್ಯಕ್ಷ ಗುರುರಾಜಪ್ಪ ಹೇಳಿದರು.

ತಾಲೂಕಿನ ಹಣಬೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಮಿಕರ ದಿನಾಚರಣೆ ಹಾಗೂ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ ಜನ್ಮದಿನ ‘ಭೀಮೋತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬಹುಸಂಖ್ಯಾತ ಸಮುದಾಯದವರು ಸಂವಿಧಾನದ ಮಹತ್ವವನ್ನು ಅರ್ಥಮಾಡಿಕೊಂಡು, ಸಂವಿಧಾನದಲ್ಲಿ ಅಡಕವಾಗಿರುವ ಮಹತ್ವದ ಅಂಶಗಳನ್ನು ಯಥಾವತ್ತಾಗಿ ಜಾರಿ ಮಾಡಲು ಆಳುವ ಸರ್ಕಾರಗಳಿಗೆ ಹೋರಾಟದ ಮೂಲಕ ಒತ್ತಾಯಿಸುವುದು ಅಗತ್ಯ. ಕಾಲಹರಣ ಮಾಡಿದಲ್ಲಿ ಮುಂದಿನ ಬದುಕು ಸುಗಮವಾಗುವುದಿಲ್ಲ ಎಂದು ಕಿವಿ ಮಾತು ಹೇಳಿದರು.

ಆರಕ್ಷಕ ನಿರೀಕ್ಷಕ ಮಂಜುನಾಥ್ ಮಾತನಾಡಿ, ಶ್ರೇಣೀಕೃತ ಸಮಾಜದಲ್ಲಿ ಶೂದ್ರ ಸಮುದಾಯಗಳು ಇಂದಿಗೂ ತಮ್ಮ ಹಕ್ಕುಗಳಿಗಾಗಿ ಹೋರಾಟಗಳನ್ನು ನಡೆಸುತ್ತಲೇ ಇವೆ. ಸಮ ಸಮಾಜ ನಿರ್ಮಾಣ ಎಲ್ಲರ ಆದ್ಯತೆಯಾಗಬೇಕು. ಸಾಂವಿಧಾನಿಕ ವಿಚಾರಗಳ ಸಾರ್ವತ್ರೀಕರಣದಿಂದ ಪ್ರಗತಿ ಸಾಧ್ಯ ಎಂಬುದನ್ನು ಜನರಲ್ಲಿ ಮನವರಿಕೆ ಮಾಡಿಕೊಡುವುದು ಅಗತ್ಯ ಎಂದರು.

ಭಾರತೀಯ ಮೂಲನಿವಾಸಿ ಒಕ್ಕೂಟದ ಮುಖ್ಯಸ್ಥ, ಭಗವಾನ್ ಬುದ್ಧರ ಉಪಾನ್ಯಾಸಕ ಕುಂದಾಣದ ಸಿದ್ಧಾರ್ಥ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಗವಾನ್ ಬುದ್ಧರ ಚಿಂತನೆಗಳನ್ನು ನಮ್ಮಜೀವನದಲ್ಲಿ ಅಳವಡಿಸಿಕೊಳ್ಳದೇ ಇದ್ದರೆ ಬದುಕು ಸಾರ್ಥಕವಾಗುವುದಿಲ್ಲ ಮತ್ತು ಧರ್ಮ ಸಿಗುವುದಿಲ್ಲ. ಧರ್ಮ ಅಂದರೆ ಸತ್ಯ, ಪ್ರೀತಿ, ಜ್ಞಾನ, ಬದುಕು ಪ್ರಾಮಾಣಿಕ ಜೀವನ ಎಂದರ್ಥ. ಭಗವಾನ್ ಬುದ್ಧರ ಅಷ್ಟಾಂಗ ಮಾರ್ಗಗಳು ನಮ್ಮ ಬದುಕಿನ ಗುರಿಯಗಬೇಕು ಎಂದು ಪ್ರತಿಪಾದಿಸಿದರು.

ಮುಖಂಡ ನಾರಾಯಣಸ್ವಾಮಿ ಮಾತನಾಡಿದರು. ಛಲವಾದಿ ಮಹಾಸಭಾದ ತಾಲೂಕು ಪ್ರಧಾನ ಕಾರ್ಯದರ್ಶಿ ಡಿಎನ್ಎಲ್ಎನ್ ಮೂರ್ತಿ, ಮಾಳವ ನಾರಾಯಣ್, ಹಣಬೆ ಗ್ರಾಪಂ ಸದಸ್ಯರಾದ ಹರೀಶ್, ಮುನೇಗೌಡ, ವೆಂಕಟೇಶ್ ಮೂರ್ತಿ, ಜಗದೀಶ್, ಗಂಗಪ್ಪ, ಮುನಿಯಪ್ಪ, ರಮೇಶ್ ಉಪಸ್ಥಿತರಿದ್ದರು. ಅಂಬೇಡ್ಕರ್ ರವರ ಭಾವಚಿತ್ರವನ್ನು ಬೆಳ್ಳಿ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು.