ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಳೆದ ೧೦ ವರ್ಷಗಳಲ್ಲಿ ಭಾರತದಲ್ಲಿ ಕ್ರಿಕೆಟೆತರ ಆಟಗಳಿಗೆ ಪ್ರೋತ್ಸಾಹ ಹಾಗೂ ಮನ್ನಣೆ ದೊರೆಯುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಇತರ ಆಟಗಳನ್ನು ಪ್ರೋತ್ಸಾಹಿಸಲು ಸಾಕಷ್ಟು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದಾರೆ ಎಂದು ಏಕಲವ್ಯ ಪ್ರಶಸ್ತಿ ವಿಜೇತೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಜಿ.ಎಂ.ನಿಶ್ಚಿತಾ ಹೇಳಿದರು.ನಗರದ ವಿಟಿಯು ಆವರಣದಲ್ಲಿ ಮೊದಲ ದಿನ ಮಂಗಳವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಬೆಳಗಾವಿಯು ಅಸೊಸಿಯೇಷನ್ ಆಫ್ ಇಂಡಿಯನ್ ಇನಿವರ್ಸಿಟಿಸ್ (AIU)ನ ದಕ್ಷಿಣ ಭಾರತದ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ಬ್ಯಾಡ್ಮಿಂಟನ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಒಂದು ಆಟ ಅಥವಾ ಕ್ರೀಡೆಯಲ್ಲಿ ಸಾಧನೆ ಮಾಡುವುದು ಶೈಕ್ಷಣಿಕ ಕ್ಷೇತ್ರದಲ್ಲಿ ಪದವಿ ಪಡೆಯುವುದಕ್ಕೆ ಸಮನಾಗಿದೆ. ಅನೇಕ ಕ್ರೀಡಾ ಸಾಧಕರಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿರ್ಭಿತರಾಗಿ ನಿಮ್ಮ ಆಸಕ್ತಿ ಅನುಸಾರ ಪರಿಶ್ರಮವನ್ನು ಕ್ರೀಡೆಗಳಲ್ಲಿ ಸಾಧನೆ ಮಾಡಿ ದೇಶದ ಗೌರವ ಹೆಚ್ಚಿಸಿರಿ ಎಂದು ತಿಳಿಸಿದರು.
ಕ್ರೀಡೆಯಲ್ಲಿ ಸಾಧನೆಯ ಅಥವಾ ಯಶಸ್ವಿನ ಪರ್ವ ತುಂಬಾ ಕಡಿಮೆ ಅವಧಿಯದಾಗಿದ್ದು, ಆಟಗಾರರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಎಲ್ಲ ಕ್ರೀಡಾಳುಗಳು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಹೆಚ್ಚಿನ ಅವಧಿಯವರೆಗೆ ಸಾಧನೆಯ ಪರ್ವದಲ್ಲಿರುವಂತೆ ನೋಡಿಕೊಳ್ಳಬೇಕು. ಒಂದು ವೇಳೆ ಸಾಧ್ಯವಾಗಲಿಲ್ಲವೆಂದರೆ ಧೃತಿಗೇಡದೇ ಕ್ರೀಡೆಯ ರಾಯಭಾರಿಯಂತೆ ಕೆಲಸ ಮಾಡುತ್ತ ಮುಂದಿನ ಜನಾಂಗಕ್ಕೆ ಕ್ರೀಡೆಯನ್ನು ಕಲಿಸಿ ರಾಷ್ಟ್ರಕ್ಕೆ ಹೊಸಕ್ರೀಡಾಳುಗಳನ್ನು ಕೊಟ್ಟು ಕ್ರೀಡಾಶಕ್ತಿ ಮತ್ತು ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ಹೊರಬೇಕು ಎಂದು ಸಲಹೆ ನೀಡಿದರು.ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ.ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ, ಒಬ್ಬ ವಿದ್ಯಾರ್ಥಿಯು ತನ್ನ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಲು ಸಹಾಯಕವಾಗುವ ವಿವಿಧ ಕೌಶಲ್ಯಗಳು, ಅನುಭವ ಮತ್ತು ಆತ್ಮವಿಶ್ವಾಸ ಪಡೆಯುತ್ತಾನೆ. ಹಲವಾರು ಕ್ರೀಡಾಚಟುವಟಿಕೆಗಳು ವಿದ್ಯಾರ್ಥಿಗೆ ನೈತಿಕತೆ, ಮೌಲ್ಯಗಳು, ಶಿಸ್ತು ಮತ್ತು ಪರಸ್ಪರ ಸಾಮಾಜಿಕ ನಂಬಿಕೆಯ ಪ್ರಜ್ಞೆ ಕಲಿಸುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಟಿಯು ಹಣಕಾಸು ಅಧಿಕಾರಿ ಎಂ.ಎ.ಸಪ್ನರವರು ಉಪಸ್ಥಿತರಿದ್ದರು. ಪ್ಯಾರಾ ಒಲಿಂಪಿಕ್‌ನಲ್ಲಿ ಸಾಧನೆ ಮಾಡಿ ಅರ್ಜುನ ಪ್ರಶಸ್ತಿ ಪಡೆದ ಕುಮಾರಿ ಜೇರಲಿನ್ ಅನಿಕಾರ ಹಾಗೂ ನಿಶ್ಚಿತಾ ಅವರನ್ನು ಅಭಿನಂಧಿಸಿ, ಸನ್ಮಾನಿಸಲಾಯಿತು.ಬೆಳಗಾವಿಯು ಅಸ್ಸೊಸಿಯೆಷನ್ ಆಫ್ ಇಂಡಿಯ ಇನವರ್ಸಿಟಿಸ್ (AIU) ದಕ್ಷಿಣ ಭಾರತದ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ಬ್ಯಾಡ್ಮಿಂಟನ್ ಕ್ರೀಡಾಕೂಟವನ್ನು ೨ ರಿಂದ ೫ ರವರೆಗೆ ಹಮ್ಮಿಕೊಂಡಿದೆ. ನಾಲ್ಕು ದಿನಗಳ ನಡೆಯುವ ಕ್ರೀಡಾಕೂಟದಲ್ಲಿ ಒಟ್ಟು 95 ವಿಶ್ವವಿದ್ಯಾಲಯಗಳಿಂದ 500ಕ್ಕಿಂತ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದಾರೆ. ಮುಖ್ಯಅತಿಥಿ ಜಿ.ಎಂ.ನಿಶ್ಚಿತಾ ಹಾಗೂ ಕುಲಪತಿ ಪ್ರೊ.ವಿದ್ಯಾಶಂಕರ.ಎಸ್ ಧ್ವಜರೋಹಣ ಮಾಡುವುದರೊಂದಿಗೆ ಸಾಂಕೇತಿಕವಾಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರಎಲ್ಲ ಬ್ಯಾಡ್ಮಿಂಟನ್‌ಗಳು ಪಥಸಂಚಲನದ ಮೂಲಕ ಗೌರವ ಸಲ್ಲಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಕುಲಸಚಿವರಾದ ಪ್ರೊ.ಬಿ.ಇ.ರಂಗಸ್ವಾಮಿಯವರು ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಪುಟ್ಟಸ್ವಾಮಿಗೌಡ ಪ್ರಸ್ತಾವನೆ ನುಡಿಗಳನ್ನಾಡಿ ವರದಿ ಓದಿದರು. ಎನ್.ಎಸ್.ಎಸ್ ಸಂಯೋಜಕ ಪಿ.ವಿ.ಕಡಗದ ವಂದಿಸಿದರು.ಕೋಟ್..೧೦ ವರ್ಷಗಳ ಹಿಂದೆ ನಿಮ್ಮೆಲ್ಲರ ಹಾಗೇ ನಾನು ಸಹ ಇದೇ ರೀತಿಯ ಈ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಒಬ್ಬ ಸ್ಪರ್ಧಿಯಾಗಿ ಪಾಲ್ಗೊಂಡಿದ್ದೆ. ಇವತ್ತು ಇದೇ ಕ್ರೀಡಾಕೂಟದ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಒಂದು ರೀತಿಯ ಹೆಮ್ಮೆ ಮತ್ತು ಗೌರವ ಸಂಗತಿಯಾಗಿದೆ. ಕುಲಪತಿಗಳಾದ ಪ್ರೊ.ವಿದ್ಯಾಶಂಕರ.ಎಸ್ ಇವರ ಅವಧಿಯಲ್ಲಿ ವಿಶ್ವವಿದ್ಯಾಲಯವು ವಿದ್ಯಾರ್ಥಿ ಸ್ನೇಹಿ ಮತ್ತು ಸಂಶೊಧನಾ ವಿಶ್ವವಿದ್ಯಾಲಯವಾಗಿ ಬದಲಾವಣೆಯಾಗಿದೆ.
-ಜಿ.ಎಂ.ನಿಶ್ಚಿತಾ, ಏಕಲವ್ಯ ಪ್ರಶಸ್ತಿ ವಿಜೇತೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ.