ಮಂಡ್ಯದಲ್ಲಿ ಹೊಸ ಪ್ರವಾಸಿಮಂದಿರ ನಿರ್ಮಾಣಕ್ಕೆ ಪ್ರಸ್ತಾವನೆ

| Published : Aug 12 2025, 12:30 AM IST

ಸಾರಾಂಶ

ಮಂಡ್ಯ ನಗರದಲ್ಲಿರುವ ಪ್ರವಾಸಿಮಂದಿರವು ೧೯೬೩ರಲ್ಲಿ ನಿರ್ಮಾಣವಾಗಿದ್ದು, ಹಳೆಯ ಕಟ್ಟಡವಾಗಿದೆ. ಈ ಪ್ರವಾಸಿ ಮಂದಿರವು ನೆಲಮಹಡಿ, ಮೊದಲನೇ ಮಹಡಿಯನ್ನು ಒಳಗೊಂಡಿದ್ದು, ವಿಐಪಿ-೩, ವಿವಿಐಪಿ-೧ ಹಾಗೂ ಇತರೆ ೧೫ ಕೊಠಡಿಗಳನ್ನು ಹೊಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಪ್ರವಾಸಿ ಮಂದಿರದ ಕಟ್ಟಡ ಹಳೆಯ ಕಟ್ಟಡವಾಗಿದ್ದು, ಶಿಥಿಲಾವಸ್ಥೆಯಲ್ಲಿರುವುದರಿಂದ ಹೊಸ ಪ್ರವಾಸಿಮಂದಿರ ನಿರ್ಮಿಸುವಂತೆ ಶಾಸಕ ಪಿ.ರವಿಕುಮಾರ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ನಗರದಲ್ಲಿರುವ ಪ್ರವಾಸಿಮಂದಿರವು ೧೯೬೩ರಲ್ಲಿ ನಿರ್ಮಾಣವಾಗಿದ್ದು, ಹಳೆಯ ಕಟ್ಟಡವಾಗಿದೆ. ಈ ಪ್ರವಾಸಿ ಮಂದಿರವು ನೆಲಮಹಡಿ, ಮೊದಲನೇ ಮಹಡಿಯನ್ನು ಒಳಗೊಂಡಿದ್ದು, ವಿಐಪಿ-೩, ವಿವಿಐಪಿ-೧ ಹಾಗೂ ಇತರೆ ೧೫ ಕೊಠಡಿಗಳನ್ನು ಹೊಂದಿದೆ. ನಗರವು ಜಿಲ್ಲಾ ಕೇಂದ್ರವಾಗಿದ್ದು, ಬೆಂಗಳೂರು-ಮೈಸೂರು ಮಾರ್ಗ ಮಧ್ಯೆ ಇರುವುದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿಗೆ ಹೆಚ್ಚಾಗಿ ಬರುತ್ತಿದ್ದಾರೆ. ಪ್ರವಾಸಿಮಂದಿರವು ತುಂಬಾ ಹಳೆಯದಾಗಿರುವ ಕಾರಣ ಇಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ ಮಾಡಬೇಕೆಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಹೊಸ ಪ್ರವಾಸಿ ಮಂದಿರದ ವಿವರಗಳು:

ಪ್ರವಾಸಿಮಂದಿರ ನಿವೇಶನದ ವಿಸ್ತೀರ್ಣ ೨ ಎಕರೆ ೩೦ ಗುಂಟೆ. ಹೊಸ ಪ್ರವಾಸಿಮಂದಿರವನ್ನು ಹಾಲಿ ಇರುವ ಪ್ರವಾಸಿ ಮಂದಿರದ ಮುಂದಿರುವ ಖಾಲಿ ಜಾಗದಲ್ಲಿ ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ನೆಲಮಹಡಿ ೫೨೦೦ ಚ.ಮೀ., ವಿವಿಐಪಿ ಕೊಠಡಿ-೨, ಸಾಮಾನ್ಯ ಕೊಠಡಿ-೨, ಕಚೇರಿ ಕೊಠಡಿ-೧, ಸಭಾಂಗಣ-೧. ಮೊದಲನೇ ಮಹಡಿ ೫೩೫ ಚ.ಮೀ. ವಿವಿಐಪಿ ಕೋಣೆ-೧, ವಿವಿಐಪಿ ಕೊಠಡಿ-೧, ಸಾಮಾನ್ಯ ಕೊಠಡಿ-೨, ನಿರೀಕ್ಷಣಾ ಕೊಠಡಿ, ಸಭಾಂಗಣ-೧. ಎರಡನೇ ಮಹಡಿ ೫೦೦ ಚ.ಮೀ., ೩ ವಿವಿಐಪಿ ಕೊಠಡಿ, ೧ ಕೊಠಡಿ- ನಿರೀಕ್ಷಣಾ ಕೊಠಡಿ. ಪೀಠೋಪಕರಣಗಳು, ಒಳಾಂಗಣ ರಸ್ತೆ, ಆವರಣ ಗೋಡೆ.

ಶಾಸಕರ ಪ್ರಶ್ನೆಗೆ ಉತ್ತರಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಹೊಸ ಪ್ರವಾಸಿಮಂದಿರ ನಿರ್ಮಾಣ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ. ಹೊಸ ಪ್ರವಾಸಿ ಮಂದಿರ ನಿರ್ಮಿಸಲು ಅನುದಾನದ ಲಭ್ಯತೆಯನುಸಾರ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಲಾಗುವುದು. ಹಳೆಯ ಪ್ರವಾಸಿ ಮಂದಿರವನ್ನು ಸುಸ್ಥಿತಿಯಲ್ಲಿಡಲು ಸರ್ಕಾರದಿಂದ ೧ ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಪ್ರವಾಸಿಮಂದಿರದ ನವೀಕರಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.