ಕಳಪೆ ಬಿತ್ತನೆ ಬೀಜ ಮಾರಾಟಕ್ಕೆ ಕಾನೂನು ಕ್ರಮ

| Published : Jun 03 2024, 12:31 AM IST

ಸಾರಾಂಶ

ಶಹಾಪುರ ನಗರದ ಕೃಷಿ ಇಲಾಖೆಯಲ್ಲಿ ಕೃಷಿ ಪರಿಕರ ವಿತರಕರು ಹಾಗೂ ಮಾರಾಟಗಾರರಿಗೆ ಕೃಷಿ ಇಲಾಖೆ ವತಿಯಿಂದ ಗುಣ ನಿಯಂತ್ರಣ ಯೋಜನೆ ಅಡಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

ಜಂಟಿ ನಿರ್ದೇಶಕ ರವಿ ಎಚ್ಚರಿಕೆ । ಕೃಷಿ ಪರಿಕರ ವಿತರಕರು, ಮಾರಾಟಗಾರರಿಗೆ ಕಾನೂನು ಅರಿವು

ಕನ್ನಡಪ್ರಭ ವಾರ್ತೆ ಶಹಾಪುರ

ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಹೆಚ್ಚಿನ ಬೆಲೆ ಅನಧಿಕೃತವಾಗಿ ಕಳಪೆ ಮಾರಾಟ ಮಾಡಿದರೆ ಅಂಗಡಿ ಮಾಲಿಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೃಷಿ ಜಂಟಿ ಇಲಾಖೆ ನಿರ್ದೇಶಕ ಕೆ. ಎಚ್. ರವಿ ಎಚ್ಚರಿಕೆ ನೀಡಿದ್ದಾರೆ.

ನಗರದ ಕೃಷಿ ಇಲಾಖೆಯಲ್ಲಿ ಕೃಷಿ ಪರಿಕರ ವಿತರಕರು ಹಾಗೂ ಮಾರಾಟಗಾರರಿಗೆ ಕೃಷಿ ಇಲಾಖೆಯಿಂದ ಆಯೋಜಿಸಲಾದ ಗುಣ ನಿಯಂತ್ರಣ ಯೋಜನೆಯಡಿ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ಬಿತ್ತನೆ ಕಾರ್ಯ ಪ್ರಾರಂಭಿಸಿದ್ದು, ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡಬೇಕು. ರೈತರು ಖರೀದಿಸಿದ ಬೀಜ, ಗೊಬ್ಬರಕ್ಕೆ ಅಧಿಕೃತ ರಶೀದಿ ನೀಡಬೇಕು. ಬಿತ್ತನೆ ಬೀಜ, ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಂತಹ ಮಾರಾಟಗಾರರ ಲೈಸೆನ್ಸ್ ರದ್ದುಪಡಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೃಷಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.

ಬಿತ್ತನೆ ಬೀಜ ಖರೀದಿಗೆ ಬರುವ ರೈತರಿಗೆ ಕೆಲವು ಕೃಷಿ ಪರಿಕರ ಮಾರಾಟಗಾರರು, ಅನಗತ್ಯ ಷರತ್ತು ವಿಧಿಸುವುದು ಮತ್ತು ಬಿತ್ತನೆ ಬೀಜ, ಗೊಬ್ಬರದ ಕೊರತೆ ಇದೆ ಎಂದು ಬಿಂಬಿಸಿ ಕೃತಕ ಅಭಾವ ಸೃಷ್ಟಿಸಲು ಮುಂದಾದರೆ ಅಂಥ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ಮಾತನಾಡಿ, ಈ ಬಾರಿ ಪೂರ್ವ ಮುಂಗಾರು ಉತ್ತಮ ಮಳೆಯಾಗುತ್ತಿದ್ದು, ಕಳೆದ ಬಾರಿಯ ರೈತರ ನೋವನ್ನು ಮರೆಸಿ ಸಂತಸ ತಂದಿದೆ. ಈಗಾಗಲೇ ಬಿತ್ತನೆ ಕಾರ್ಯ ಪ್ರಾರಂಭಿಸಿದ್ದು, ಅವರಿಗೆ ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡಬೇಕೆಂದರು. ವ್ಯಾಪಾರಸ್ಥರು ತಾವು ಸಂಗ್ರಹ ಮಾಡಿರುವ ಗೋದಾಮಿನ ಮುಂದೆ ತಮ್ಮ ಅಂಗಡಿಯ ಮಾಹಿತಿ ಫಲಕ ಅಳವಡಿಸಬೇಕು. ಅಂಗಡಿಯಲ್ಲಿ ಪ್ರತಿದಿನ ಬೀಜ, ಗೊಬ್ಬರದ ದಾಸ್ತಾನು ಹಾಗೂ ದರಪಟ್ಟಿಯನ್ನು ಕಡ್ಡಾಯವಾಗಿ ಹಾಕಿರಬೇಕು. ನಿಗದಿತ ಬೆಲೆಯಲ್ಲಿ ಬೀಜ, ರಸಗೊಬ್ಬರ ಪೂರೈಸಿ ತಾಲೂಕಿನಲ್ಲಿ ಯಾವುದೇ ರೀತಿಯ ದೂರು ಬಾರದಂತೆ ವ್ಯಾಪಾರ ಮಾಡುವಂತೆ ತಿಳಿಸಿದರು.

ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಬಸನಗೌಡ ಮಾಲಿಪಾಟೀಲ್ ಮಾತನಾಡಿ, ನಮಗೂ ರೈತರ ಬಗ್ಗೆ ಕಾಳಜಿ ಇದೆ. ಯಾವುದೇ ಕಾರಣಕ್ಕೂ ರೈತರಿಗೆ ಮೋಸ ಮಾಡುವುದಿಲ್ಲ. ಇಲಾಖೆಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.

ಈ ವೇಳೆ ಕೃಷಿ ಇಲಾಖೆ ಉಪ ನಿರ್ದೇಶಕಿ ಮಂಜುಳಾ ಬಸರೆಡ್ಡಿ, ಉಪ ತಹಸೀಲ್ದಾರ್ ಸಂಗಮೇಶ, ಕೃಷಿ ಪರಿಕರಗಳ ಮಾರಾಟಗಾರರ ಸಂಘದ ತಾಲೂಕಾಧ್ಯಕ್ಷ ಅಶೋಕ್ ರೆಡ್ಡಿ, ವಡಿಗೇರ ತಾಲೂಕಾಧ್ಯಕ್ಷ ಪರ್ವತ ರೆಡ್ಡಿ ಮಲ್ಹಾರ ಸೇರಿ ಕೃಷಿ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಸದಸ್ಯರು ಇದ್ದರು.