ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಕೊಲೆ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಶಾಮೀಲಾಗಿದ್ದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಪ್ರಸ್ತುತ ಕೊಲೆ ಪ್ರಕರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದೆ ಎಂದು ರಾಜ್ಯ ಯೂತ್‌ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ಹೇಳಿದರು.

ಧಾರವಾಡ:

ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಪಠಾಣ್ ಕೊಲೆ ಪ್ರಕರಣದಲ್ಲಿ ಶಾಮೀಲಾದ ಎಲ್ಲರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಗೃಹ ಸಚಿವರಿಗೆ ಮನವಿ ಮಾಡಲಾಗಿದ್ದು, ಫೈರೋಜ್ ಕುಟುಂಬಕ್ಕೆ ನ್ಯಾಯ ಕೊಡಿಸಲು ಯೂತ್‌ ಕಾಂಗ್ರೆಸ್ ಬದ್ಧವಾಗಿದೆ ಎಂದು ರಾಜ್ಯ ಯೂತ್‌ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ಹೇಳಿದರು.

ಇಲ್ಲಿಯ ಹಾಶ್ಮಿನಗರದಲ್ಲಿ ಫೈರೋಜ್ ಪಠಾಣ್ ಮನೆಗೆ ಶನಿವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಶಾಮೀಲಾಗಿದ್ದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಪ್ರಸ್ತುತ ಕೊಲೆ ಪ್ರಕರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದೆ. ಇಂಥ ಸಂದರ್ಭದಲ್ಲಿ ಯಾರ‍್ಯಾರು ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಕುರಿತು ಹೇಳಿಕೆ ನೀಡುವುದು ಸೂಕ್ತವಲ್ಲ. ಪ್ರಕರಣ ಮುಗಿದ ನಂತರ ಎಲ್ಲವೂ ಬಹಿರಂಗವಾಗಲಿದೆ ಎಂದರು.

ರಾಜಕೀಯ ಭಿನ್ನಾಭಿಪ್ರಾಯ ಹಾಗೂ ವೈಯಕ್ತಿಕ ಪ್ರತಿಷ್ಠೆ ಕೊಲೆಗೆ ಕಾರಣವಾಗಿದೆ ಎಂಬುದು ಗೊತ್ತಾಗಿದೆ. ಕೊಲೆ ಮಾಡುವುದು ಎಲ್ಲದಕ್ಕೂ ಪರಿಹಾರವಲ್ಲ. ಈ ರೀತಿ ಆಗಿರುವುದು ತಪ್ಪು. ಕಾಂಗ್ರೆಸ್ ಶಾಂತಿಯನ್ನು ಬಯಸುತ್ತದೆ. ಪಕ್ಷದ ಚೌಕಟ್ಟಿನಲ್ಲಿ ಫೈರೋಜ್ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಯೂಥ್ ಕಾಂಗ್ರೆಸ್ ಕಾರ್ಯನಿರತವಾಗಿದೆ. ಪ್ರಕರಣದ ಬೆಳವಣಿಗೆಗಳ ಕುರಿತು ಮಾಹಿತಿ ಕಲೆ ಹಾಕಲಾಗಿದೆ. ಯಾರೇ ಪ್ರಭಾವಿಗಳು ಈ ಪ್ರಕರಣದಲ್ಲಿದ್ದರೂ ಪಕ್ಷ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಯಾರನ್ನೂ ರಕ್ಷಿಸುವ ಸ್ಥಿತಿಯಿಲ್ಲ ಎಂದರು. ಸ್ಥಳೀಯ ಕಾಂಗ್ರೆಸ್‌ ಮುಖಂಡರು ಇದ್ದರು.