ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಆಶ್ವಾಸನೆ ನೀಡಿದರು.

ಕನ್ನಡಪ್ರಭವಾರ್ತೆ ಶನಿವಾರಸಂತೆ

ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಆಶ್ವಾಸನೆ ನೀಡಿದರು.

ಕೊಡ್ಲಿಪೇಟೆ ಕಿರಿಕೊಡ್ಲಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೊಡ್ಲಿಪೇಟೆ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನ ಸಾರ್ವಜನಿಕರ ಕುಂದು ಕೊರತೆ ಮತ್ತು ಆಹ್ವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸರ್ಕಾರ ಸಾರ್ವಜನಿಕರ ಕುಂದು ಕೊರತೆ ಸ್ವೀಕರಿಸಿ ಸ್ಥಳದಲ್ಲಿಯೇ ಸಮಸ್ಯೆ ಬಗ್ಗೆ ಪರಿಹಾರ ನೀಡುವ ಉದ್ದೇಶದಿಂದ ಜನಪ್ರತಿನಿದಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪ್ರಜಾಸೇವೆ ಆಂದೋಲನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಕಂದಾಯ ಇಲಾಖೆಯಲ್ಲಿ ಅಧಿಕಾರಿಗಳು ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಅರ್ಜಿದಾರರನ್ನು ಸತಾಯಿಸುತ್ತಾರೆ. ಅರ್ಜಿದಾರನ ಕೆಲಸ ಆಗುವುದಾದರೆ ಆಗುತ್ತದೆ ಅಥವಾ ಇಲ್ಲ ಎಂದು ಹೇಳಬೇಕು ಜನರನ್ನು ಸತಾಯಿಸುವುದು ಬೇಡ ಎಂದು ಬೇಸರ ವ್ಯಕ್ತ ಪಡಿಸಿದರು. ಕೊಡ್ಲಿಪೇಟೆ ಹೋಬಳಿಯಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತಿದೆ, ಕೊಡ್ಲಿಪೇಟೆ-ಮಲ್ಲಿಪಟ್ಟಣ ೧ ಕಿ.ಮೀ ವರೆಗೆ ರಸ್ತೆ ಅಭಿವೃದ್ದಿ ಪಡಿಸಲು ಕ್ರಮಕೈಗೊಳ್ಳಲಾಗಿದೆ. ಈ ಭಾಗದಲ್ಲಿ ಗ್ರಾಮೀಣ ಭಾಗದ ರಸ್ತೆಯನ್ನು ಅಭಿವೃದ್ದಿ ಪಡಿಸುವ ಚಿಂತನೆ ಇದೆ ಎಂದರು.

ಸೋಮವಾರಪೇಟೆ ತಹಸೀಲ್ದಾರ್‌ ಕೃಷ್ಣಮೂರ್ತಿ, ಉಪವಿಭಾಗದಿಕಾರಿ ನಿತಿನ್ ಚೆಕ್ಕಿ, ಸೋಮವಾರಪೇಟೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪರಮೇಶ್, ಡಿವೈಎಸ್‌ಪಿ ಚಂದ್ರಶೇಖರ್, ಸಿಐ ಕೃಷ್ಣರಾಜ್ ಹೈಕೋರ್ಟಿನ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ, ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಿ.ಎಂ.ಕಾಂತರಾಜ್ ಮತ್ತು ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.