ಸಾರಾಂಶ
-ಕನ್ನಡಪ್ರಭ ವರದಿಗೆ ಸಿಎಂ ಕಚೇರಿ ಸ್ಪಂದನೆ । 65 ಲಕ್ಷ ರು.ಗಳ ಯೋಜನೆ ಜಾರಿಗೆ ಕ್ರಮ । ತಕ್ಷಣಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆ
-ಕಬ್ಬಿಣದ ಬುಟ್ಟೀಲಿ ಕುಳಿತು ಸ್ನಾನ, ಅದೇ ನೀರು ಬಟ್ಟೆ ಸ್ವಚ್ಛತೆಗೆ ಬಳಕೆಗೆ ಶೀರ್ಷಿಕೆಯಡಿ ವರದಿ----
ಕನ್ನಡಪ್ರಭ ವಾರ್ತೆ ಯಾದಗಿರಿಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಯಕ್ತಾಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಮಾ.5 ರಂದು ಕನ್ನಡಪ್ರಭದಲ್ಲಿ "ಕಬ್ಬಿಣದ ಬುಟ್ಟೀಲಿ ಕುಳಿತು ಸ್ನಾನ, ಅದೇ ನೀರು ಬಟ್ಟೆ ಸ್ವಚ್ಛತೆಗೆ ಬಳಕೆಗೆ "ಶೀರ್ಷಿಕೆಯಡಿ ಪ್ರಕಟಗೊಂಡಿದ್ದ ವಿಶೇಷ ವರದಿಗೆ ಸ್ಪಂದಿಸಿದ ಮುಖ್ಯಮಂತ್ರಿಯವರ ಸಚಿವಾಲಯದ, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ. ವೈಷ್ಣವಿ, ಈ ಕುರಿತು ಪರಿಶೀಲಿಸಿ ಕೈಗೊಂಡ ಕ್ರಮದ ಬಗ್ಗೆ ತಕ್ಷಣವೇ ವರದಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಭೇಟಿ ನೀಡಿದ್ದ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಹಾಗೂ ಮತ್ತಿತರ ಅಧಿಕಾರಿಗಳ ತಂಡ, ಯಕ್ತಾಪುರ ಸೇರಿದಂತೆ ಸುತ್ತಮುತ್ತಲಿನ 12 ಗ್ರಾಮಗಳಿಗೆ ನಾರಾಯಣಪುರ ಜಲಾಶಯದಿಂದ ನೀರನ್ನು ಎತ್ತಿ, ಕಾಲುವೆಗಳ ಮೂಲಕ ಶಾಶ್ವತ-ನಿರಂತರ ಕುಡಿಯುವ ನೀರಿನ ಯೋಜನೆ ರೂಪಿಸಿದ್ದ ಬಗ್ಗೆ ಹಾಗೂ ತಾತ್ಕಾಲಿಕವಾಗಿ ತುರ್ತುಕ್ರಮಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನಡಿ 65 ಲಕ್ಷ ರು.ಗಳ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ನೀಡಿದ್ದಾರೆ.
ಯಕ್ತಾಪುರ ಗ್ರಾಮದ ಆಶ್ರಯ ಕಾಲೋನಿ, ಕಸ್ತೂರ್ ಬಾ ವಸತಿ ಶಾಲೆ ಹಾಗೂ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಸುತ್ತಮುತ್ತ 13ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕುರಿತು ಮಾ.5 ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡಿದ್ದ ವರದಿ ಸಂಚಲನ ಮೂಡಿಸಿತ್ತು. ವರದಿ ಬೆನ್ನಲ್ಲೇ, ಮಾ. 6 ರಂದು ಗ್ರಾಮಕ್ಕೆ ತೆರಳಿದ್ದ ಜಿಲ್ಲಾ ಪಂಚಾಯತ್ ಸಿಇಒ ಲವೀಶ ಒರಡಿಯಾ, ಕೈಗೊಂಡ ಕ್ರಮಗಳ ಬಗ್ಗೆ ಸಿಎಂ ಕಚೇರಿಗೆ ವರದಿ ನೀಡಿದ್ದಾರೆ.ನೀರು ಪೂರೈಕೆ ವಿಚಾರವಾಗಿ ಅಲ್ಲಿ ಕಂಡು ಬಂದ ಸಮಸ್ಯೆಗಳು, ಜಲಮೂಲದ ಅಭಾವ, ಇದನ್ನು ನೀಗಿಸಲು ಟ್ಯಾಂಕರ್ ಮೂಲಕ ದಿನಂಪ್ರತಿ ಶುದ್ಧ ನೀರು ಸರಬರಾಜು, ಖಾಸಗಿ ಬೋರ್‌ವೆಲ್‌ಗಳ ಗುರುತಿಸಿ ಅಲ್ಲಿಂದ ಜನರಿಗೆ ನೀರು ಪೂರೈಕೆ ಕುರಿತು ಭೇಟಿ, ವರದಿಯಲ್ಲಿ ತಿಳಿಸಿದ್ದು, ಇನ್ನು ಶಾಶ್ವತ-ನಿರಂತರ ಕುಡಿಯುವ ನೀರಿನ ಪೂರೈಕೆ ವಿಚಾರವಾಗಿ, ನಾರಾಯಣಪುರದ ಬಸವ ಸಾಗರ ಜಲಾಶಯದಿಂದ ನೀರನ್ನು ಯಕ್ತಾಪುರ ಗ್ರಾಮ ಪಂಚಾಯತ್ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ಸುಮಾರು 43 ಕಿ.ಮೀ. ಪೈಪ್ಲೈನ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 23 ಕಿ.ಮೀ. ಬಾಕಿ ಕಾಮಗಾರಿ ಪೂರ್ಣಗೊಂಡ ನಂತರ, ಯಕ್ತಾಪುರ ಹಾಗೂ ಇದರ ವ್ಯಾಪ್ತಿಯ 12 ಗ್ರಾಮಗಳಿಗೆ ನಿರಂತರ ನೀರು ಸರಬರಾಜು ಮೂಲಕ, ಶಾಶ್ವತ ಪರಿಹಾರ ಸಿಕ್ಕಂತಾಗುತ್ತದೆ. ಈ ಕಾಮಗಾರಿ ಪೂರ್ಣಗೊಳ್ಳಲು 1 ವರ್ಷದ 6 ತಿಂಗಳು ಅವಧಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿ ವರ್ಷ ನೀರಿನ ಸಮಸ್ಯೆ ಕಾಡಿದಾಗ ಪದೇ ಪದೇ ತಾತ್ಕಾಲಿಕ ವ್ಯವಸ್ಥೆ ಬದಲು, ಶಾಶ್ವತ ಕುಡಿಯವ ನೀರಿನ ಯೋಜನೆ ಕೈಗೊಂಡರೆ ಉತ್ತಮ ಎಂದು ಕನ್ನಡಪ್ರಭ ವರದಿಯಲ್ಲಿ ಆಶಿಸಲಾಗಿತ್ತು.
ಕನ್ನಡ ಪ್ರಭ ಈ ವರದಿ ಕುರಿತು ವಿಧಾನ ಪರಿಷತ್ತಿನಲ್ಲಿ ಸದಸ್ಯ ಬಿ.ಜಿ. ಪಾಟೀಲ್ ಅಧಿವೇಶನದಲ್ಲಿ ಚರ್ಚಿಸಿ ಸರ್ಕಾರದ ಗಮನಸೆಳೆದಿದ್ದರು.ಹಾಗೆಯೇ, ವ್ವಿಜ್ಞಾನಿಗಳ ಸಂಪರ್ಕಿಸಿ, ಒಂದು ಹೊಸ ತೆರೆದ ಬಾವಿ ಕಂಡುಕೊಳ್ಳುವುದಕ್ಕಾಗಿ 2024-25ನೇ ಕಲ್ಯಾಣ ಕರ್ನಾಟಕ ಪ್ರದೇಶಾವೃದ್ಧಿ ಮಂಡಳಿ ಅನುದಾನದಡಿ, 65 ಲಕ್ಷ ರು.ಗಳ ಮೊತ್ತಕ್ಕೆ ಟೆಂಡರ್ ಆಗಿದ್ದು, ಎರಡು ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
------ಕೋಟ್-
ನೀರಿನ ಸಮಸ್ಯೆ ಉಲ್ಬಣಿಸದಂತೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮುಂತಾದ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಶಾಶ್ವತ-ನಿರಂತರ ನೀರು ಸರಬರಾಜು ಪೂರೈಕೆಗೆ ಯೋಜನೆ ಕೈಗೊಳ್ಳಲಾಗಿದೆ.-ಲವೀಶ ಒರಡಿಯಾ, ಸಿಇಒ, ಜಿ.ಪಂ. ಯಾದಗಿರಿ.
-----(10ವೈಡಿಆರ್10)
-----ಫೋಟೊ: ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಹಾಗೂ ಮತ್ತಿತರ ಅಧಿಕಾರಿಗಳ ತಂಡ ಯಕ್ತಾಪುರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
10ವೈಡಿಆರ್9ಜಿಪಂ ಸಿಇಒ ಭೇಟಿ, ಪರಿಶೀಲನೆ