ಗುತ್ತಿಗೆದಾರರ ಕಿರುಕುಳದಿಂದ ಜಿಲ್ಲಾಸ್ಪತ್ರೆ ಹೊರಗುತ್ತಿಗೆ ನೌಕರರ ರಕ್ಷಿಸಿ

| Published : Jul 25 2024, 01:20 AM IST / Updated: Jul 25 2024, 01:21 AM IST

ಗುತ್ತಿಗೆದಾರರ ಕಿರುಕುಳದಿಂದ ಜಿಲ್ಲಾಸ್ಪತ್ರೆ ಹೊರಗುತ್ತಿಗೆ ನೌಕರರ ರಕ್ಷಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ತಿಂಗಳಿಗೆ ಸರಿಯಾಗಿ ವೇತನ ಕೊಡುತ್ತಿಲ್ಲ, ಗುತ್ತಿಗೆದಾರರು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ.

- ಚಿಗಟೇರಿ ಆಸ್ಪತ್ರೆ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ । ಏಜೆನ್ಸಿ ರದ್ದುಪಡಿಸಲು ಒತ್ತಾಯ

- - - - ರಾಯಚೂರು ಮೂಲದ ದೀಕ್ಷಾ ಹೆಸರಿನ ಏಜೆನ್ಸಿಯಲ್ಲಿ ಮಧ್ಯವರ್ತಿಗಳಿಂದ ದೌರ್ಜನ್ಯ

- ಐದಾರು ತಿಂಗಳಿಗೊಮ್ಮೆ ವೇತನ, ನೌಕರರ ಪಿಎಫ್, ಇಎಸ್‌ಐ ಹಣ ಸರಿಯಾಗಿ ಪಾವತಿಸುತ್ತಿಲ್ಲ

- ಸಂಬಳ ಹಣದಲ್ಲಿ ಲಂಚ ನೀಡದಿದ್ದರೆ ಕೆಲಸದಿಂದ ಕಿತ್ತುಹಾಕುವ ಬೆದರಿಕೆ: ಆರೋಪ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ತಿಂಗಳಿಗೆ ಸರಿಯಾಗಿ ವೇತನ ಕೊಡುತ್ತಿಲ್ಲ, ಗುತ್ತಿಗೆದಾರರು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಹೊರಗುತ್ತಿಗೆ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು.

ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 270 ಜನ ಹೊರಗುತ್ತಿಗೆ ಪದ್ಧತಿಯಡಿ ಕೆಲಸ ಮಾಡುತ್ತಿದ್ದಾರೆ. ರಾಯಚೂರು ಮೂಲದ ದೀಕ್ಷಾ ಎಂಬ ಏಜೆನ್ಸಿ ಅವರಿಂದ ಸ್ಥಳೀಯ ಮಧ್ಯವರ್ತಿಗಳು ಕೆಲಸ ಮಾಡುವ ನೌಕರರಿಗೆ ಪ್ರತಿ ತಿಂಗಳು ವೇತನ ಕೊಡುತ್ತಿಲ್ಲ. ಸರಿಯಾಗಿ ಪಿಎಫ್, ಇಎಸ್‌ಐ ಹಣವನ್ನೂ ಪಾವತಿಸುತ್ತಿಲ್ಲ. ಐದಾರು ತಿಂಗಳಿಗೊಮ್ಮೆ ವೇತನ ಪಾವತಿಸಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ನಮ್ಮ ಮೇಲೆಯೇ ದೌರ್ಜನ್ಯ ಮಾಡುತ್ತಾರೆಂದು ಅಳಲು ತೋಡಿಕೊಂಡರು.

ವೇತನ ಕೊಡುವ ಸಂದರ್ಭ ಕ್ಲಿನಿಕ್ ಮತ್ತು ನಾನ್ ಕ್ಲಿನಿಕ್ ನೌಕರರಿಂದ ₹2 ಸಾವಿರ ಮತ್ತು ಡಿ ದರ್ಜೆ ನೌಕರರಿಂದ ₹1 ಸಾವಿರ ವಸೂಲಿ ಮಾಡುತ್ತಾರೆ. ಲಂಚ ಕೊಡದಿದ್ದರೆ ಕೆಲಸದಿಂದ ಕಿತ್ತು ಹಾಕುವ ಬೆದರಿಕೆಯೊಡ್ಡುತ್ತಾರೆ. ಬೆಂಗಳೂರಿನ ಪೂಜ್ಯಾಯ ಏಜೆನ್ಸಿಯವರಿಗೆ ಆಸ್ಪತ್ರೆಗೆ ಏಜೆನ್ಸಿ ಕೊಡಿಸುವುದರೊಂದಿಗೆ ಏಜೆನ್ಸಿ ಕಪ್ಪುಪಟ್ಟಿಗೆ ಸೇರಿಸಲು ಇವರೇ ಕಾರಣರಾಗಿದ್ದಾರೆ ಎಂದು ಕಿಡಿಕಾರಿದರು.

ಇವರ ನಿತ್ಯ ಕಿರುಕುಳದಿಂದ ಬೇಸತ್ತಿರುವ ಕಾರ್ಮಿಕರು ಈ ಹಿಂದೆ ಜಿಲ್ಲಾಡಳಿತಕ್ಕೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆ ಗಮನಕ್ಕೆ ತರಲಾಗಿದೆ ಅಲ್ಲದೇ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಲಾಗಿದೆ. ಆದರೆ, ಇಂದಿಗೂ ಯಾವುದೇ ಕ್ರಮ ಜರುಗಿಸಿಲ್ಲ. ಇದರಿಂದಾಗಿ ಕಾರ್ಮಿಕರು ಬೇಸತ್ತು ನೊಂದಿದ್ದಾರೆ. ಈಗಲಾದರೂ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ದೌರ್ಜನ್ಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ನೌಕರರನ್ನು ರಕ್ಷಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಲ್ಲ ಕಾರ್ಮಿಕರು ಭಾಗವಹಿಸಿದ್ದರು.

- - -

ಟಾಪ್‌ ಕೋಟ್‌

ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ರಾಯಚೂರಿನ ದೀಕ್ಷಾ ಏಜೆನ್ಸಿ ಪಡೆದಿರುವ ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸುವುದರೊಂದಿಗೆ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಹೊಸದಾಗಿ ಟೆಂಡರ್ ಕರೆಯುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು

- ಹನುಮಂತಪ್ಪ, ಕಾರ್ಮಿಕ ಮುಖಂಡ

- - - -24ಕೆಡಿಜಿ44, 45ಃ: ದಾವಣಗೆರೆಯಲ್ಲಿ ಜಿಲ್ಲಾಸ್ಪತ್ರೆ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.