ಸಾರಾಂಶ
ಕನ್ನಡಪ್ರಭ ವಾರ್ತೆ ಲೋಕಾಪುರ
ಸಾವಯವ ಕೃಷಿಯಿಂದ ಶುದ್ಧ ಆಹಾರ ಪದಾರ್ಥ ಬೆಳೆಸಿ ಸಮೃದ್ಧ ಜೀವನ ನಡೆಸಲು ಸಾಧ್ಯ ಎಂದು ಕೋಲ್ಹಾಪುರದ ಕನ್ನೇರಿಮಠದ ಜಗದ್ಗುರು ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ನಮ್ಮ ಘಟಪ್ರಭಾ ರೈತ ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ನೂತನ ಸಾವಯವ ಕೃಷಿ ಉತ್ಪನ್ನ ಮಾರಾಟ ಮಳಿಗೆ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ರೈತರು ಇಳುವರಿ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕೃಷಿಯಲ್ಲಿ ಮಿತಿ ಮೀರಿದ ರಾಸಾಯನಿಕ ಬಳಕೆಯಿಂದ ಭೂಮಿ ಬರಡಾಗುತ್ತಿರುವುದಲ್ಲದೇ ಎಲ್ಲರೂ ವಿಷ ಪೂರಿತ ಆಹಾರ ಸೇವಿಸುವಂತಾಗಿದೆ. ವಿಷಪೂರಿತ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತಿದೆ. ಇದನ್ನು ತಪ್ಪಿಸಲು ಪ್ರತಿಯೊಬ್ಬ ಕೃಷಿಕ ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು. ಕೃಷಿ ಪ್ರಧಾನ ರಾಷ್ಟ್ರ ನಮ್ಮದು, ರೈತ ದೇಶದ ಬೆನ್ನೆಲುಬು ಇದ್ದಂತೆ, ಈ ನಿಟ್ಟಿನಲ್ಲಿ ಸರಕಾರ ರೈತರ ಅನುಕೂಲಕ್ಕಾಗಿ ನಾನಾ ಇಲಾಖೆಗಳಿಂದ ನೀಡಲಾಗುವ ಸವಲತ್ತು ಪಡೆದು ಸಾವಯವ ಕೃಷಿ ಒತ್ತು ನೀಡಬೇಕು ಎಂದರು.
ಕೊಂಚೂರು ಸವಿತಾಪೀಠ ಮಹಾಸಂಸ್ಥಾನದ ಸವಿತಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರತಿಯೊಬ್ಬ ರೈತರು ಕನಿಷ್ಠ ಮೂರು ವರ್ಷಕ್ಕೊಮ್ಮೆ ಆದರೂ ಬಿತ್ತನೆ ಬೀಜ ಬದಲಾಯಿಸಬೇಕು. ಇದರಿಂದ ಕೃಷಿ ಇಳುವರಿ ಹೆಚ್ಚಿಸಲು ಸಾಧ್ಯ. ರೈತರು ಸರದಿ ಬೆಳೆ ಪದ್ಧತಿ ರೂಡಿಸಿಕೊಳ್ಳಬೇಕು. ಮಣ್ಣಿನ ಪರೀಕ್ಷೆ, ಬಿತ್ತನೆ ವಿಧಾನ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಮಾಹಿತಿ ಪಡೆದು ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಬೇಕು ಎಂದರು.ನಮ್ಮ ಘಟಪ್ರಭಾ ರೈತ ಉತ್ಪಾದಕರ ಸಂಘದ ಅಧ್ಯಕ್ಷ ತಿಮ್ಮಣ್ಣ ಹುಲಸದ ಮಾತನಾಡಿ, ಸಾವಯವ ಕೃಷಿ ಉತ್ಪನ್ನ ಮಾರಾಟ ಮಳಿಗೆಗೆ ರೈತರು ಭೇಟಿ ನೀಡಿ ತಮ ಸಲಹೆ ಸೂಚನೆ ಪಡೆದುಕೊಳ್ಳಿ. ರಾಸಾಯನಿಕ ಬೇಸಾಯ ಪದ್ಧತಿಯಿಂದ ರೈತರಿಗಾಗುವ ಅನಾನುಕೂಲಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ರೈತರೊಂದಿಗೆ ಕೆಲಸ ಮಾಡುವುದು ಅವರ ಸಮಸ್ಯೆ ಅರ್ಥಮಾಡಿಕೊಂಡು ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಾನ್ನಿಧ್ಯವನ್ನು ಲಕ್ಷಾನಟ್ಟಿ ಗ್ರಾಮದ ಜ್ಞಾನ ಯೋಗಾಶ್ರಮದ ಶಿವಾನಂದ ಸ್ವಾಮೀಜಿ, ಜ್ಞಾನೇಶ್ವರ ಮಠದ ಬ್ರಹ್ಮಾನಂದ ಸ್ವಾಮೀಜಿ ಅಧ್ಯಕ್ಷತೆಯನ್ನು ತಿಮ್ಮಣ್ಣ ಹುಲಸದ, ಮುಖ್ಯ ಅತಿಥಿಗಳಾಗಿ ಹುಲಿಕೇರಿ ಸಾವಯವ ಕೃಷಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ವೇಶ್ವರಯ್ಯ ಸಜ್ಜನ, ಸಾವಯವ ಕೃಷಿ ಪಂಡಿತ ಸಂಗನಗೌಡ ಪಾಟೀಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ಎ.ಎಸ್.ಆನಂದ, ಹೊಳಬಸಪ್ಪ ಮುದಕವಿ, ಬಸಪ್ಪ ಮಾಳೇದ, ರಂಗನಾಥ ತುಳಸಿಗೇರಿ, ಬಸಪ್ಪ ಹ್ಯಾವಗಲ್, ನಾಗಪ್ಪ ಕೊಪ್ಪದ, ಗಂಗವ್ವ ಪಾಟೀಲ, ಮಹಾದೇವಿ ಹುಲಸದ, ರೇವಣಸಿದ್ದಪ್ಪ ಪೂಜಾರ, ಬಾಳಪ್ಪ ಮಾಚಕನೂರ, ಸುರೇಶ ಆನೇಗುದ್ದಿ ಲೋಕಾಪುರ ಹಾಗೂ ಸುತ್ತಮುತ್ತಲಿನ ರೈತ ಬಾಂಧವರು ಇದ್ದರು.