ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ
ರೈತರಿಗೆ ಗುಣಮಟ್ಟದ ವಿದ್ಯುತ್, ನೀರಾವರಿ ಸೌಲಭ್ಯ ಮತ್ತು ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವ ಜೊತೆಗೆ ರೈತನ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದಲ್ಲಿ ನಿಶ್ಚಿತವಾಗಿಯೂ ರೈತನ ಬಾಳು ಬಂಗಾರವಾಗುತ್ತದೆ. ಈ ನಿಟ್ಟಿನಲ್ಲಿ ಕಾಗವಾಡ ಮತ್ತು ಅಥಣಿ ಮತಕ್ಷೇತ್ರದ ರೈತರಿಗೆ ಈ ಎಲ್ಲ ಸೌಲಭ್ಯಗಳನ್ನು ಕೆಲವೇ ಅವಧಿಯಲ್ಲಿಯೇ ನೀಡಲು ಶ್ರಮಿಸುವುದಾಗಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.ಕಾಗವಾಡ ಮತಕ್ಷೇತ್ರದಲ್ಲಿ ಒಟ್ಟು 11 ಕೆರೆ ತುಂಬುವ ಯೋಜನೆಯ ಮೊದಲನೇ ಹಂತದ ₹138.81 ಕೋಟಿ ಅನುದಾನದ ಕಾಮಗಾರಿಗೆ ಗುಂಡೇವಾಡಿ ಗ್ರಾಮದಲ್ಲಿ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಸಂಪೂರ್ಣ ಕಾಗವಾಡ ಮತ್ತು ಅಥಣಿ ಕ್ಷೇತ್ರವನ್ನು ನೀರಾವರಿಗೆ ಒಳಪಡಿಸಿ, ರೈತರಿಗೆ ಅನುಕೂಲು ಮಾಡಿಕೊಡಲಾಗುವುದೆಂದರು.
ಈಗಾಗಲೇ ಕರಿ ಮಸೂತಿ ಏತ ನೀರಾವರಿ ಯೋಜನೆ ಮೂಲಕ ಪೂರ್ವ ಭಾಗಕ್ಕೆ ನೀರಾವರಿ ಕಲ್ಪಿಸಲಾಗಿದೆ. ಈ ಯೋಜನೆಯಿಂದ ವಂಚಿತವಾಗಿರುವ ಪ್ರದೇಶಕ್ಕೆ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಮೂಲಕ ನೀರೋದಗಿಸಲಾಗುವುದೆಂದರು.ಕಾರ್ಯಕ್ರಮದ ಅಧ್ಯಕ್ಷತೆ ವಾಯುವ್ಯ ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ, ಹಾಗೂ ಕಾಗವಾಡ ಶಾಸಕ ರಾಜು ಕಾಗೆವಹಿಸಿ, ಮತಕ್ಷೇತ್ರದ ಮತದಾರರ ಋಣ ತೀರಿಸಲು ಕೆರೆ ತುಂಬುವ ಯೋಜನೆಗೆ ಚಾಲನೆ ನೀಡುತ್ತಿರುವೆ. ಹೊರತು ರಾಜಕೀಯ ಲಾಭಕ್ಕಾಗಿ ಅಥವಾ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಅಲ್ಲ. ಸ್ವಾತಂತ್ರ್ಯದ ನಂತರ ಇಲ್ಲಿಯ ವರೆಗೂ ಉತ್ತರ ಭಾಗದ ಗ್ರಾಮಗಳಿಗೆ ಕುಡಿಯಲೂ ಕೂಡ ನೀರು ಕೊಡಲು ಸಾಧ್ಯವಾಗಿರಲ್ಲ. ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯಿಂದ ವಂಚಿತಗೊಂಡ ಗ್ರಾಮಗಳಾದ ಅನಂತಪುರ, ಗುಂಡೇವಾಡಿ, ಪಾರ್ಥನಹಳ್ಳಿ, ಚಮಕೇರಿ, ಬೇಡರಹಟ್ಟಿ, ಬಳ್ಳಿಗೇರಿ, ಮಲಾಬಾದ, ಬೆವನೂರ ಗ್ರಾಮದ 11 ಕೆರೆಗಳನ್ನು ಈ ಯೋಜನೆಯಲ್ಲಿ ತುಂಬಿಸಲಾಗುವುದು ಎಂದು ಜೊತೆಗೆ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಬಸವೇಶ್ವರ ಏತ ನೀರಾವರಿ ಯೋಜನೆಯ ಕಮಾಂಡ ಏರಿಯಾಕ್ಕೆ ಒಳಪಡುವ ಕೆರೆಗಳನ್ನು ಕೆರೆ ತುಂಬುವ ಯೋಜನೆಯಿಂದ ಕೈ ಬಿಟ್ಟು, ಆ ಕೆರೆಗಳನ್ನು ಬಸವೇಶ್ವರ ಏತ ನೀರಾವರಿ ಯೋಜನೆಯ ಮೂಲಕ ತುಂಬಿಸುತ್ತೇವೆ ಎಂದರು. ಕಾಗವಾಡ ಮತಕ್ಷೇತ್ರದ ಅನಂತಪೂರ ಗ್ರಾಮದ 2, ಗುಂಡೇವಾಡಿಗ್ರಾಮದ 2, ಪಾರ್ಥನಹಳ್ಳಿ ಗ್ರಾಮದ 2, ಚಮಕೇರಿ ಗ್ರಾಮದ 1, ಬೇಡರಹಟ್ಟಿ ಗ್ರಾಮದ 1, ಬಳ್ಳಿಗೇರಿ ಗ್ರಾಮದ 1, ಮಲಾಬಾದ ಗ್ರಾಮದ 1, ಬೇವನೂರ ಗ್ರಾಮದ 1, ಕೆರೆಗಳನ್ನು ಈ ಯೋಜನೆಯಲ್ಲಿ ಒಳಪಡಲಿವೆ ಎಂದು ರಾಜು ಕಾಗೆ ಹೇಳಿದರು.ನೀರಾವರಿ ಇಲಾಖೆ ಅಧಿಕಾರಿ ಪ್ರವೀಣ ಹುಣಸಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೆರೆ ತುಂಬುವ ಯೋಜನೆಗೆ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಹತ್ತಿರದ ಕೃಷ್ಣಾ ನದಿಯ ಎಡದಂಡೆಯಿಂದ 0.21 ಟಿಎಂಸಿ ನೀರನ್ನು ಎತ್ತಿ 11 ಕೆರೆಗಳನ್ನು ತುಂಬಿಸಲಾಗುವುದು. ಈ ಯೋಜನೆ ಪೂರ್ಣಗೊಳ್ಳಲು ರೈತರ ಸಹಕಾರ ಅತ್ಯಗತ್ಯ. 960 ಎಚ್‌ಪಿ ಮೂರು ಪಂಪಗಳನ್ನು ಅಳವಡಿಸುವ ಮೂಲಕ ಮತ್ತು 33 ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಿಸಿ 11 ಕೆರೆಗಳಿಗೆ ನೀರು ತುಂಬಿಸುತ್ತೇವೆ ಎಂದರು. ಸಭೆಯಲ್ಲಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ, ಧುರೀಣರಾದ ಚಂದ್ರಕಾಂತ ಇಮ್ಮಡಿ, ಸಾಮಾಜಿ ಕಾರ್ಯಕರ್ತರು ಹಾಗೂ ಖ್ಯಾತ ವೈದ್ಯರಾದ ಡಾ.ಸಿ.ಎ. ಸಂಕ್ರಟ್ಟಿ, ಶಿವು ಗುಡ್ಡಾಪೂರ ಸೇರಿದಂತೆ ಅನೇಕರು ಮಾತನಾಡಿದರು.
ಈ ವೇಳೆ ಗುತ್ತಿಗೆದಾರ ಅಶೋಕ ಕಪ್ಪಲಗುದ್ದಿ, ಅಕ್ಷಯ ಕಪ್ಪಲಗುದ್ದಿ, ನೀರಾವರಿ ಇಲಾಖೆಯ ಪ್ರಶಾಂತ ಪೋತದಾರ, ಬಸವರಾಜ ಗಲಗಲಿ, ಮುಖಂಡರಾದ ರಫೀಕ ಪಟೇಲ, ಗುಳಪ್ಪ ಜತ್ತಿ, ಶಿವಾನಂದ ಗೋಲಬಾಂವಿ, ವಿನಾಯಕ ಬಾಗಡಿ, ಶಂಕರ ವಾಘಮೋಡೆ, ಮಹಾದೇವ ಗುಂಜಿಗಾಂವಿ, ಡಾ.ಆನಂದ ಗುಂಜಿಗಾಂವಿ, ಸಿದ್ದರಾಯ ತೇಲಿ, ರಾಜು ಗುಡೋಡಗಿ, ಕುಮಾರ ಪಾಟೀಲ, ಮಲ್ಲಿಕಾರ್ಜುನ ದಳವಾಯಿ, ಬಸನಗೌಡ ಪಾಟೀಲ (ಬಮ್ನಾಳ) ಕೆ.ಆರ್.ಪಾಟೀಲ, ಮಹಾಂತಯ್ಯ ಹಿರೇಮಠ, ಸುರೇಶ ಮೆಂಡಿಗೇರಿ, ರಾಜು ಮದಬಾಂವಿ ಸೇರಿ 11 ಗ್ರಾಮಗಳ ರೈತರು, ಮುಖಂಡರು, ಗ್ರಾಮಸ್ಥರು, ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))