ಚುನಾವಣಾ ಆಯೋಗದ ನಿರ್ದೇಶನದನ್ವಯ 1,200ಕ್ಕಿಂತ ಅಧಿಕ ಮತದಾರರಿರುವ ಮತಗಟ್ಟೆಗಳನ್ನು ತರ್ಕಬದ್ಧಗೊಳಿಸುವ ಪ್ರಸ್ತಾವನೆಗಳನ್ನು ಆಯಾ ತಾಲೂಕಿನ ತಹಸೀಲ್ದಾರರಿಂದ ಹಾಗೂ ಎಆರ್‌ಒಗಳಿಂದ ಪರಿಶೀಲಿಸಿ, ಹೊಸ ಮತಗಟ್ಟೆಗೆ ಸ್ಥಾಪನೆಗೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಹಾವೇರಿ: ಚುನಾವಣಾ ಆಯೋಗದ ನಿರ್ದೇಶನದನ್ವಯ 1,200ಕ್ಕಿಂತ ಅಧಿಕ ಮತದಾರರಿರುವ ಮತಗಟ್ಟೆಗಳನ್ನು ತರ್ಕಬದ್ಧಗೊಳಿಸುವ ಪ್ರಸ್ತಾವನೆಗಳನ್ನು ಆಯಾ ತಾಲೂಕಿನ ತಹಸೀಲ್ದಾರರಿಂದ ಹಾಗೂ ಎಆರ್‌ಒಗಳಿಂದ ಪರಿಶೀಲಿಸಿ, ಹೊಸ ಮತಗಟ್ಟೆಗೆ ಸ್ಥಾಪನೆಗೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಕೋರ್ಟ್‌ ಹಾಲ್‌ನಲ್ಲಿ ಬುಧವಾರ ಮತಗಟ್ಟೆಗಳ ಪುನರ್ ರಚನೆ ಕುರಿತು ರಾಜಕೀಯ ಪಕ್ಷಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿ ಮತಗಟ್ಟೆಯಲ್ಲಿ ಗರಿಷ್ಠ 1200 ಮತದಾರರು ಇರುವಂತೆ, ಮತದಾರರು ತಾವು ವಾಸಿಸುವ ಪ್ರದೇಶದ ಮತಗಟ್ಟೆಯಲ್ಲಿ ಮತ ಚಲಾಯಿಸುವಂತೆ ಹಾಗೂ 2 ಕಿ.ಮೀ. ಅಂತರದೊಳಗೆ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಮತಗಟ್ಟೆಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಒಟ್ಟು 1482 ಮತಗಟ್ಟೆಗಳ ಪೈಕಿ 93 ಮತಗಟ್ಟೆಗಳಲ್ಲಿ 1,200ಕ್ಕಿಂತ ಅಧಿಕ ಮತದಾರರಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ 13, ಶಿಗ್ಗಾಂವಿ-29, ಹಾವೇರಿ-11, ಬ್ಯಾಡಗಿ-8, ಹಿರೇಕೆರೂರು-5, ರಾಣಿಬೆನ್ನೂರು-3 ಸೇರಿ 69 ಹೊಸ ಮತಗಟ್ಟೆ ಗುರುತಿಸಲಾಗಿದೆ. 1200ಕ್ಕಿಂತ ಅಧಿಕ ಇರುವ ಮತದಾರರನ್ನು 1200ಕ್ಕಿಂತ ಕಡಿಮೆ ಇರುವ ಪಕ್ಕದ ಮತಗಟ್ಟೆ ವಿಲೀನಗೊಳಿಸಲು 25 ಮತಗಟ್ಟೆ ಹಾಗೂ 2 ಕಿ.ಮೀ. ದೂರ ಅಂತರವಿರುವ 8 ಹಾಗೂ ಶಿಥಿಲಗೊಂಡ ಮತಗಟ್ಟೆಯಿಂದ ಪಕ್ಕದ ಸುಸಜ್ಜಿತ ಮತಗಟ್ಟೆಗೆ ಸ್ಥಳಾಂತರಕ್ಕೆ ಐದು ಮತಗಟ್ಟೆ ಗುರುತಿಸಲಾಗಿದೆ ಎಂದರು.

ರಾಜ್ಯಕ್ಕೆ 2ನೇ ಸ್ಥಾನ: ಜಿಲ್ಲೆಯಲ್ಲಿ 12,20,090 ಗಣಕೀಕರಣ ಮಾಡಲಾಗಿದ್ದು, ರಾಜ್ಯಕ್ಕೆ 2ನೇ ಸ್ಥಾನದಲ್ಲಿದೆ. ಸ್ಥಳಾಂತರ, ವಲಸೆ, ಮರಣ, ದ್ವಿಪ್ರತಿ, ಇತರ-1,15,252 ಮತದಾರರನ್ನು ಗುರುತಿಸಲಾಗಿದ್ದು, ಈ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಪರಿಶೀಲಿಸಬಹುದು. ಸಣ್ಣಪುಟ್ಟ ಲೋಪದೋಷಗಳಿದ್ದರೆ ನಮ್ಮ ಗಮನಕ್ಕೆ ತಂದರೆ ಅವುಗಳನ್ನು ಸರಿಪಡಿಸಲಾಗುವುದು. ಅದೇ ರೀತಿ 16,878 ಡುಪ್ಲಿಕೇಷನ್ ಮತದಾರರನ್ನು ಗುರುತಿಸಲಾಗಿದ್ದು, ಅವರಿಗೆ ನೋಟಿಸ್ ಕಳುಹಿಸಲಾಗುವುದು. ಮತಗಟ್ಟೆವಾರು ಹಾಜರಾಗಿ ಅಗತ್ಯ ದಾಖಲೆ ಸಲ್ಲಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು.

ಕರಡು ಮತದಾರರ ಪಟ್ಟಿ ಪ್ರಕಟಣೆಗೆ ಮೊದಲು ವಿಧಾನಸಭಾ ಕ್ಷೇತ್ರವಾರು ಹಾಗೂ ಮತಗಟ್ಟೆವಾರು ಮತದಾರರ ಪಟ್ಟಿಯನ್ನು ವಿತರಣೆ ಮಾಡಲಾಗುತ್ತಿದೆ. ಕರಡು ಮತದಾರರ ಪಟ್ಟಿ ಪ್ರಕಟಣೆ ನಂತರ ಸಹ ತಿದ್ದುಪಡಿ, ಸ್ಥಳಾಂತರ, ಸೇರ್ಪಡೆಗೆ ಅವಕಾಶವಿರುತ್ತದೆ ಎಂದರು.

ಹಾವೇರಿ ನಗರದ ವಾರ್ಡ್ 7, 8 ಹಾಗೂ 9ರ ಮತದಾರರಿಗೆ ಅವರು ವಾಸಿಸುವ ಪ್ರದೇಶಕ್ಕೆ ಸಮೀಪದಲ್ಲಿ ಹೊಸ ಮತಗಟ್ಟೆ ಸ್ಥಾಪನೆಗೆ ಕ್ರಮವಹಿಸುವಂತೆ ರಾಜಕೀಯ ಪಕ್ಷಗಳ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಮತದಾರರು ವಾಸಿಸುವ ಪ್ರದೇಶದಲ್ಲೇ ಮತಗಟ್ಟೆ ಸ್ಥಾಪನೆ ಕಾರ್ಯ ಮಾಡಲಾಗುತ್ತಿದೆ. ಈ ಕುರಿತು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್., ರಾಜಕೀಯ ಪಕ್ಷಗಳ ಮುಖಂಡರಾದ ಶಿವರಾಜ ಸಜ್ಜನರ, ಶಂಕರ ಮೆಹರವಾಡೆ, ಅಮೀರಜಾನ ಬೇಪಾರಿ, ಹನುಮಂತಪ್ಪ ಕಬ್ಬಾರ, ಚುನಾವಣಾ ತಹಸೀಲ್ದಾರ್ ಅಮೃತಗೌಡ ಪಾಟೀಲ ಇತರರಿದ್ದರು.