ಸಾರಾಂಶ
ಶಿರಸಿ: ಅರಣ್ಯ ನಾಶದಿಂದ ಜೀವ ವೈವಿಧ್ಯತೆ ಸಂಪೂರ್ಣ ಅಸಮತೋಲನ ಸ್ಥಿತಿಗೆ ತಲುಪುತ್ತದೆ. ಹೀಗಾಗಿ ಈ ಸಂಪತ್ತನ್ನು ನಿರಂತರವಾಗಿ ಕಾಪಾಡಬೇಕಾದ ಜವಾಬ್ದಾರಿಯಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಹೇಳಿದರು.
ಅವರು ನಗರದ ಝೂ ವೃತ್ತದ ಮಕ್ಕಳ ಉದ್ಯಾನವನದಲ್ಲಿ ನಡೆದ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಅರಣ್ಯ ಸಿಬ್ಬಂದಿಯ ಕೆಲಸದ ಸ್ಥಿತಿ ಸುಲಭವಾದುದಲ್ಲ. ಅರಣ್ಯ ಪ್ರದೇಶದಲ್ಲಿ ಕೆಲಸ ಮಾಡುವಾಗ ಮೊಬೈಲ್ ಸಂಪರ್ಕ, ಭದ್ರತೆ, ಸಹಾಯ ಯಾವುದೂ ಇರುವುದಿಲ್ಲ. ವಿಪರೀತ ಮಳೆ, ಕಾಡುಪ್ರಾಣಿಗಳ ಉಪಟಳ, ಕಳ್ಳಸಾಗಾಣಿಕೆದಾರರ ಹಾವಳಿ ಇರುತ್ತದೆ. ಇಂತಹ ಸ್ಥಿತಿಯಲ್ಲಿ ಅರಣ್ಯ ಹಾಗೂ ವನ್ಯಜೀವಿ ಸಂಪತ್ತನ್ನು ರಕ್ಷಿಸಿ ಜೀವವೈವಿಧ್ಯತೆ ಕಾಪಾಡಿಕೊಂಡು ಬಂದಿದ್ದಾರೆ ಎಂದರು ಶ್ಲಾಘಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಶಾರದಾದೇವಿ ಸಿ.ಹಟ್ಟಿ ಮಾತನಾಡಿ, ಪ್ರಕೃತಿ ಸಮೃದ್ಧಿಯಿದ್ದರೆ ಮಾತ್ರ ನಮ್ಮ ಬದುಕಿಗೆ ಉಸಿರು, ಚೈತನ್ಯ ದೊರೆಯುತ್ತದೆ. ಈ ಪ್ರಕೃತಿ ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಲ್ಲ. ಸಕಲ ಜೀವರಾಶಿಗಳಿಗೆ ಸಂಬಂಧಿಸಿದ್ದಾಗಿದೆ. ನಾವು ಕಾಡುಪ್ರಾಣಿಗಳ ವಾಸಸ್ಥಳವನ್ನೂ ಬಿಡದೇ ಅತಿಕ್ರಮಿಸುತ್ತಿರುವುದರಿಂದ ಅವು ನಾವಿರುವಲ್ಲಿ ಬರುವಂತಾಗಿದೆ. ಆದ್ದರಿಂದ ಅಮೂಲ್ಯ ಪರಿಸರ ಸಂಪತ್ತು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.ಉಪರಣ್ಯ ಸಂರಕ್ಷಣಾಧಿಕಾರಿ ಸಂದೀಪ ಎಚ್.ಸೂರ್ಯವಂಶಿ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಇರುವುದರಿಂದ ಅದರ ರಕ್ಷಣೆಯ ಸವಾಲಿದೆ. ಸ್ವಾರ್ಥದ ಕಾರಣಕ್ಕೆ ಅರಣ್ಯ ಜಾಗ ಒತ್ತುವರಿಯಾಗುತ್ತಿದೆ. ಅದನ್ನು ಒಮ್ಮೆ ಕಳೆದುಕೊಂಡರೆ ಮತ್ತೆ ಸಿಗಲಾರದು. ಇದರಿಂದ ಮಾನವ ಹಾಗೂ ವನ್ಯಜೀವಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಹವಾಮಾನ ಬದಲಾವಣೆ, ಭೂಕುಸಿತದಂತಹ ಘಟನೆಗಳು ನಡೆಯುತ್ತಿದೆ. ಇವೆಲ್ಲದರ ನಡುವೆ ಅರಣ್ಯ ಹಾಗೂ ವನ್ಯಜೀವಿ ಸಂಪತ್ತು ಕಾಪಾಡಿ ಜೀವವೈವಿಧ್ಯತೆ ಉಳಿಸುವ ದೊಡ್ಡ ಸವಾಲಿದೆ ಎಂದರು.
ಅರಣ್ಯ ಸಂಚಾರಿ ದಳದ ಉಪಅರಣ್ಯ ಸಂರಕ್ಷಣಾಧಿಕಾರಿ ನಾಗಶೆಟ್ಟಿ ಆರ್.ಎಸ್, ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಉಪರಣ್ಯ ಸಂರಕ್ಷಣಾಧಿಕಾರಿ ಮುಕುಂದಚಂದ್ರ, ಡಿವೈಎಸ್‌ಪಿ ಗೀತಾ ಪಾಟೀಲ್, ಎಸಿಎಫ್ ಎಸ್.ಎಸ್.ನಿಂಗಾಣಿ ಮತ್ತಿತರರು ಇದ್ದರು.ಎಸಿಎಫ್ ಪವಿತ್ರಾ ವರದಿ ವಾಚಿಸಿದರು. ಡಿಆರ್‌ಎಫ್‌ಒ ಹನುಮಂತ ಇಳಿಗೇರ್ ನಿರೂಪಿಸಿದರು.
ನಗರೀಕರಣ, ಆರ್ಥಿಕ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ, ಬೃಹತ್ ಯೋಜನೆಗಳ ಕಾರಣದಿಂದ ಅರಣ್ಯ ಸಂಪತ್ತು ನಾಶ ಆಗುತ್ತಿದೆ. ಸರಕಾರದ ನಿಯಮಾನುಸಾರ ಯೋಜನೆಗೆ ಇಷ್ಟು ಮರಗಳ ಕಡಿದರೆ ಇಂತಿಷ್ಟು ಗಿಡಗಳನ್ನು ನೆಡಬೇಕು ಎಂಬುದಿದೆ. ಆದರೆ ನಿಯಮ ಅನುಷ್ಠಾನ ಆಗುತ್ತಿದೆಯಾ ಎಂಬುದು ಮುಖ್ಯವಾಗುತ್ತದೆ ಎನ್ನುತ್ತಾರೆ ಹಿರಿಯ ಸಿವಿಲ್ ನ್ಯಾಯಧೀಶೆ ಶಾರದಾದೇವಿ ಸಿ. ಹಟ್ಟಿ.