ಅಶೋಕೆ: ಆಹಾರ ಹಾಗೂ ನಿದ್ದೆ ಪರಸ್ಪರ ಸಂಬಂಧಿತವಾಗಿದೆ. ನಿದ್ದೆ ಚನ್ನಾಗಿ ಬರಲು ಹಸಿವು ಅಗತ್ಯ ಹಾಗೂ ಆಹಾರ ಸರಿಯಾಗಿದ್ದರೆ ಸರಿಯಾದ ನಿದ್ರೆ ಪ್ರಾಪ್ತವಾಗುತ್ತದೆ. ದೇಹಕ್ಕೆ ಸಂಬಂಧಿಸಿದ ಮೂರು ಉಪಾಂಗಗಳಲ್ಲಿ ನಿದ್ದೆ ಹಾಗೂ ಆಹಾರ ಪ್ರಮುಖವಾಗಿವೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಭಾನುವಾರ ‘ಅನ್ನಂ ಬ್ರಹ್ಮ’ ಪ್ರವಚನ ಸರಣಿಯಲ್ಲಿ ನಿದ್ದೆಯೆಂಬ ಪೂಜೆ ವಿಚಾರವಾಗಿ ಆಶೀರ್ವಚನ ನೀಡಿ, ನಿದ್ರೆ ಕೇವಲ ಒಂದು ಅವಸ್ಥೆಯಲ್ಲ. ಅದು ಮಾತೃಸ್ವರೂಪಿಣಿ ದೇವಿಯೇ ಆಗಿದ್ದು, ಶ್ರಮವನ್ನು ಕಳೆಯಲು, ಶರೀರ ಹಾಗೂ ಮನಸ್ಸಿಗೆ ಆದ ಹಾನಿಯನ್ನು ಸರಿಪಡಿಸಲು, ಶಕ್ತಿತುಂಬಲು ಹಾಗೂ ಹೊಸ ಚೈತನ್ಯವನ್ನು ತುಂಬಲು ನಿದ್ದೆ ಸಹಕಾರಿ. ಸಕಾಲದಲ್ಲಿ ಬರುವ ನಿದ್ರೆ ಸುಖ, ಆರೋಗ್ಯ ಹಾಗೂ ಹಲವಾರು ಸಿದ್ಧಿಗಳನ್ನು ನೀಡುತ್ತದೆ ಎಂದು ತಿಳಿಸಿದರು.ನಿದ್ರೆ ಸರಿಯಾಗಿ ಬಂದಾಗ ಅದು ಸಮಾಧಿಸ್ಥಿತಿ ಎಂದು ಶಂಕರಾಚಾರ್ಯರು ಉಲ್ಲೇಖಿಸಿದ್ದು, ರಾತ್ರಿ ಹಾಗೂ ಬೆಳಗ್ಗೆಯ ನಡುವಿನ ಎರಡು ಯಾಮಗಳು ನಿದ್ದೆಗೆ ಸೂಕ್ತ ಎಂದು ಶಾಸ್ತ್ರಗಳು ಹೇಳಿವೆ. ಮಧ್ಯರಾತ್ರಿ ಸಮಾನವಾಗಿ ಬರುವಂತೆ ನಿದ್ದೆ ಮಾಡಿದಾಗ ಅದು ಬರಿಯ ನಿದ್ದೆಯಲ್ಲ, ಯೋಗ ಸಮಾಧಿ ಎಂದು ಕರೆಸಿಕೊಳ್ಳುತ್ತದೆ ಎಂದರು.ಡಿನ್ನರ್ ನಮ್ಮ ಸಂಸ್ಕೃತಿಯಲ್ಲ: ಸಂಜೆ ಸೂರ್ಯಾಸ್ತವಾಗಿ ಸುಮಾರು ಒಂದು ಗಂಟೆಗೆ ಆಹಾರವನ್ನು ಸ್ವೀಕರಿಸುವುದು ಉತ್ತಮ. ಸಂಜೆಯ ಆಹಾರ ಕಡಿಮೆ ಪ್ರಮಾಣದಲ್ಲಿ ಹಾಗೂ ಜೀರ್ಣಕ್ಕೆ ಸುಲಭವಾಗುವಂತಹದ್ದು ಇರಬೇಕು. ಭೂರಿ ಭೋಜನ ರಾತ್ರಿಯ ಊಟಕ್ಕೆ ನಿಷಿದ್ಧ. ಆದರೆ ಅಂಧಾನುಕರಣೆಗೆ ಒಳಗಾಗಿರುವ ನಾವು ''''''''ಡಿನ್ನರ್'''''''' ಹೆಸರಿನಲ್ಲಿ ರಾತ್ರಿ ಭೋಜನ ಕೂಟವನ್ನು ನಡೆಸುತ್ತಿರುವುದು ಆರೋಗ್ಯಕ್ಕೆ ಹಾನಿ ಎಂದು ಪ್ರತಿಪಾದಿಸಿದರು.

ಗುರಿಕಾರರ ದಿನ: ಗುರಿಕಾರರ ದಿನದ ಅಂಗವಾಗಿ ರಾಜ್ಯ - ಹೊರರಾಜ್ಯಗಳಿಂದ ಆಗಮಿಸಿದ್ದ ಶ್ರೀಮಠದ ಪ್ರತಿನಿಧಿಗಳಾದ ಗುರಿಕಾರರನ್ನು ಆಶೀರ್ವದಿಸಿದ ಶ್ರೀಗಳು, ಗುರಿಕಾರರೆಂದರೆ ಶ್ರೀಮಠದ ಆಂಜನೇಯರಿದ್ದಂತೆ. ಸಮಾಜದ ಮಧ್ಯದಲ್ಲಿ ಶ್ರೀಮಠದ ಕಾರ್ಯಗಳನ್ನು ಮಾಡುವ ಮೂಲಕ ಜಾಗೃತಿಯನ್ನು ಮೂಡಿಸಬೇಕು ಎಂದರು 11 ಮಂಡಲಗಳಿಂದ ಚಾತುರ್ಮಾಸ್ಯಕ್ಕೆ ಸಂಗ್ರಹವಾದ ನಗದು ಕಾಣಿಕೆಯನ್ನು ಸಾಂಕೇತಿಕವಾಗಿ ಶ್ರೀಗಳಿಗೆ ಸಮರ್ಪಿಸಲಾಯಿತು.

ಸಮಸ್ತ ಗುರಿಕಾರರ ಪರವಾಗಿ ಸತ್ಯನಾರಾಯಣ ಮೊಗ್ರ ದಂಪತಿ ಗುರುಭಿಕ್ಷಾ ಸೇವೆ ನೆರವೇರಿಸಿದರು. ಸಮಾಜದ ಮಧ್ಯದಲ್ಲಿ ಶ್ರೀಗಳ ಪ್ರತಿನಿಧಿಗಳಾಗಿ ಇರುವ ಗುರಿಕಾರರ ಕ್ಷೇಮಕ್ಕಾಗಿ 1008 ನವಗ್ರಹ ಶಾಂತಿ ನಡೆಸಲಾಯಿತು.

ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಉಪಾಧ್ಯಕ್ಷರಾದ ಜಿ.ಜಿ ಹೆಗಡೆ, ಶಿವಶಂಕರ ಭಟ್ಟ ಭೋನಂತಾಯ, ಗಣಪತಿ ಸುಬ್ರಾಯ ಹೆಗಡೆ, ಶಾಂತರಾಮ ಹಿರೇಮನೆ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ, ದಿನಪ್ರಧಾನರಾಗಿ ಈಶ್ವರ ಕೇಶವ ಹೆಗಡೆ ಮುಂತಾದವರು ಇದ್ದರು.