ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ತಂಬಾಕು ಮಾರಾಟದ ಮೇಲೆ ನಿಯಂತ್ರಣ ಹೇರುವ ಉದ್ದೇಶದಿಂದ ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ಬಿಬಿಎಂಪಿಯ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸುವುದಕ್ಕೆ ಮುಂದಾಗಿದೆ.
ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಂಡಿರುವ ಬಿಬಿಎಂಪಿ ಆರೋಗ್ಯ ವಿಭಾಗವೂ, ಸೆಪ್ಟಂಬರ್‌ನಲ್ಲಿ ಪರವಾನಗಿ ಕಡ್ಡಾಯಗೊಳಿಸುವ ಆದೇಶ ಹೊರಡಿಸುವ ಸಾಧ್ಯತೆ ಇದೆ. ಪರವಾನಗಿ ಪಡೆಯುವುದಕ್ಕೆ 500 ರು. ಶುಲ್ಕ ವಿಧಿಸಲಾಗುತ್ತದೆ.
ರಾಜ್ಯ ಸರ್ಕಾರವೂ 2022ರ ಮೇ 18 ರಂದು ಬಿಬಿಎಂಪಿ ಸೇರಿದಂತೆ ರಾಜ್ಯ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ತಂಬಾಕು ಮಾರಾಟ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಷರತ್ತು, ನಿಯಮ ರೂಪಿಸಿ ರಾಜ್ಯಪತ್ರ ಹೊರಡಿಸಲಾಗಿತ್ತು. ಅದರನ್ವಯ ಇದೀಗ ಬಿಬಿಎಂಪಿಯು ಕ್ರಮಕ್ಕೆ ಮುಂದಾಗಿದೆ.
ಬಿಬಿಎಂಪಿಯೂ ಈಗಾಗಲೇ ಉದ್ದಿಮೆ ಪರವಾನಗಿಯನ್ನು ನೀಡಲಾಗುತ್ತಿದ್ದು, ಸುಮಾರು 49 ಸಾವಿರ ವ್ಯಾಪಾರಿಗಳಿಗೆ ಉದ್ದಿಮೆ ಪರವಾನಗಿ ನೀಡಲಾಗಿದೆ. ಇದೀಗ, ಪ್ರತ್ಯೇಕವಾಗಿ ತುಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್, ಗುಟ್ಕಾ ಮಾರಾಟಗಾರರಿಗೆ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಪ್ರತಿ ವರ್ಷ 500 ರು, ನೀಡಿ ಪರವಾನಗಿ ಶುಲ್ಕ ವಿಧಿಸಲಾಗುತ್ತದೆ.
ಬಿಬಿಎಂಪಿಯು ಈಗಾಗಲೇ ಸಮೀಕ್ಷೆ ನಡೆಸಿದ ಪ್ರಕಾರ ಪ್ರತಿ ವಾರ್ಡ್‌ನಲ್ಲಿ 150 ರಿಂದ 160 ವ್ಯಾಪಾರಿಗಳಂತೆ ನಗರದಲ್ಲಿ ಸುಮಾರು 40 ಸಾವಿರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.
ಆನ್‌ಲೈನ್ ಅರ್ಜಿ:
ಸೆಪ್ಟಂಬರ್ ಮೊದಲ ವಾರದಲ್ಲಿ ಈ ಬಗ್ಗೆ ಬಿಬಿಎಂಪಿ ಅಧಿಸೂಚನೆ ಹೊರಡಿಸಿ ಪರವಾನಗಿ ಪಡೆಯುವುದಕ್ಕೆ ಸೂಚಿಸಲಾಗುತ್ತದೆ. ಪರವಾನಗಿ ಪಡೆಯುವುದಕ್ಕೆ ವ್ಯಾಪಾರಿಗಳಿಗೆ 1 ತಿಂಗಳು ಕಾಲಾವಕಾಶ ನೀಡಲಿದ್ದು, ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಬಿಬಿಎಂಪಿಯ ಐಟಿ ವಿಭಾಗದಿಂದ ಪೋರ್ಟಲ್ ಸಿದ್ದಪಡಿಸಲಾಗುತ್ತಿದೆ.
ಅರ್ಜಿ ಸಲ್ಲಿಸಿದ ವ್ಯಾಪಾರಿ ಮಳಿಗೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಪರವಾನಗಿ ನೀಡಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೇಕರಿ-ಕಾಂಡಿಮೆಂಟ್ಸ್‌ನಲ್ಲಿ ನಿಷೇಧ:
ನಗರದಲ್ಲಿ ಬೇಕರಿ, ಕಾಂಡಿಮೆಂಟ್ಸ್, ಪಾನ್ ಶಾಪ್ ಸೇರಿದಂತೆ ಕೆಲವು ಹೋಟೆಲ್-ರೆಸ್ಟೋರೆಂಟ್‌ನಲ್ಲಿ ಬೀಡಿ, ಸಿಗರೇಟ್ ಮಾರಾಟ ಮಾಡಲಾಗುತ್ತಿದೆ. ಕೋಟ್ಪಾ ಕಾಯ್ದೆ-2003ರ ಅಡಿಯಲ್ಲಿ ಬೇಕರಿ ಮತ್ತು ಕಾಂಡಿಮೆಂಟ್ಸ್ ನಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ, ಅವರಿಗೆ ಪರವಾನಗಿ ನೀಡುವುದಿಲ್ಲ. ಪಾನ್ ಶಾಪ್ ಹಾಗೂ 30 ಆಸನಕ್ಕಿಂತ ಹೆಚ್ಚಿಸುವ ಹೋಟೆಲ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಮಾತ್ರ ಪರವಾನಗಿ ನೀಡಲಾಗುತ್ತದೆ. ಹೋಟೆಲ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಧೂಮಪಾನಕ್ಕೆ ಪ್ರತ್ಯೇಕ ಸ್ಥಳ ನಿಗಡಿ ಪಡಿಸಿದರೆ ಮಾತ್ರ ಪರವಾನಗಿ ನೀಡಲಾಗುತ್ತದೆ.
ಅನಧಿಕೃತ ಮಾರಾಟಕ್ಕೆ ₹5000 ದಂಡ
ಬಿಬಿಎಂಪಿಯ ಅನುಮತಿ ಇಲ್ಲದೇ ಬೀಡಿ, ಸಿಗರೇಟ್, ಗುಟ್ಕಾ ಮಾರಾಟ ಮಾಡಿದರೆ ಅವರಿಗೆ ಮೊದಲ ಬಾರಿಗೆ 5 ಸಾವಿರ ರು. ದಂಡ ವಿಧಿಸಲಾಗುತ್ತದೆ. ಪುನರಾವರ್ತನೆ ಮಾಡಿದರೆ ದಿನಕ್ಕೆ 100 ರು. ನಂತೆ ದಂಡ ವಿಧಿಸಲಾಗುತ್ತದೆ. ಜತೆಗೆ, ಉದ್ದಿಮೆ ಪರವಾನಗಿ ರದ್ದುಪಡಿಸುವ ಅಧಿಕಾರವನ್ನು ಬಿಬಿಎಂಪಿ ಹೊಂದಿರಲಿದೆ.
ಬೀದಿ ವ್ಯಾಪಾರಿಗಳಿಗೆ ಅನ್ವಯವಿಲ್ಲ
ತಂಬಾಕು ಮಾರಾಟ ಪರವಾನಗಿಯನ್ನು ಪಡೆಯುವುದಕ್ಕೆ 100 ರಿಂದ 150 ಚದರಡಿ ಸ್ಥಿರ ಮಳಿಗೆ ಹೊಂದಿರುವವರಿಗೆ ಮಾತ್ರ ನೀಡಲಾಗುತ್ತದೆ. ಜಾಗ ಮಾಲೀಕರ ಹೆಸರಿನಲ್ಲಿ ಪರವಾನಗಿ ಪಡೆಯಬೇಕು. ಪಾದಚಾರಿ ಮಾರ್ಗಗಳ ಮೇಲೆ ವ್ಯಾಪಾರ ನಡೆಸುತ್ತಿರುವವರಿಗೆ ಪರವಾನಗಿ ನೀಡುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೋಟ್ಪಾ ಕಾಯ್ದೆ-2003 ಪ್ರಕಾರ ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ಪರವಾನಗಿ ಕಡ್ಡಾಯವಾಗಿದೆ. ಕೆಲವರು ಬಿಬಿಎಂಪಿಯಿಂದ ಪರವಾನಗಿ ಪಡೆಯದೇ ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಪರವಾಗಿ ನೀಡುವುದಕ್ಕೆ ಇದೀಗ ಕ್ರಮ ಕೈಗೊಳ್ಳಲಾಗಿದೆ.
- ಸುರಳ್ಕರ್ ವಿಕಾಸ್ ಕಿಶೋರ್, ವಿಶೇಷ ಆಯುಕ್ತರು, ಬಿಬಿಎಂಪಿ ಆರೋಗ್ಯ ವಿಭಾಗ