ತಲಕಾಡು ಪಪಂ ಆಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ...!

| Published : Jan 30 2024, 02:06 AM IST

ಸಾರಾಂಶ

ಗಂಗರಸರ ಕಾಲದಲ್ಲಿ 700 ವರ್ಷ ರಾಜಧಾನಿಯಾಗಿ ಮೆರೆದ ತಲಕಾಡು, ಟಿ.ನರಸೀಪುರ ಕಪಿಲಾ ಕಾವೇರಿ ಹಳೆಯ ಸೇತುವೆ ನಿರ್ಮಾಣದ ಮುನ್ನ ತಾಲೂಕು ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸಿತ್ತು. 1960ರಲ್ಲಿ ಮೇಲ್ದರ್ಜೆ ಮುನ್ಸೀಪಾಲಿಟಿ ನಂತರ 1973ರ ನಂತರ ಪಟ್ಟಣ ಪುರಸಭೆ, 1992ರಲ್ಲಿ ಮಂಡಲ ಪಂಚಾಯಿತಿಯಾಗಿ, ಪ್ರಸ್ತುತ 30 ವರ್ಷದಿಂದ ಗ್ರಾಪಂ ದರ್ಜೆಯಲ್ಲಿ ಆಡಳಿತ ನಿರ್ವಹಿಸುತ್ತಿದೆ.

ಅಕ್ರಂಪಾಷ ತಲಕಾಡು

ಕನ್ನಡಪ್ರಭ ವಾರ್ತೆ ತಲಕಾಡು

ತಲಕಾಡು ಪಪಂ ಆಗಿ ಮೇಲ್ದರ್ಜೆಗೇರಿಸಲು ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಸೂಚನೆ ಮೇರೆಗೆ ಸ್ಥಳೀಯ ಗ್ರಾಪಂ ಅಧಿಕಾರಿಗಳು ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಕಡತ ಸಲ್ಲಿಸಲು ತ್ವರಿತ ಸಿದ್ಧತೆ ನಡೆಸಿದೆ.

ಮೇಲ್ದರ್ಜೆಗೇರಿಸಲು ತಲಕಾಡು, ಟಿ. ಬೆಟ್ಟಹಳ್ಳಿ, ವಡೆಯಾಂಡಹಳ್ಳಿ ಮೂರು ಗ್ರಾಮಗಳ ಡಿಜಿಟಲ್ ನಕಾಶೆ ಅವಶ್ಯಕವಾಗಿದ್ದು, ಇದರ ಸಿದ್ಧತೆ ನಡೆಸಿರುವ ಇಲ್ಲಿನ ಗ್ರಾಪಂ, ಪಪಂ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಸಲ್ಲಿಸಬೇಕಾದ ಅಗತ್ಯ ದಾಖಲೆ ಮಾಹಿತಿಗಳ ಕ್ರೂಢಿಕರಣಕ್ಕೆ ಮುಂದಾಗಿದೆ.

ಈ ಹಿಂದೆ ಜಿಲ್ಲಾ ನಗರಾಭಿವೃದ್ಧಿ ಇಲಾಖೆಯ ಕೋಶಕ್ಕೆ ಪಪಂ ಮೇಲ್ದರ್ಜೆಗೇರಿಸಲು ತಾಲೂಕು ತಹಸೀಲ್ದಾರ್, ತಾಪಂ ಇಒ, ಸಿಇಒ, ಜಿಲ್ಲಾಧಿಕಾರಿ ಕಚೇರಿ ಮೂಲಕ ಕಳುಹಿಸಿದ್ದ ಕಡತವನ್ನು, ಮತ್ತೆ ಹೊಸದಾಗಿ ಪಂಚಾಯಿತಿ ನಡಾವಳಿ ಹಾಗು ಪೂರಕ ದಾಖಲೆಗಳೊಂದಿಗೆ ಮರು ಪ್ರಸ್ತಾವನೆ ಸಲ್ಲಿಸಲು ನಗರಾಭಿವೃದ್ದಿ ಕೋಶದಲ್ಲಿನ ಪಂಚಾಯಿತಿಗೆ ಕಡತ ಮರಳಿಸಿದೆ.

ಹೀಗಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸೂಚನೆಯಂತೆ ಕಡತ ಮರು ಪ್ರಸ್ತಾವನೆ ಸಲ್ಲಿಸಲು ಪಂಚಾಯಿತಿ ಭರದ ಸಿದ್ಧತೆ ನಡೆಸಿದೆ. ಇದಕ್ಕಾಗಿಯೇ ಜಿಲ್ಲೆಯಲ್ಲಿ ಈಗಾಗಲೆ ಮೇಲ್ದರ್ಜೆಗೆರಿರುವ ಗ್ರಾಪಂಗಳು ಸರ್ಕಾರಕ್ಕೆ ಸಲ್ಲಿಸಿರುವ ಮಾಹಿತಿ ಮಾದರಿ ತರಿಸಿಕೊಂಡಿರುವ ಇಲ್ಲಿನ ಪಿಡಿಒ ಮಹೇಶ್ ಅದರಂತೆ ಸರ್ಕಾರಕ್ಕೆ ಮರುಪ್ರಸ್ತಾವನೆ ಸಲ್ಲಿಸಲು ಮುಂದಾಗಿದ್ದಾರೆ.

ತಲಕಾಡು ತಾಲೂಕು ಆಗಿತ್ತು..!

ಗಂಗರಸರ ಕಾಲದಲ್ಲಿ 700 ವರ್ಷ ರಾಜಧಾನಿಯಾಗಿ ಮೆರೆದ ತಲಕಾಡು, ಟಿ.ನರಸೀಪುರ ಕಪಿಲಾ ಕಾವೇರಿ ಹಳೆಯ ಸೇತುವೆ ನಿರ್ಮಾಣದ ಮುನ್ನ ತಾಲೂಕು ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸಿತ್ತು. 1960ರಲ್ಲಿ ಮೇಲ್ದರ್ಜೆ ಮುನ್ಸೀಪಾಲಿಟಿ ನಂತರ 1973ರ ನಂತರ ಪಟ್ಟಣ ಪುರಸಭೆ, 1992ರಲ್ಲಿ ಮಂಡಲ ಪಂಚಾಯಿತಿಯಾಗಿ, ಪ್ರಸ್ತುತ 30 ವರ್ಷದಿಂದ ಗ್ರಾಪಂ ದರ್ಜೆಯಲ್ಲಿ ಆಡಳಿತ ನಿರ್ವಹಿಸುತ್ತಿದೆ.

ಫಲಪ್ರದವಾಗದ ಪಂಚಾಯಿತಿ ನಡಾವಳಿ:

ಪಪಂ ಮೇಲ್ದರ್ಜೆಗೇರಿಸಲು, ಸೆ. 1/1995, ಡಿ. 21/2001, ಮೇ 18/2004, ಡಿ. 28/2004, ಡಿ. 5/2008, ಜೂ. 8/2009, ಫೆ. 14/2014, ಅ. 15/2014, ಆ. 10/2015, ಜ. 30/2023 ಹತ್ತು ಬಾರಿ ಸ್ಥಳೀಯ ಗ್ರಾಪಂ ನಡಾವಳಿ ಮೂಲಕ ಕೈಗೊಂಡಿದ್ದ ನಿರ್ಣಯ, ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಕಾರ್ಯಗತವಾಗದೆ ಗ್ರಾಪಂ ದರ್ಜೆಯಲ್ಲೇ ಇನ್ನೂ ಉಳಿದುಕೊಂಡಿದೆ.

ತಲಕಾಡು ಪಪಂ ಮೇಲ್ದರ್ಜೆಗೇರಲು ಸರ್ಕಾರಕ್ಕೆ ಅಗತ್ಯ ದಾಖಲೆ ಕಡತ ಒದಗಿಸಲು ಈಗಾಗಲೆ ಇಲ್ಲಿನ ಪಂಚಾಯಿತಿ ನಡಾವಳಿ ಮೂಲಕ ತ್ವರಿತ ಸಿದ್ಧತೆ ನಡೆಸಿದೆ.

- ಶೋಭಾ ಮಲ್ಲಾಣಿ, ಗ್ರಾಪಂ ಅಧ್ಯಕ್ಷರು, ತಲಕಾಡು.