ಸಾರಾಂಶ
ಭಾರತೀನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಆದೇಶ ಹೊರಡಿಸಿರುವ ರಾಜ್ಯಪಾಲರ ವಿರುದ್ಧ ಅಹಿಂದ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಲಗೂರು ವೃತ್ತದ ವಿಶ್ವೇಶ್ವರಯ್ಯ ಪುತ್ಥಳಿ ಬಳಿ ಅಹಿಂದ ಸಂಘಟನೆಯ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ನಾಯಕತ್ವದ ಕಾರ್ಯವೈಖರಿ ಸಹಿಸಲಾಗದೆ ಷಡ್ಯಂತ್ರ ರೂಪಿಸಿ ಸಿಎಂ ಸ್ಥಾನದಿಂದ ಕೆಳಗಿಳಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ತಾಪಂ ಮಾಜಿ ಸದಸ್ಯ ಭರತೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಬಿಜೆಪಿ ನಾಯಕರು ಸಂಚು ರೂಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ನಡೆದ ಹಗರಣಗಳ ಬಗ್ಗೆ ತನಿಖೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗುತ್ತಿಗೆದಾರ ಮುಡೀನಹಳ್ಳಿ ಅಪ್ಪಾಜಿ, ಮುಖಂಡರಾದ ಕಬ್ಬಾಳಯ್ಯ, ಎಚ್.ಕೆ.ದೊಡ್ಡಯ್ಯ, ಎಚ್.ಎಂ.ಜೋಗಯ್ಯ, ಪೂಜಾರಿ ಮಹೇಶ್, ಶಿವರಾಜು, ಶಿವಪ್ರಸಾದ್, ದೊಡ್ಡಯ್ಯ, ಜೆ.ಪುಟ್ಟಸ್ವಾಮಿ, ಮಲ್ಲೇಶ್, ಪುಟ್ಟರಾಜು, ಬೀರೇಶ್, ಕಾಳಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.