ಈಗಾಗಲೇ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಇದೆ. ಇನ್ಮುಂದೆ ಗ್ರಾಪಂ ಮಟ್ಟದಲ್ಲಿಯೂ ಇಂತಹ ಸಮಿತಿ, ರಚನೆಯ ಚಿಂತನೆ ಸರ್ಕಾರ ಮಟ್ಟದಲ್ಲಿ ನಡೆಯುತ್ತಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಹೂವಿನಹಡಗಲಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಭಾಗ್ಯಲಕ್ಷ್ಮೀ ಯೋಜನೆಯಡಿ ರಾಜ್ಯದಲ್ಲಿ ₹117 ಕೋಟಿ ಹಣ ಮೃತ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನ ನೀಡುತ್ತೇವೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಪಟ್ಟಣದ ಅವರ ನಿವಾಸದಲ್ಲಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ, ಪಂಚ ಗ್ಯಾರಂಟಿ ಯೋಜನೆ ಸೌಲಭ್ಯವನ್ನು ತೆರಿಗೆ ಪಾವತಿದಾರರು ಪಡೆಯುತ್ತಿದ್ದಾರೆ, ಅಂಥವರನ್ನು ಪತ್ತೆ ಮಾಡಿ ಅರ್ಹರಿಗೆ ಸರ್ಕಾರಿ ಸೌಲಭ್ಯಗಳ ಪ್ರಯೋಜನಗಳು ಸಿಗಬೇಕೆಂಬ ನಿಟ್ಟಿನಲ್ಲಿ ಯೋಜನೆಗಳ ಪರಿಷ್ಕರಣೆ ನಡೆಯುತ್ತಿದೆ ಎಂದರು.ಈಗಾಗಲೇ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಇದೆ. ಇನ್ಮುಂದೆ ಗ್ರಾಪಂ ಮಟ್ಟದಲ್ಲಿಯೂ ಇಂತಹ ಸಮಿತಿ, ರಚನೆಯ ಚಿಂತನೆ ಸರ್ಕಾರ ಮಟ್ಟದಲ್ಲಿ ನಡೆಯುತ್ತಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ದೇಶ-ವಿದೇಶಗಳಲ್ಲಿ ಚರ್ಚೆಯಾಗುತ್ತಿದೆ. ಸಾಕಷ್ಟು ಕಡೆಗಳಲ್ಲಿ ಉತ್ತಮ ಯೋಜನೆ ಎಂದು ಪ್ರಶಂಸೆ ವ್ಯಕ್ತವಾಗಿದೆ ಎಂದು ಹೇಳಿದರು.ಹೂವಿನಹಡಗಲಿ ಕ್ಷೇತ್ರ ಅಭಿವೃದ್ಧಿ ವಿಚಾರದಲ್ಲಿ 10 ವರ್ಷ ಹಿಂದಕ್ಕೆ ಹೋಗಿ, ಶೂನ್ಯ ಸಾಧನೆಯಲ್ಲಿದೆ. ಕೆರೆಗಳಿಗೆ ನೀರು ತುಂಬಿಲ್ಲ, ಸಮರ್ಪಕವಾಗಿ ರೈತರ ಜಮೀನುಗಳಿಗೆ ನೀರು ಹರಿಸಲು ಕಾಲುವೆಗಳಿಗೆ ನೀರಿಲ್ಲ, ಓಡಾಡಲು ಸರಿಯಾಗಿ ರಸ್ತೆ ಇಲ್ಲ, ಒಟ್ಟಾರೆ ಕ್ಷೇತ್ರದ ಹಿತ ಕಾಯುವವರಿಲ್ಲದಂತಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕಾಗಿ, ಅನ್ಯಾಯ, ಲೋಪಗಳನ್ನು ಪತ್ತೆ ಹಚ್ಚಿ ಸರಿಪಡಿಸಬೇಕೆಂಬ ಸೂಚನೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದರು.ಕೇಂದ್ರ ಬಿಜೆಪಿ ಸರ್ಕಾರ ನೀಟ್ ಪರೀಕ್ಷೆ ಸರಿಯಾಗಿ ನಡೆಸಿಲ್ಲ, ಇದನ್ನು ವಿರೋಧಿಸಿ ಪ್ರತಿಭಾವಂತ ಯುವಕರು ಪ್ರತಿಭಟನೆ ಮಾಡಿದರೆ, ಕೇಂದ್ರ ಸರ್ಕಾರ ಪೊಲೀಸರ ಮೂಲಕ ಹಲ್ಲೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ದ್ರೋಹ ಮಾಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಲು ಜನ ಕಾಯುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ. ಕೊಟ್ರೇಶ, ಬಿ. ಹನುಮಂತಪ್ಪ, ಪಿ.ಟಿ. ಭರತ್, ಸೋಗಿ ಹಾಲೇಶ, ಪಾಟೀಲ್ ಬಸವನಗೌಡ, ಪಿ. ವಿಜಯಕುಮಾರ, ಕೆ.ಎಸ್. ಶಾಂತನಗೌಡ, ಗುರುವಿನ ರಾಜು, ಜಿ. ವಸಂತ, ನವಲಿ ಗುಡದಪ್ಪ ಇತರರಿದ್ದರು.