ಜಾತಿಗಣತಿ ನಡೆಸಲು ₹624 ಕೋಟಿ ವೆಚ್ಚಕ್ಕೆ ಪ್ರಸ್ತಾಪ

| N/A | Published : Aug 07 2025, 12:46 AM IST / Updated: Aug 07 2025, 06:15 AM IST

Vidhan soudha

ಸಾರಾಂಶ

ರಾಜ್ಯದಲ್ಲಿ ಮತ್ತೊಮ್ಮೆ ಸೆ.22 ರಿಂದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ನಡೆಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಸಮೀಕ್ಷೆ ನಡೆಸುವ ಕುರಿತು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ನಿರ್ಧಾರ ಮಾಡಲಿದೆ.

ಶ್ರೀಕಾಂತ್ ಎನ್‌.ಗೌಡಸಂದ್ರ

 ಬೆಂಗಳೂರು :  ರಾಜ್ಯದಲ್ಲಿ ಮತ್ತೊಮ್ಮೆ ಸೆ.22 ರಿಂದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ನಡೆಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಸಮೀಕ್ಷೆ ನಡೆಸುವ ಕುರಿತು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ನಿರ್ಧಾರ ಮಾಡಲಿದೆ. ಆದರೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಗಾಗಿ ಬರೋಬ್ಬರಿ 624 ಕೋಟಿ ರು. ವೆಚ್ಚ ಆಗುವುದಾಗಿ ಪ್ರಸ್ತಾವನೆ ಸಲ್ಲಿಸಿದೆ.

ರಾಜ್ಯದಲ್ಲಿ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ 168 ಕೋಟಿ ರು. ವೆಚ್ಚ ಆಗಿತ್ತು. ಇದೀಗ ಮಧುಸೂದನ್‌ ನಾಯ್ಕ್‌ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗ 624 ಕೋಟಿ ರು. ವೆಚ್ಚದಲ್ಲಿ ಸಮೀಕ್ಷೆ ನಡೆಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಹೀಗಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ನಿರ್ಧರಿಸುವ ಗುರುವಾರದ ಸಚಿವ ಸಂಪುಟ ಸಭೆ ಮಹತ್ವ ಪಡೆದುಕೊಂಡಿದೆ. ಆಯೋಗ ಸಲ್ಲಿಸಿರುವ ಪ್ರಸ್ತಾವನೆ ಪ್ರಕಾರ 624 ಕೋಟಿ ರು. ವೆಚ್ಚದಲ್ಲೇ ಸಮೀಕ್ಷೆಗೆ ಅನುಮೋದನೆ ನೀಡಲಾಗುತ್ತದೆಯೇ ಅಥವಾ ಆರ್ಥಿಕ ಇಲಾಖೆ ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಷ್ಕರಣೆ ಮಾಡಲಿದ್ದಾರೆಯೇ ಎಂಬ ಕುರಿತು ಕುತೂಹಲ ಮೂಡಿದೆ.

1.35 ಲಕ್ಷ ಸಿಬ್ಬಂದಿ ಬಳಕೆ, 624 ಕೋಟಿ ವೆಚ್ಚ?:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.23 ರಂದು ಹಿಂದುಳಿದ ವರ್ಗಗಳ ಆಯೋಗದ ಸಭೆ ನಡೆಸಿ ಸೆ.22 ರಿಂದ ಅ.7 ರವರೆಗೆ 15 ದಿನಗಳಲ್ಲಿ ಸಮೀಕ್ಷೆ ನಡೆಸುವುದಾಗಿ ದಿನಾಂಕ ಪ್ರಕಟಿಸಿದ್ದರು. ಜತೆಗೆ ಅಕ್ಟೋಬರ್‌ ಅಂತ್ಯದೊಳಗಾಗಿ ವರದಿ ನೀಡುವಂತೆ ಸೂಚಿಸಿದ್ದರು.

ಆದರೆ, ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ 20 ದಿನಗಳ ಕಾಲ ಸಮೀಕ್ಷೆ ನಡೆಸುವುದಾಗಿ ಹೇಳಿದೆ. ಜತೆಗೆ ಹಿಂದುಳಿದ ವರ್ಗಗಳ ಇಲಾಖೆ ಮೂಲಕ ಆರ್ಥಿಕ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ 624 ಕೋಟಿ ರು.ಗೆ ಅನುಮೋದನೆ ಕೋರಿದೆ. ಈ ಪೈಕಿ ಸಮೀಕ್ಷೆಯ ಪ್ರಚಾರ ಅಭಿಯಾನಕ್ಕೆ 30 ಕೋಟಿ ರು. ಪ್ರಸ್ತಾಪಿಸಿದೆ.

ಜತೆಗೆ 1.35 ಲಕ್ಷ ಸಿಬ್ಬಂದಿ ಬಳಕೆ ಮಾಡಿಕೊಳ್ಳಲಿದ್ದು, 1.25 ಲಕ್ಷ ಶಿಕ್ಷಕರು ಗಣತಿದಾರರಾಗಿ ಹಾಗೂ ಸಿಬ್ಬಂದಿ ತರಬೇತಿದಾರರು, ಡಾಟಾ ಎಂಟ್ರಿ ಆಪರೇಟರ್‌, ಮೇಲ್ವಿಚಾರಕರು ಸೇರಿ 10,000 ಇತರೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಪ್ರೌಢಶಿಕ್ಷಕರು, ಪ್ರಾಥಮಿಕ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗೆ 20 ದಿನಗಳ ಸಮೀಕ್ಷೆಗೆ 30,000 ರು.ಗಳಿಂದ 50,000 ರು.ವರೆಗೆ ಗೌರವ ವೇತನ ನೀಡಬೇಕೆಂದು ಪ್ರಸ್ತಾಪಿಸಿದ್ದು, ಬಹುತೇಕ ಮೊತ್ತ ವೇತನಕ್ಕಾಗಿಯೇ ವೆಚ್ಚ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ರಜಾ ದಿನಗಳಲ್ಲಿಯೇ ಸಮೀಕ್ಷೆ:

ಆಯೋಗವು ರಜಾ ದಿನಗಳಲ್ಲಿ ಮಾತ್ರ ಸಮೀಕ್ಷೆ ನಡೆಸಲು ಆದ್ಯತೆ ನೀಡುವುದಾಗಿ ತಿಳಿಸಿದೆ. ಮುಖ್ಯವಾಗಿ ದಸರಾ ರಜೆಗಳಲ್ಲಿ ಶಿಕ್ಷಕರನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗುವುದು. ಈ ಅವಧಿಯಲ್ಲಿ ಪೂರ್ಣಗೊಳ್ಳದಿದ್ದರೆ ಬಳಿಕ ಸರ್ಕಾರಿ ರಜಾ ದಿನಗಳಲ್ಲಿ ಮಾತ್ರ ಸಮೀಕ್ಷೆ ನಡೆಸಬೇಕು ಎಂದು ತೀರ್ಮಾನಿಸಲಾಗಿದೆ. ತೆಲಂಗಾಣ ಸರ್ಕಾರ ಮಧ್ಯಾಹ್ನ 2 ಗಂಟೆಗೆ ಶಾಲೆಗಳಿಗೆ ರಜೆ ನೀಡಿ ಸಮೀಕ್ಷೆ ನಡೆಸಿತ್ತು. ಆದರೆ ಇದಕ್ಕೆ ರಾಜ್ಯದಲ್ಲಿ ಅವಕಾಶ ಇಲ್ಲ ಎಂದು ಅಧಿಕಾರಿಗಳ ಹಂತದಲ್ಲಿ ತೀರ್ಮಾನವಾಗಿದೆ ಎಂದು ‘ಕನ್ನಡಪ್ರಭ’ಕ್ಕೆ ಉನ್ನತ ಮೂಲಗಳು ತಿಳಿಸಿವೆ.

ಮರು ಸಮೀಕ್ಷೆ ಏಕೆ?:

2015ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಾಂತರಾಜು ನೇತೃತ್ವದ ಆಯೋಗ ರಚಿಸಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ತೀರ್ಮಾನಿಸಿದ್ದರು. ಕಾಂತರಾಜು ಹಾಗೂ ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆಯ ಆಯೋಗ ಒಟ್ಟು 168 ಕೋಟಿ ರು. ವೆಚ್ಚ ಮಾಡಿ ವರದಿ ಸಲ್ಲಿಸಿತ್ತು.

ಆದರೆ, ಸಮೀಕ್ಷೆ ಮಾಡಿ ಹತ್ತು ವರ್ಷಗಳು ಕಳೆದಿದೆ. ಹತ್ತು ವರ್ಷಗಳಾದ ನಂತರ ಹೊಸದಾಗಿ ಸಮೀಕ್ಷೆ ನಡೆಸಬೇಕೆಂದು ಹಿಂದುಳಿದ ವರ್ಗಗಳ ಆಯೋಗದ ಸೆಕ್ಷನ್ 11(1) ರಲ್ಲಿ ಹೇಳಲಾಗಿದೆ. ಹೀಗಾಗಿ ಹೊಸದಾಗಿ ಸಮೀಕ್ಷೆ ನಡೆಸಬೇಕು ಎಂದು ಏ.17 ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ಸಂಬಂಧ ಮಧುಸೂದನ್‌ ನಾಯ್ಕ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ.

Read more Articles on