ಚಿತ್ರದುರ್ಗ ಶಾಖಾ ಕಾಲುವೆಗೆ ಭದ್ರಾ ಜಲಾಶಯದಿಂದ ಪ್ರಾಯೋಗಿಕವಾಗಿ 3 ಟಿಎಂಸಿ ಯೋಜನೆಗೆ ಚಾಲನೆ ನೀಡಿರುವುದು ಅತ್ಯಂತ ಸಂತಸದ ವಿಷಯ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಚಿತ್ರದುರ್ಗ ಶಾಖಾ ಕಾಲುವೆಗೆ ಭದ್ರಾ ಜಲಾಶಯದಿಂದ ಪ್ರಾಯೋಗಿಕವಾಗಿ 3 ಟಿಎಂಸಿ ಯೋಜನೆಗೆ ಚಾಲನೆ ನೀಡಿರುವುದು ಅತ್ಯಂತ ಸಂತಸದ ವಿಷಯ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ತಿಳಿಸಿದರು.ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಯೋಜನೆಗೆ ಭದ್ರಾ ಮೇಲ್ದಂಡೆ ಯೋಜನೆ ಇನ್ ಟೇಕ್ ಪಾಯಿಂಟ್‌ನಲ್ಲಿ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, 7 ದಶಕಗಳ ಹೋರಾಟದ ಫಲ ಇಂದು ಸಾಕಾರ ಆಗಿದೆ. ಇದಕ್ಕಾಗಿ ಹೋರಾಡಿದ ಎಲ್ಲ ಮಹನೀಯರು, ಸಂಘಗಳು, ಸಂಘಟನೆಗಳಿಗೆ, ಸಹಕರಿಸಿದ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗೆ, ಉಸ್ತುವಾರಿ ಸಚಿವರಿಗೆ, ರೈತರಿಗೆ ಕೃತಜ್ಞತೆ ಸಲ್ಲುಸುತ್ತೇನೆ ಎಂದರು.
ಈ ಯೋಜನೆಯಿಂದ ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಹಾಗೂ ದಾವಣಗೆರೆ ಸಹಿತ 4 ಜಿಲ್ಲೆಯ 12 ತಾಲೂಕುಗಳಿಗೆ ನೀರು ಲಭಿಸಲಿದೆ. ತುಂಗಾದಿಂದ 17.4 ಭದ್ರಾಗೆ ಲಿಫ್ಟ್ ಮಾಡಿ, ಭದ್ರಾದಿಂದ 12.5 ಟಿಎಂಸಿ ಒಟ್ಟು 29.9 ಟಿಎಂಸಿ ನೀರನ್ನು ಲಿಫ್ಟ್ ಮಾಡಲಾಗುವುದು ಎಂದರು.ಪ್ರಾಯೋಗಿಕವಾಗಿ 3 ಟಿಎಂಸಿ ನೀರು ಬಿಡುಗಡೆ: ನೀರಾವರಿ ಯೋಜನೆಯಡಿ ಪ್ರಾಯೋಗಿಕವಾಗಿ 3 ಟಿಎಂಸಿ ನೀರನ್ನು ಮಾತ್ರ ಬಿಡುಗಡೆ ಮಾಡಲು ನೀರಾವರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಈ ಯೋಜನೆಯು ಒಟ್ಟು 367 ಕೆರೆಗಳಿಗೆ ನೀರು ತುಂಬಿಸುವ ಹಾಗೂ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಒದಗಿಸುವ ಉದ್ದೇಶ ಹೊಂದಿದೆ. ಆದರೆ, ಪ್ರಸ್ತುತ ಹನಿ ನೀರಾವರಿ ಯೋಜನೆಯ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಮತ್ತು ಕೆರೆಗಳಿಗೆ ನೀರು ತುಂಬಿಸುವ ಕೆಲಸವೂ ಭಾಗಶಃ ಮಾತ್ರವಾಗಿದೆ. ಆದ್ದರಿಂದ, ಪ್ರಾಯೋಗಿಕವಾಗಿ ಪ್ರಸ್ತುತ 3 ಟಿಎಂಸಿಗೆ ಮಾತ್ರ ಸೀಮಿತವಾಗಿ ನೀರು ಹರಿಸಲಾಗುತ್ತಿದೆ. ಮುಂದೆ ಇದು ಶಾಶ್ವತ ಯೋಜನೆಯಾಗಲಿದೆ ಎಂದರು.
ಇನ್ನೂ ಬೆಳೆಗಳಿಗೆ ಸಂಪೂರ್ಣ ನೀರಾವರಿ ಸೌಲಭ್ಯ ಕಲ್ಪಿಸಿಲ್ಲ ಹಾಗೂ ನೀರು ಎತ್ತುವ (ಲಿಫ್ಟ್) ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಮುಂದಿನ ಹಂತದ ಯೋಜನೆಗಳು ಜಾರಿಯಾಗಲಿವೆ. ಅಲ್ಲಿಯವರೆಗೆ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಸಹಕರಿಸಬೇಕು ಹಾಗೂ ಈ ಯೋಜನೆಯ ಸದುಪಯೋಗ ಪಡೆಯಬೇಕೆಂದು ಕೋರಿದರು.ಚಿತ್ರದುರ್ಗ ಕ್ಷೇತ್ರದ ಶಾಸಕ ಕೆ.ವೀರೇಂದ್ರ ಪಪ್ಪಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಣ್ಣ, ಶಿರಾ ಶಾಸಕ ಟಿ.ಬಿ.ಜಯಚಂದ್ರ, ತರೀಕೆರೆ ಶಾಸಕ ಶ್ರೀನಿವಾಸ್, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಜನ ಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು.