ಸಾರಾಂಶ
ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ, ಹುಲಿಗಿ ರೈಲು ನಿಲ್ಗಾಣಕ್ಕೆ ಶ್ರೀ ಹುಲಿಗೆಮ್ಮ ದೇವಿ ಹಾಗೂ ಭಾನಾಪುರ ರೈಲು ನಿಲ್ದಾಣಕ್ಕೆ ಮಹಾತ್ಮಾ ಗಾಂಧೀಜಿ ಹೆಸರು ನಾಮಕರಣ ಮಾಡುವ ಪ್ರಸ್ತಾಪ ಸರ್ಕಾರದ ಹಂತದಲ್ಲಿದೆ. ಆದರೆ, ಜಿಲ್ಲಾ ಕೇಂದ್ರ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಯಾವಾಗ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.
ಕೊಪ್ಪಳ ರೈಲ್ವೆ ಸ್ಟೇಷನ್ ನಾಮಕರಣ ಯಾವಾಗ?, ಸ್ಥಳೀಯರ ಪ್ರಶ್ನೆ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ, ಹುಲಿಗಿ ರೈಲು ನಿಲ್ಗಾಣಕ್ಕೆ ಶ್ರೀ ಹುಲಿಗೆಮ್ಮ ದೇವಿ ಹಾಗೂ ಭಾನಾಪುರ ರೈಲು ನಿಲ್ದಾಣಕ್ಕೆ ಮಹಾತ್ಮಾ ಗಾಂಧೀಜಿ ಹೆಸರು ನಾಮಕರಣ ಮಾಡುವ ಪ್ರಸ್ತಾಪ ಸರ್ಕಾರದ ಹಂತದಲ್ಲಿದೆ. ಆದರೆ, ಜಿಲ್ಲಾ ಕೇಂದ್ರ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಯಾವಾಗ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.ಸಂಸದ ರಾಜಶೇಖರ ಹಿಟ್ನಾಳ ಸಲ್ಲಿಸಿದ ಮನವಿ ಪರಿಗಣಿಸಿರುವ ಭಾರಿ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಸಚಿವರು ಸರ್ಕಾರಕ್ಕೆ ಅಗತ್ಯ ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಸಹ ಪ್ರಸ್ತಾವನೆಗೆ ಸ್ಪಂದಿಸಿದ್ದು, ಶೀಘ್ರದಲ್ಲಿಯೇ ರಾಜ್ಯ ಸರ್ಕಾರದಿಂದ ಅನುಮೋದಿಸಿ, ಕೇಂದ್ರಕ್ಕೆ ಕಳುಹಿಸಿಕೊಡಲಿದ್ದಾರೆ. ಕೇಂದ್ರ ಸರ್ಕಾರದಿಂದ ಅನುಮತಿ ದೊರೆಯುತ್ತಿದ್ದಂತೆ ರೈಲ್ವೆ ಇಲಾಖೆ ಅದನ್ನು ಕಾರ್ಯಗತಗೊಳಿಸುತ್ತದೆ.ಆದರೆ, ಕೊಪ್ಪಳ ರೈಲ್ವೆ ನಿಲ್ದಾಣದ ಪ್ರಸ್ತಾಪ ಇರದೇ ಇರುವುದು ಇಲ್ಲಿನ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಕದ ಹುಲಿಗಿ ರೈಲು ನಿಲ್ದಾಣ ಮತ್ತು ಭಾನಾಪುರ ರೈಲ್ವೆ ನಿಲ್ದಾಣಕ್ಕೆ ಮರು ನಾಮಕರಣ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಮಧ್ಯದಲ್ಲಿಯೇ ಇರುವ ಕೊಪ್ಪಳ ರೈಲ್ವೆ ನಿಲ್ದಾಣವನ್ನು ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.ಗವಿಸಿದ್ಧೇಶ್ವರ ರೈಲು ನಿಲ್ದಾಣ:
ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಶ್ರೀ ಗವಿಸಿದ್ಧೇಶ್ವರ ಹೆಸರು ಇಡುವಂತೆ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಲಾಯಿತಾದರೂ ನಂತರ ಅದು ಕಾರ್ಯಗತವಾಗುವ ದಿಸೆಯಲ್ಲಿ ಯಾವುದೇ ಪ್ರಸ್ತಾವನೆ ಸಲ್ಲಿಸುವ ಪ್ರಕ್ರಿಯೆ ಸರ್ಕಾರದ ಹಂತದಲ್ಲಿ ನಡೆಯಲೇ ಇಲ್ಲ.ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಯಾವ ಹೆಸರು ಇಡಬೇಕು ಎನ್ನುವ ಕುರಿತು ಒಮ್ಮತಕ್ಕೆ ಬರಲು ಸಾಧ್ಯವಾಗದೆ ಇರುವುದರಿಂದ ಸದ್ಯಕ್ಕೆ ಪ್ರಸ್ತಾವನೆ ಕೈಬಿಡಲಾಗಿದೆ ಎನ್ನಲಾಗುತ್ತಿದೆ.
ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಶ್ರೀ ಗವಿಸಿದ್ಧೇಶ್ವರರು ಸೇರಿದಂತೆ ಹಲವರ ಹೆಸರುಗಳು ಪ್ರಸ್ತಾಪ ಇರುವುದರಿಂದ ಈಗ ಕೇವಲ ಐತಿಹಾಸಿಕವಾಗಿರುವ ರೈಲ್ವೆ ನಿಲ್ದಾಣಗಳ ನಾಮಕರಣಕ್ಕೆ ಮಾತ್ರ ಪ್ರಸ್ತಾವನೆ ಸಲ್ಲಿಸಲಾಗಿದ್ದು, ರಾಜ್ಯ ಸರ್ಕಾರದ ಅನುಮೋದನೆಯ ಬಳಿಕ ಕೇಂದ್ರದ ಅನುಮೊದನೇ ದೊರೆಯುತ್ತಿದ್ದಂತೆ ಕಾರ್ಯಗತವಾಗಲಿದೆ.2ರಂದು ಭಾನಾಪುರ ರೈಲ್ವೆ ಸೇತುವೆ ಉದ್ಘಾಟನೆ:
ಡಿ. 2ರಂದು ಭಾನಾಪುರ ರೈಲ್ವೆ ಸೇತುವೆ ಸಾರ್ವಜನಿಕರಿಗೆ ಸಂಚಾರ ಪ್ರಾರಂಭವಾಗಲಿದೆ. ರೈಲ್ವೆ ಇಲಾಖೆ ಈ ಕುರಿತು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಂದು ಉದ್ಘಾಟನಾ ಸಮಾರಂಭವೂ ನಡೆಯಲಿದೆ.ಇನ್ನು ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿರುವ ರೈಲ್ವೆ ಸೇತುವೆಯಲ್ಲಿ ಡಿ. 25ರಂದು ಸಂಚಾರ ಶುರುವಾಗಲಿದೆ. ಕಳೆದೆರಡು ವರ್ಷಗಳಿಂದ ಬಂದಾಗಿರುವ ರಸ್ತೆಯಲ್ಲಿ ಕೊನೆಗೂ ವಾಹನಗಳ ಸಂಚಾರ ಪ್ರಾರಂಭವಾಗಲಿದೆ.
ನಗರದ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿ ರೈಲ್ವೆ ಸೇತುವೆ ಪೂರ್ಣಗೊಂಡಿದ್ದರಿಂದ ರಸ್ತೆ ನಿರ್ಮಾಣ ಆಗದೆ ಇರುವುದರಿಂದ ವಾಹನ ಸಂಚಾರ ಸಾದಧ್ಯವಾಗಿಲ್ಲ. ಹೀಗಾಗಿ, ಇಲ್ಲಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಶುರುವಾಗಲಿದೆ. ಹಾಗೆಯೇ ರಸ್ತೆ ಅಗಲೀಕರಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.