ಹರಿಹರ: ಆಸ್ತಿ ತೆರಿಗೆ ಶೇ.3ರಿಂದ 5ರಷ್ಟು ಹೆಚ್ಚಳ

| Published : Mar 26 2025, 01:39 AM IST

ಸಾರಾಂಶ

ಆಸ್ತಿ ತೆರಿಗೆ ಶೇ.3ರಿಂದ 5ರಷ್ಟು ಹೆಚ್ಚಳ, ನಗರೋತ್ಥಾನ ಕಾಮಗಾರಿ ಸ್ಥಗಿತ, ಬಿ ಖಾತೆ 700 ಅರ್ಜಿಯಲ್ಲಿ ಕೇವಲ25 ಅರ್ಜಿಗಳ ವಿಲೇವಾರಿ. ಇವು ನಗರಸಭಾ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅಧ್ಯಕ್ಷತೆ ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಗಳು.

- ನಗರಸಭೆ ಅಧ್ಯಕ್ಷೆ ಕವಿತಾ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ

- - -

ಕನ್ನಡಪ್ರಭ ವಾರ್ತೆ ಹರಿಹರ ಆಸ್ತಿ ತೆರಿಗೆ ಶೇ.3ರಿಂದ 5ರಷ್ಟು ಹೆಚ್ಚಳ, ನಗರೋತ್ಥಾನ ಕಾಮಗಾರಿ ಸ್ಥಗಿತ, ಬಿ ಖಾತೆ 700 ಅರ್ಜಿಯಲ್ಲಿ ಕೇವಲ25 ಅರ್ಜಿಗಳ ವಿಲೇವಾರಿ. ಇವು ನಗರಸಭಾ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅಧ್ಯಕ್ಷತೆ ವಿಶೇಷ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಗಳು.

ಸಭೆಯಲ್ಲಿ ವಿಷಯ ಮಂಡಿಸಿದ ಪೌರಾಯುಕ್ತ ಸುಬ್ರಮಣ್ಯ ಶ್ರೇಷ್ಠಿ, ಸರ್ಕಾರದಿಂದ ಸುತ್ತೋಲೆ ಬಂದಿದ್ದು, 2025-26ನೇ ಸಾಲಿನ ಆಸ್ತಿ ತೆರಿಗೆ ದರ ಪರಿಕ್ಷರಣೆ ಮಾಡಬೇಕಿದೆ. ಶೇ.3ರಿಂದ 5ರಷ್ಟು ತೆರಿಗೆ ದರ ಹೆಚ್ಚಳ ಮಾಡಬೇಕಿದೆ. ಶೇ.5ರಷ್ಟು ಹೆಚ್ಚಳ ಮಾಡಿದಲ್ಲಿ ನಗರಸಭೆಗೆ ₹25 ಲಕ್ಷ ಹೆಚ್ಚುವರಿ ಆದಾಯ ಲಭಿಸುತ್ತದೆ ಎಂದರು.

ಈ ಹಿಂದೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಪ್ರತಿ 3 ವರ್ಷಕ್ಕೊಮ್ಮೆ ದರ ಹೆಚ್ಚಳವಾಗುತ್ತಿತ್ತು. ಅದರ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ನಗರಸಭೆ ಆಸ್ತಿ ತೆರಿಗೆ ಹೆಚ್ಚಳವಾಗುತ್ತಿತ್ತು. ಈ ಬಾರಿ ಸಬ್‍ ರಿಜಿಸ್ಟರ್ ಕಚೇರಿಯಲ್ಲಿ ದರ ಹೆಚ್ಚಳವಾಗಿಲ್ಲ. ಸರ್ಕಾರದ ಮಾರ್ಗಸೂಚಿ ಶೇ 3ರಿಂದ 5ರಷ್ಟು ತೆರಿಗೆ ಹೆಚ್ಚಳಕ್ಕೆ ಅನುಮೊದನೆ ನೀಡಬೇಕೆಂದು, ದರ ಹೆಚ್ಚಳ ಮಾಡದಿದ್ದಲ್ಲಿ ಸರ್ಕಾರದ ವಿವಿಧ ಅನುದಾನಗಳು ಲಭಿಸುವುದಿಲ್ಲ ಎಂದು ಸಭೆಗೆ ವಿವರಿಸಿದರು.

ನಗರಸಭೆ ಸದಸ್ಯ ಶಂಕರ್ ಖಟಾವ್‍ಕರ್ ಮಾತನಾಡಿ, ಜಿಲ್ಲಾ ಕೇಂದ್ರವಾದ ದಾವಣಗೆರೆಯಲ್ಲಿ ನಿಗದಿ ಆಗಿರುವ 3-4 ಪಟ್ಟು ಹೆಚ್ಚು ತೆರಿಗೆ ಹರಿಹರದಲ್ಲಿ ವಸೂಲಿಯಾಗುತ್ತಿದೆ. ಯಾವುದೇ ಕಾರಣಕ್ಕೂ ದರ ಹೆಚ್ಚಳ ಬೇಡ. ಆಕಸ್ಮಾತ್ ಹೆಚ್ಚಳ ಮಾಡಬೇಕಾದರೆ ಸ್ಥಳೀಯ ಶಾಸಕರು, ತಹಸೀಲ್ದಾರ್ ಸೇರಿದಂತೆ ಸಮಿತಿ ಇರುತ್ತದೆ. ದರ ಹೆಚ್ಚಳ ಮಾಡಬಾರದು ಎಂದು ಅವರಿಗೆ ಮನವಿ ಸಲ್ಲಿಸಿ ಎಂದು ಸಲಹೆ ನೀಡಿದರು.

ದರ ಹೆಚ್ಚಳ ಮಾಡಿದ್ದರೆ, ಅನುದಾನ ಬರುವುದಿಲ್ಲ ಎನ್ನುತ್ತೀರಲ್ಲ ಹಾಗಾದರೆ ಸರ್ಕಾರದಿಂದ ಬರುವ ಎಸ್‍ಎಫ್‍ಸಿ, ನಗರೋತ್ಥಾನ ಸೇರಿದಂತೆ ಬಂದಿರುವ ಅನುದಾನಗಳು ಎಷ್ಟೆಷ್ಟು ಕಾಮಗಾರಿಗಳು ಪೂರ್ಣವಾಗಿವೆ ತಿಳಿಸಿ. ಅನಂತರ ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ಚರ್ಚೆ ಮಾಡೋಣ ಎಂದು ಪಟ್ಟುಹಿಡಿದರು.

ಎಂಜಿನಿಯರ್ ಮಾತನಾಡಿ, ನಗರೋತ್ಥಾನ ಯೋಜನೆಯಡಿ ₹18 ಕೋಟಿಗಳ ಟೆಂಡರ್ ಆಗಿದೆ. ವರ್ಕ್‌ ಆರ್ಡರ್ ನೀಡಲಾಗಿದೆ. ಗುತ್ತಿಗೆದಾರರು ₹6 ಕೋಟಿಯಷ್ಟು ಹಣ ಪಡೆದಿದ್ದು, ಕಾಮಗಾರಿ ನಿಲ್ಲಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ನಗರಾದ್ಯಂತ ಇರುವ ಕಲ್ಯಾಣ ಮಂಟಪಗಳ ತೆರಿಗೆ ಬಾಕಿ ಹಣವೇ ₹5ರಿಂದ ₹6 ಕೋಟಿ ಇದೆ. ಅದನ್ನು ವಸೂಲಿ ಮಾಡದೇ ಕೇವಲ ಬಡಜನತೆಗೆ ಶೇ.5ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮೂಲಕ ₹25 ಲಕ್ಷ ಸಂಪಾದಿಸಲು ಹೊರಟಿದ್ದೀರಿ. ಮೊದಲು ಅದನ್ನು ವಸೂಲಿ ಮಾಡಿ ಎಂದು ವಸಂತ್ ಹಾಗೂ ನಗರಸಭೆ ಸದಸ್ಯರು ಪಟ್ಟುಹಿಡಿದರು. ಕಲ್ಯಾಣ ಮಂಟಪದವರಿಗೆ ನೋಟೀಸ್ ನೀಡಿದ್ದೇವೆ. ಕೆಲ ಕಲ್ಯಾಣ ಮಂಟಪಗಳು ಅಕ್ರಮವಾಗಿವೆ. ಹಾಗಾಗಿ, ಅವುಗಳಿಂದ ತೆರಿಗೆ ವಸೂಲಿ ಕಷ್ಟವಾಗಿದೆ ಎಂದು ತಿಳಿಸಲಾಯಿತು.

ಎಇಇ ಮಾತನಾಡಿ, 96 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. 45 ಕಾಮಗಾರಿಗಳಿಗೆ ವರ್ಕ್‌ ಆರ್ಡರ್ ನೀಡಲಾಗಿದೆ. 20 ಕಾಮಗಾರಿಗಳು ಅನುಮೊದನೆಗಾಗಿ ಅಧ್ಯಕ್ಷರ ಟೇಬಲ್‍ನಲ್ಲಿವೆ ಎಂದು ಎಇಇ ತಿಳಿಸಿದರು.

ಸರ್ಕಾರ ಈಗಾಗಲೇ ಬಿ. ಖಾತಾ ಮಾಡಲು ಅನುಮೋದನೆ ನೀಡಿ ಒಂದು ತಿಂಗಳಾಗಿದೆ. ಎಷ್ಟು ಅರ್ಜಿಗಳು ಬಂದಿವೆ, ಎಷ್ಟು ಅರ್ಜಿಗಳು ವಿಲೇವಾರಿಯಾಗಿವೆ ಎಂಬ ಶಂಕರ್ ಖಟಾವ್‍ಕರ್ ಪ್ರಶ್ನೆಗೆ, 700 ಅರ್ಜಿಗಳು ಬಂದಿವೆ ಅರ್ಜಿಗಳು ದಾಖಲೆಗಳು ಅಪೂರ್ಣವಾಗಿರುವ ಹಿನ್ನೆಲೆ ಅನೇಕ ಅರ್ಜಿಗಳಿಗೆ ಹಿಂಬರಹ ನೀಡಿ ತಿಳಿಸಲಾಗಿದೆ. 25 ಅರ್ಜಿಗಳು ವಿಲೇವಾರಿಯಾಗಿವೆ ಎಂದು ಮಾಹಿತಿ ನೀಡಲಾಯಿತು.

ನಗರಸಭಾ ಉಪಾಧ್ಯಕ್ಷ ಎಚ್.ಜಂಬಣ್ಣ, ಸದಸ್ಯರಾದ ರತ್ನ ಡಿ.ಉಜ್ಜೇಶ್, ರೇಷ್ಮಾಭಾನು, ಸುಮಿತ್ರಮ್ಮ ಮರಿದೇವ, ನಿಂಬಕ್ಕ ಚಂದಾಪೂರ್, ಲಕ್ಷ್ಮೀ ಮೋಹನ್, ಅಶ್ವಿನಿ ಕೃಷ್ಣ, ಬಾಬೂಲಾಲ್, ವಾಮನಮೂರ್ತಿ, ವಸಂತ ಹಾಗೂ ಇತರರು ಭಾಗವಸಿದ್ದರು.

- - -

-25 ಎಚ್‍ಆರ್‍ಆರ್01:

ಹರಿಹರದ ನಗರಸಭೆಯಲ್ಲಿ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು.