ಸಾರಾಂಶ
ಚಿಕ್ಕಮಗಳೂರು : ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ಹಾಗೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ವಿರುದ್ಧ ಕಾಫಿ ನಾಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ದಿನೇ ದಿನೇ ತೀವ್ರತೆ ಪಡೆದುಕೊಳ್ಳುತ್ತಿದೆ.
ಸೋಮವಾರವೂ ಕೂಡ ಜಿಲ್ಲೆಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿ, ಅವರ ಅಣಕು ಶವ ಯಾತ್ರೆ ಮೂಲಕ ಆಕ್ರೋಶ ಹೊರ ಹಾಕಿದರು. ಗೋ ಬ್ಯಾಕ್ ರಾಜ್ಯಪಾಲರೇ ಎಂಬ ಘೋಷಣೆ ಕೂಗಿ, ಕೇಂದ್ರದ ಕೈ ಗೊಂಬೆ ಎಂದು ಆರೋಪಿಸಿದರು.
ತರೀಕೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕಡೂರು ಹಾಗೂ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಡೂರು ಪಟ್ಟಣದಲ್ಲಿ ಕಡೂರು ಮತ್ತು ಬೀರೂರು ಬ್ಲಾಕ್ ಕಾಂಗ್ರೆಸ್ ಮರವಂಜಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಕೆಎಲ್‌ವಿ ವೃತ್ತ ತಲುಪಿದ ಬಳಿಕ ತಾಲೂಕು ಕಚೇರಿಗೆ ತೆರಳಿ ರಾಜ್ಯಪಾಲರ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶರತ್ ಕೃಷ್ಣಮೂರ್ತಿ, ತೋಟದಮನೆ ಮೋಹನ್, ಕೆ.ಎಚ್. ಶಂಕರ್, ಚಂದ್ರಮೌಳಿ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಶೃಂಗೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ನಟರಾಜ್ ನೇತೃತ್ವದಲ್ಲಿ ಕೆವಿಆರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೊಪ್ಪ ಬಸ್ ನಿಲ್ದಾಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಕುಕ್ಕುಡಿಗೆ ರವೀಂದ್ರ ನೇತೃತ್ವದಲ್ಲಿ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಯಿತು.
ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮಂತ್ ನೇತೃತ್ವದಲ್ಲಿ ಎನ್.ಆರ್.ಪುರದಲ್ಲಿ ಪ್ರತಿಭಟಿಸಿ, ಅಂಬೇಡ್ಕರ್ ವೃತ್ತದಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ತರೀಕೆರೆ ಪಟ್ಟಣದ ಸಾಲುಮರದಮ್ಮ ದೇವಸ್ಥಾನದಿಂದ ಮಹಾತ್ಮಗಾಂಧಿ ವೃತ್ತದವರೆಗೆ ಶಾಸಕ ಜಿ.ಎಚ್. ಶ್ರೀನಿವಾಸ್ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಯಿತು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಹಿಂದಾ ಹಾಗೂ ಸಿಎಂ ಸಿದ್ದರಾಮಯ್ಯ ಅಭಿಮಾನಿ ಗಳು ಪಾಲ್ಗೊಂಡಿದ್ದರು. ದಾರಿಯ ಉದ್ದಕ್ಕೂ ರಾಜ್ಯಪಾಲರ ವಿರುದ್ಧ ಘೋಷಣೆ ಹಾಕಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಬಾಹಿರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಸಖರಾಯಪಟ್ಟಣದಲ್ಲಿ ರಾಜ್ಯಪಾಲರ ಪ್ರತಿಕೃತಿ ದಹಿಸಿಆಕ್ರೋಶ ವ್ಯಕ್ತಪಡಿಸಿದರು. ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಿ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದಕ್ಕೆ ಧಿಕ್ಕಾರ ಕೂಗಿ ಬಸ್‌ನಿಲ್ದಾಣ ಎದುರು ಮಾನವ ಸರಪಳಿ ನಿರ್ಮಿಸಿದರು.
ಬಳಿಕ ಮಾತನಾಡಿದ ವಿಪ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರದಿಂದ ಬಿಜೆಪಿ ರಾಜ್ಯಪಾಲರ ಮುಖಾಂತರ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿ ತೇಜೋವಧೆಗೆ ಮುಂದಾಗುತ್ತಿದೆ ಎಂದು ದೂರಿದರು.ರಾಜ್ಯದ ಜನತೆ ಆರ್ಥಿಕ ಸಬಲರಾಗುವ ದೃಷ್ಟಿಯಿಂದ ಪಂಚ ಗ್ಯಾರಂಟಿ ಜಾರಿಗೊಳಿಸಿರುವುದನ್ನು ಸಹಿಸದ ಬಿಜೆಪಿ ನಾಯಕರು ಹಿಂಬದಿಯಿಂದ ಷಡ್ಯಂತ್ರ ರೂಪಿಸಿ ಮುಡಾ ಹಗರಣದ ಸುಳ್ಳು ಹಣೆಪಟ್ಟಿ ಮುಖ್ಯಮಂತ್ರಿಗಳ ತಲೆಗೆ ಕಟ್ಟುತ್ತಿದ್ದಾರೆ. ನೇರವಾಗಿ ಸಿದ್ದರಾಮಯ್ಯರನ್ನು ಎದುರಿಸ ಲಾಗದ ಕೇಂದ್ರ ಸರ್ಕಾರ ಪಿತೂರಿಯಿಂದ ಜನರಲ್ಲಿ ತಪ್ಪು ಗ್ರಹಿಸಿ ಮೂಡಿಸಿ ಹಗರಣದಲ್ಲಿ ಸಿಲುಕಿಸಲು ಯತ್ನಿಸುತ್ತಿದೆ. ಈ ಬಗ್ಗೆ ವಿಚಾರಣೆಗೆ ಅವಕಾಶ ಕಲ್ಪಿಸದೇ ಸುಳ್ಳು ಆರೋಪ ಪ್ರದರ್ಶಿಸಲು ಬಿಜೆಪಿ ನಾಯಕರು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.
ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನದಡಿ ಕಾರ್ಯ ನಿರ್ವಹಿಸು ತ್ತಿರುವ ರಾಜ್ಯಪಾಲರು ಒಂದು ಪಕ್ಷಕ್ಕೆ ಸೀಮಿತರಾಗುವುದು ತರವಲ್ಲ, ಆರೋಪ ಪರಿಶೀಲಿಸದೆ ಏಕಾಏಕಿ ಪ್ರಾಸಿಕ್ಯೂಷನ್‌ಗೆ ನೀಡಿರುವುದು ಗಮನಿಸಿದರೆ ಬಿಜೆಪಿ ನಡುವಿನ ಅಪಾರ ನಂಟಿದೆ ಎಂಬುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ. ಉತ್ತಮ ಆಡಳಿತ ನೀಡುತ್ತಿರುವ ಸಿಎಂಗೆ ಅಪಖ್ಯಾತಿ ತರುವ ದುರುದ್ದೇಶದಿಂದ ರಾಜ್ಯದ ಬಿಜೆಪಿ ಮುಖಂಡರು ಪಾದಯಾತ್ರೆ, ಹೋರಾಟ ನಡೆಸಿ ಜನತೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್, ರವೀಶ್ ಬಸಪ್ಪ, ಪ್ರ. ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಎಲ್.ಮೂರ್ತಿ, ಡಾ.ಡಿ.ಎಲ್. ವಿಜಯಕುಮಾರ್, ಶಾಂತೇಗೌಡ, ಮಂಜೇಗೌಡ, ಸಾಮಾಜಿಕ ಜಾಲತಾಣದ ಜಿಲ್ಲಾ ಉಪಾಧ್ಯಕ್ಷ ಸಚಿನ್, ಮುಖಂಡರಾದ ಕೆ.ಭರತ್, ತ್ರಿಭುವನ್ ಹಾಗೂ ಕಾರ್ಯಕರ್ತರು ಇದ್ದರು.
19 ಕೆಸಿಕೆಎಂ 5ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ಸಖರಾಯಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
19 ಕೆಸಿಕೆಎಂ 6ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಿರುವ ರಾಜ್ಯಪಾಲರ ವಿರುದ್ಧ ಸೋಮವಾರ ಸಖರಾಯಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ಪ್ರತಿಕೃತಿ ದಹನ ಮಾಡಿದರು.