ಬುರ್ರಕಥಾ ಈರಮ್ಮ ಅವರು ಬಳ್ಳಾರಿ ಜಿಲ್ಲೆಯ ಜಾನಪದ ಪರಂಪರೆಯನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು
ಮಂಜುನಾಥ ಕೆ.ಎಂ. ಬಳ್ಳಾರಿ
ಬಳ್ಳಾರಿ ಚಲೋ ಪಾದಯಾತ್ರೆಯ ನೇತೃತ್ವ ವಹಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸಂಡೂರು ತಾಲೂಕಿನ ಹಳೆಯ ದರೋಜಿ ಗ್ರಾಮದಲ್ಲಿರುವ ನಾಡೋಜ ಬುರ್ರಕಥಾ ಈರಮ್ಮ ಅವರ ಸ್ಮಾರಕಕ್ಕೆ ಭೇಟಿ ನೀಡಿ ಅವರ ಜಾನಪದ ಸೇವೆ ಸ್ಮರಿಸಿದರು.ಪಾದಯಾತ್ರೆಯ ಸಂದರ್ಭದಲ್ಲಿ ಹಳೆಯ ದರೋಜಿಗೆ ಆಗಮಿಸಿದ ವಿಜಯೇಂದ್ರ ಬುರ್ರಕಥಾ ಈರಮ್ಮ ಅವರ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಈರಮ್ಮ ಅವರ ಕುಟುಂಬದ ಸದಸ್ಯರಿಂದ ಅವರ ಬದುಕು, ಕಲಾಸೇವೆ ಹಾಗೂ ಜಾನಪದ ಲೋಕಕ್ಕೆ ನೀಡಿದ ಕೊಡುಗೆಯ ಕುರಿತು ಮಾಹಿತಿ ಪಡೆದುಕೊಂಡರು.
ಬುರ್ರಕಥಾ ಈರಮ್ಮ ಅವರು ಬಳ್ಳಾರಿ ಜಿಲ್ಲೆಯ ಜಾನಪದ ಪರಂಪರೆಯನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ತಮ್ಮ ವಿಶಿಷ್ಟ ಕಲಾ ಪ್ರಕಾರದ ಮೂಲಕ ಜನಪದ ಬದುಕು, ಸಾಮಾಜಿಕ ಸಂದೇಶ ಹಾಗೂ ಗ್ರಾಮೀಣ ಸಂಸ್ಕೃತಿ ಜನರಿಗೆ ತಲುಪಿಸುವ ಕೆಲಸ ಮಾಡಿದ್ದರು ಎಂದು ಕುಟುಂಬದ ಸದಸ್ಯರು ವಿಜಯೇಂದ್ರ ಅವರ ಗಮನಕ್ಕೆ ತಂದರು.ಬುರ್ರಕಥಾ ಈರಮ್ಮ ಅವರ ಕುಟುಂಬದ ಸದಸ್ಯರಾದ ರಾಮುಡು, ಶಂಕರ್ ಕುಮಾರ್, ಮಾರೆಪ್ಪ, ಗಾದಿಲಿಂಗ, ಅಶ್ವರಾಮಣ್ಣ ಹಾಗೂ ಅಶ್ವ ನಾಗರಾಜ ಅವರು ಈರಮ್ಮ ಅವರ ಕಲಾ ಬದುಕಿನ ವಿವಿಧ ಆಯಾಮಗಳನ್ನು ವಿಜಯೇಂದ್ರ ಅವರಿಗೆ ವಿವರಿಸಿದರು.
ಜಾನಪದ ಕಲೆಯ ಮೇಲಿನ ಅವರ ಬದ್ಧತೆ, ಬುರ್ರಕಥೆಯ ಮೂಲಕ ಜನರಿಗೆ ನೀಡಿದ ಸಂದೇಶಗಳು ಹಾಗೂ ಗ್ರಾಮೀಣ ಭಾಗದ ಸಾಂಸ್ಕೃತಿಕ ಪರಂಪರೆ ಉಳಿಸಲು ಅವರು ನೀಡಿದ ಕೊಡುಗೆಯ ಕುರಿತು ಕುಟುಂಬದವರು ಮಾಹಿತಿ ನೀಡಿದರು.ಈರಮ್ಮ ಅವರ ಸ್ಮಾರಕವು ಕೇವಲ ಅವರ ನೆನಪಿನ ಸ್ಥಳವಾಗಿರದೆ ಮುಂದಿನ ಪೀಳಿಗೆಗೆ ಜಾನಪದ ಕಲೆ ಹಾಗೂ ಸಂಸ್ಕೃತಿಯ ಪರಿಚಯ ಮಾಡಿಕೊಡುವ ಕೇಂದ್ರವಾಗಿ ಅಭಿವೃದ್ಧಿಯಾಗಬೇಕು ಎಂದು ಕುಟುಂಬದವರು ಮನವಿ ಮಾಡಿದರು.
ಅಲೆಮಾರಿಗಳ ಸಮಸ್ಯೆ ಆಲಿಕೆ:ಸ್ಮಾರಕಕ್ಕೆ ಭೇಟಿ ನೀಡಿದ ಬಳಿಕ ವಿಜಯೇಂದ್ರ ಅವರು ಅಲೆಮಾರಿ ಸಮುದಾಯದ ಮುಖಂಡರು ಹಾಗೂ ಸಮುದಾಯದ ಜನರೊಂದಿಗೆ ಮಾತುಕತೆ ನಡೆಸಿದರು. ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು.ವಸತಿ, ಮೂಲಸೌಕರ್ಯ ಸೇರಿದಂತೆ ಅಲೆಮಾರಿ ಸಮುದಾಯದ ಜನರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವ ಅಗತ್ಯದ ಕುರಿತು ಸಮುದಾಯದವರು ಗಮನ ಸೆಳೆದರು. ಹಲವು ವರ್ಷಗಳಿಂದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿರುವ ತಮ್ಮ ಸಮುದಾಯಕ್ಕೆ ಸರ್ಕಾರದಿಂದ ಸೂಕ್ತ ನೆರವು ದೊರೆಯಬೇಕು ಎಂದು ಮನವಿ ಮಾಡಿದರು. ಅಲೆಮಾರಿ ಸಮುದಾಯದ ಸಮಸ್ಯೆ ಆಲಿಸಿದ ವಿಜಯೇಂದ್ರ ಅವರು, ಅವರ ಬೇಡಿಕೆಗಳ ಕುರಿತು ಮಾಹಿತಿ ಪಡೆದುಕೊಂಡರು. ಸಮುದಾಯದ ಜನರ ಬದುಕಿನಲ್ಲಿ ಸುಧಾರಣೆ ತರಲು ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿದರು.
ಸ್ಮಾರಕ ಅಭಿವೃದ್ಧಿಗೆ ಭರವಸೆ:ಬುರ್ರಕಥಾ ಈರಮ್ಮ ಅವರ ಸ್ಮಾರಕದ ಅಭಿವೃದ್ಧಿ ಹಾಗೂ ಸ್ಥಳೀಯವಾಗಿ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವ ಕುರಿತು ವಿಜಯೇಂದ್ರ ಅವರು ಭರವಸೆ ನೀಡಿದರು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮತ್ತೆ ಆಡಳಿತಕ್ಕೆ ಬಂದರೆ ಬುರ್ರಕಥಾ ಈರಮ್ಮ ಅವರ ಸ್ಮಾರಕವನ್ನು ಅಭಿವೃದ್ಧಿಪಡಿಸುವುದರ ಜತೆಗೆ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಜಾನಪದ ಕಲಾವಿದರ ಸೇವೆ ಗುರುತಿಸುವುದು ಹಾಗೂ ಅವರ ನೆನಪು ಮುಂದಿನ ಪೀಳಿಗೆಗೆ ಉಳಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಸ್ಮಾರಕದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂಬ ಭರವಸೆ ನೀಡಿದರು.
ಬುರ್ರಕಥಾ ಈರಮ್ಮ ಅವರ ಸ್ಮಾರಕಕ್ಕೆ ವಿಜಯೇಂದ್ರ ಭೇಟಿ ನೀಡಿರುವುದು ಕುಟುಂಬದ ಸದಸ್ಯರು ಹಾಗೂ ಸ್ಥಳೀಯರಲ್ಲಿ ಸಂತಸ ಮೂಡಿಸಿತು. ಪಾದಯಾತ್ರೆಯ ರಾಜಕೀಯ ಕಾರ್ಯಕ್ರಮಗಳ ನಡುವೆಯೂ ಸ್ಥಳೀಯ ಜಾನಪದ ಪರಂಪರೆ ಹಾಗೂ ಅಲೆಮಾರಿ ಸಮುದಾಯದ ಸಮಸ್ಯೆಗಳಿಗೆ ಅವರು ಸ್ಪಂದಿಸಿರುವುದು ಗಮನ ಸೆಳೆಯಿತು.