ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 24* 7 ಆಸ್ಪತ್ರೆಯನ್ನಾಗಿ ಮತ್ತು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು

ರಿಪ್ಪನ್‍ಪೇಟೆ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 24* 7 ಆಸ್ಪತ್ರೆಯನ್ನಾಗಿ ಮತ್ತು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ರಿಪ್ಪನ್‍ಪೇಟೆಯ ವಿನಾಯಕ ದೇವಸ್ಥಾನ ಹಿಂಭಾಗದ ವೀರಸಾವರ್ಕರ್ ಲಿಂಕ್ ರಸ್ತೆಗೆ ಸರ್ಕಾರದ ವಿಶೇಷ ಅನುದಾನದಡಿ 25 ಲಕ್ಷ ರು. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನಾನು ಈ ಹಿಂದೆ ಶಾಸಕನಾಗಿದ್ದ ಆವಧಿಯಲ್ಲಿ ಹೊಸನಗರ ಬಸ್ ನಿಲ್ದಾಣ, ಅಗ್ನಿಶಾಮಕ ಕಚೇರಿ, ತಾಲೂಕು ಕಚೇರಿ, ಲೋಕೋಪಯೋಗಿ ಇಲಾಖೆಯ ಕಚೇರಿ ಹೀಗೆ ಹಲವು ಆಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಅಭಿವೃದ್ಧಿ ಪಡಿಸಿದ್ದು, ಈಗ ರಿಪ್ಪನ್‍ಪೇಟೆಯ ವ್ಯಾಪ್ತಿಯಲ್ಲೂ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರುವುದರೊಂದಿಗೆ ಸಂಪರ್ಕ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ಹೇಳಿದ ಅವರು, ಸ್ಥಳೀಯ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಬರುವ ಲಿಂಕ್ ರಸ್ತೆಗಳನ್ನು ಸಂಪೂರ್ಣವಾಗಿ ಸಿಸಿ ರಸ್ತೆಯನ್ನಾಗಿ ಮಾಡಲಾಗುತ್ತಿದೆ ಎಂದರು.ಪಕ್ಷತೀತವಾಗಿ, ಜಾತ್ಯಾತೀತವಾಗಿ ಸರ್ವರನ್ನು ಸಮಾನವಾಗಿ ಕಾಣುವುದರೊಂದಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಹವಾಲು ಹೊತ್ತು ಬಂದವರ ಕೆಲಸ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿವುದಾಗಿ ಭರವಸೆ ನೀಡಿದರು.

ಜನ ನನಗೆ ಚುನಾವಣೆಯಲ್ಲಿ ಮತನೀಡಿ ಗೆಲ್ಲಿಸಿದ್ದಾರೆ, ಅವರ ಋಣ ತೀರಿಸುವ ಕೆಲಸವನ್ನು ಮಾಡುವುದು ನನ್ನ ಮೊದಲ ಕರ್ತವ್ಯವಾಗಿದೆ. ಅವರ ಪ್ರೀತಿ ವಿಶ್ವಾಸಕ್ಕೆ ಎಂದು ಚ್ಯುತಿ ಬರದಂತೆ ನೋಡಿಕೊಳ್ಳುವುದು ಜನಪ್ರತಿನಿಧಿಯಾದ ನನ್ನ ಕರ್ತವ್ಯ ಎಂದರು.

ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆರಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸುವುದಾಗಿ ಹೇಳಿದ ಅವರು, ನಾನು ಭರವಸೆಯನ್ನು ಕೊಡುವುದಿಲ್ಲ. ಆ ವಿಚಾರದಲ್ಲಿ ನನ್ನ ಸತತ ಪ್ರಯತ್ನ ಇದೆ ಎಂದು ಹೇಳಿದರು.ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಮಾತನಾಡಿ, 25 ಲಕ್ಷ ರು. ವೆಚ್ಚದ ಕಾಂಕ್ರೇಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಗಾಗಿ ಆಗಮಿಸಿದ ಗೋಪಾಲಕೃಷ್ಣ ಬೇಳೂರು ಅವರು ಮುಂದಿನ ದಿನಗಳಲ್ಲಿ ಮಂತ್ರಿಯಾಗಿ ನೋಡುವ ಕಾಲ ದೂರವಿಲ್ಲ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುದೀಂದ್ರಪೂಜಾರಿ, ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ಚಂದ್ರಮೌಳಿಗೌಡರು, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ವಿ.ಈಶ್ವರಪ್ಪಗೌಡರು, ಹೋಬಳಿಘಟಕದ ಕಾಂಗ್ರೆಸ್ ಅಧ್ಯಕ್ಷ ಗಣಪತಿ ಗವಟೂರು, ಗ್ರಾಮ ಪಂಚಾಯಿತ್ ಸದಸ್ಯರಾದ ಡಿ.ಈ.ಮಧುಸೂದನ್, ಎನ್.ಚಂದ್ರೇಶ್, ಪ್ರಕಾಶಪಾಲೇಕರ್, ಮಹಾಲಕ್ಷ್ಮಿ, ಆಶ್ವಿನಿರವಿಶಂಕರ, ಸಾರಾಭಿ, ಅನುಪಮರಾಕೇಶ್, ಸೊಸೈಟಿ ಅಧ್ಯಕ್ಷ ಪರಮೇಶ, ರವೀಂದ್ರಕೆರೆಹಳ್ಳಿ, ಕೆ.ದೇವರಾಜ್ ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.