ದಾವಣಗೆರೆ ಜಿಲ್ಲೆಯಲ್ಲಿ ಜಲ ಸಾಹಸ ಕ್ರೀಡಾ ಅಕಾಡೆಮಿಗೆ ಪ್ರಸ್ತಾವನೆ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ

| Published : Jan 07 2025, 12:30 AM IST

ದಾವಣಗೆರೆ ಜಿಲ್ಲೆಯಲ್ಲಿ ಜಲ ಸಾಹಸ ಕ್ರೀಡಾ ಅಕಾಡೆಮಿಗೆ ಪ್ರಸ್ತಾವನೆ: ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಯುವಜನತೆ ಇತರೆ ಕ್ರೀಡೆಗಳಂತೆ ಜಲ ಸಾಹಸ ಕ್ರೀಡೆಯಲ್ಲಿಯೂ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡಲು ಇದರಿಂದ ಇಂಬು ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಹೇಳಿದರು. ದಾವಣಗೆರೆಯಲ್ಲಿ ರಾಫ್ಟಿಂಗ್ ಹಾಗೂ ಕಾಯ್ಕಿಂಗ್ (ಹಾಯಿದೋಣಿ) ಕ್ರೀಡೆಗಳನ್ನು ವೀಕ್ಷಿಸಿ ಮಾತನಾಡಿದರು.

ಅಕಾಡೆಮಿಯಿಂದ ಯುವಜನತೆಗೆ ನೀರಿನ ಪಂದ್ಯಗಳಲ್ಲಿ ಅಂತಾರಾಷ್ಟ್ರ ಮಟ್ಟದಲ್ಲಿ ಅವಕಾಶ

ಕನ್ನಡಪ್ರಭ ವಾರ್ತೆ ದಾವಣಗೆರೆ

ಶಾಂತಿ ಸಾಗರ ಹಾಗೂ ಕೊಂಡಜ್ಜಿ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳ ತರಬೇತಿ ಅಕಾಡೆಮಿ ತೆರೆಯಲು ಸಾಕಷ್ಟು ಅವಕಾಶಗಳಿವೆ. ಅಡಾಡೆಮಿ ಸ್ಥಾಪನೆಯಿಂದ ಜಿಲ್ಲೆಯ ಯುವಜನತೆ ಇತರೆ ಕ್ರೀಡೆಗಳಂತೆ ಜಲ ಸಾಹಸ ಕ್ರೀಡೆಯಲ್ಲಿಯೂ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡಲು ಇದರಿಂದ ಇಂಬು ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಹೇಳಿದರು.

ನಗರದಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಅಂಗವಾಗಿ ಸೋಮವಾರ ಬೆಳಿಗ್ಗೆ ಕುಂದುವಾಡ ಕೆರೆಯಲ್ಲಿ ಜನರಲ್ ತಿಮ್ಮಯ್ಯ ಜಲಸಾಹಸ ಅಕಾಡೆಮಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ರಾಫ್ಟಿಂಗ್ ಹಾಗೂ ಕಾಯ್ಕಿಂಗ್ (ಹಾಯಿದೋಣಿ) ಕ್ರೀಡೆಗಳನ್ನು ವೀಕ್ಷಿಸಿ ಮಾತನಾಡಿದರು.

ಈ ಹಿಂದೆ ಶಾಂತಿಸಾಗರದಲ್ಲಿ ಜಲ ಸಾಹಸ ಕ್ರೀಡೆಗಳ ತರಬೇತಿ ಅಕಾಡೆಮಿ ಕಾರ್ಯನಿರ್ವಹಿಸುತ್ತಿತ್ತು. ಕಾರಣಾಂತರಗಳಿಂದ ಇದನ್ನು ಸ್ಥಗಿತಗೊಳಿಸಲಾಗಿದೆ. ನೀರಾವರಿ ಯೋಜನೆಗಳ ಮೂಲಕ ಜಿಲ್ಲೆಯ ಶಾಂತಿಸಾಗರ ಹಾಗೂ ಕೊಂಡಜ್ಜಿ ಕೆರೆಗಳಲ್ಲಿ ಸರ್ವ ಋತುಗಳಲ್ಲಿಯೂ ನೀರಿನ ಲಭ್ಯತೆ ಇರುತ್ತದೆ. ಜಲ ಪರಿಸರಕ್ಕೆ ಹಾನಿಯಾಗದಂತೆ ಶಾಂತಿ ಸಾಗರ ಹಾಗೂ ಕೊಂಡಜ್ಜಿ ಕೆರೆಯಲ್ಲಿ ಜಲ ಸಾಹಸ ಕ್ರೀಡೆಗಳ ತರಬೇತಿ ಅಕಾಡೆಮಿ ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

8ರ ವರೆಗೆ ರಾಫ್ಟಿಂಗ್ ಹಾಗೂ ಕಾಯ್ಕಿಂಗ್ ವಿಸ್ತರಣೆ:

ಬಹಳ ವರ್ಷಗಳ ತರುವಾಯ ದಾವಣಗೆರೆ ಜಿಲ್ಲೆಯಲ್ಲಿ ಯುಜನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ದಾವಣಗೆರೆ ನಗರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಈ ಸಂದರ್ಭದಲ್ಲಿ ಯುವಕರಿಗೆ ಜಲಸಾಹಸ ಕ್ರೀಡೆಗಳ ಬಗ್ಗೆ ಪರಿಚಯಿಸಬೇಕು ಎಂಬುದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಆಶಯವಾಗಿತ್ತು. ಈ ಆಶಯಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಲವು ತೋರಿದರು. ಈ ಹಿನ್ನೆಲೆಯಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಯುಕ್ತರಿಗೆ ಜಲಸಾಹಸ ಕ್ರೀಡೆಗಳನ್ನು ಆಯೋಜಿಸುವಂತೆ ಕೋರಲಾಗಿತ್ತು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿ ಕಡಿಮೆ ಅವಧಿಯಲ್ಲಿ ಜನರಲ್ ತಿಮ್ಮಯ್ಯ ಜಲಸಾಹಸ ಅಕಾಡೆಮಿ ವತಿಯಿಂದ ಕುಂದವಾಡ ಕೆರೆಯಲ್ಲಿ ರಾಫ್ಟಿಂಗ್ ಹಾಗೂ ಕಾಯ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಇದಕ್ಕೆ ಯುವಕರಿಂದ ಉತ್ತಮ ಸ್ಪಂದನೆ ದೊರೆತ ಹಿನ್ನಲೆ ಜ.8 ವರೆಗೆ ಕೊಂಡಜ್ಜಿ ಕೆರೆಯಲ್ಲಿ ರಾಫ್ಟಿಂಗ್ ವಿಸ್ತರಿಸಲಾಗಿದೆ. ಜಿಲ್ಲೆಯ ಯುವಕರು ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡು ಭಾಗವಹಿಸಬಹುದು. ಜ.7 ರಂದು ಕೊಂಡಜ್ಜಿ ಕೆರೆಯಲ್ಲಿ ರಾಫ್ಟಿಂಗ್ ಹಾಗೂ ಕಾಯ್ಕಿಂಗ್ ಇರಲಿದೆ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದರು.

ರಾಫ್ಟಿಂಗ್‌, ಕಾಯ್ಕಿಂಗ್‌ನಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ:

ಕುಂದವಾಡ ಕೆರೆಯಲ್ಲಿ ಆಯೋಜಿಸಲಾಗಿರುವ ರಾಫ್ಟಿಂಗ್ ಹಾಗೂ ಕಾಯ್ಕಿಂಗ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರಿಂದ ಉತ್ತಮ ಸ್ಪಂದನೆ ದೊರೆತಿದೆ. ವಿವಿಧ ಕಾಲೇಜುಗಳಿಂದ ಆಗಮಿಸಿದ ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಸೋಮವಾರ ಮುಂಜಾನೆಯಿಂದಲೇ ತಂಡ ತಂಡವಾಗಿ ಪಾಲ್ಗೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಲೈಫ್ ಜಾಕೆಟ್ ತೊಡುವುದು ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗತ್ತಿದೆ. ಕಾರ್ಯಕ್ರಮದ ನಿಮಿತ್ತವಾಗಿ 10 ಸಿಂಗಲ್ ಸೀಟರ್ ಕಾಯ್ಕಿಂಗ್ ಬೋಟ್, 7 ಡಬಲ್ ಸೀಟರ್ ಕಾಯ್ಕಿಂಗ್ ಬೋಟ್, 2 ರಾಫ್ಟ್ ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಲೈಫ್ ಜಾಕೆಟ್‌ಗಳನ್ನು ಇರಿಸಲಾಗಿದೆ. 7 ಜನ ತರಬೇತುದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ ಎಂದು ಜಲಸಾಹಸ ತರಬೇತುದಾರ ನಾನಾರಾವ್ ತಿಳಿಸಿದರು. ವಿವಿಧ ಕಾಲೇಜು ವಿದ್ಯಾರ್ಥಿಗಳು ಇದ್ದರು.