ಸಕಲ ಅವಶ್ಯಕತೆ ಪೂರೈಸುವ ಪ್ರಕೃತಿ ಕಾಪಾಡಿ: ನ್ಯಾ. ಹನುಮಂತಪ್ಪ

| Published : Jun 07 2024, 12:15 AM IST

ಸಕಲ ಅವಶ್ಯಕತೆ ಪೂರೈಸುವ ಪ್ರಕೃತಿ ಕಾಪಾಡಿ: ನ್ಯಾ. ಹನುಮಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ನ್ಯಾಯಾಧೀಶರಾದ ಹನುಮಂತಪ್ಪ ಅವರು ಉದ್ಘಾಟಿಸಿದರು. ಎಸ್‌.ಎಸ್‌. ಮೇಟಿ, ಭಾಗ್ಯ, ನೆಲಧರಿ, ಕೃಷ್ಣ ಕಿಶೋರ್‌ ಇದ್ದರು.

ಕನ್ನಡಪ್ರಭವಾರ್ತೆ ಚಿಕ್ಕಮಗಳೂರು

ಮನುಷ್ಯ ಸಕಲ ಅವಶ್ಯಕತೆ ಪೂರೈಸುವ ಪ್ರಕೃತಿ ನಿಷ್ಟೆಯಿಂದ ಕಾಪಾಡಿಕೊಳ್ಳಬೇಕು. ಗಾಳಿ, ಬೆಳಕು, ಆಹಾರ ಒದಗಿಸುವ ಭೂಮಿ ಫಲವತ್ತತೆಯಿಂದ ಕೂಡಿರಲು ಪ್ರತಿಯೊಬ್ಬರು ಸಸಿ ನೆಟ್ಟು ಬೆಳೆಸಬೇಕು ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ವಿ. ಹನುಮಂತಪ್ಪ ಹೇಳಿದರು.

ಕಾನೂನು ಸೇವಾ ಪ್ರಾಧಿಕಾರ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಹಾಗೂ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಹಯೋಗದಲ್ಲಿ ಜಿಲ್ಲಾ ಕಾರಾಗೃಹದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ ಮಾನವ ಜೀವನ ಸಾಗಿಸಲು ಪ್ರಕೃತಿ ಪ್ರತಿಯೊಂದನ್ನು ಕೊಡುಗೆಯಾಗಿ ನೀಡಿದೆ. ನಿಯಮಿತವಾಗಿ ಬಳಕೆ ಮಾಡಿಕೊಂಡು ಬದುಕು ರೂಪಿಸಿಕೊಳ್ಳಬೇಕು. ಅತಿಯಾಗಿ ಬಳಸಿಕೊಂಡಲ್ಲಿ ಇಡೀ ಜೀವ ರಾಶಿಗೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮರ ಗಿಡಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ತಾಪಮಾನ ಏರಿಕೆ, ಹವಾಮಾನದ ಏರುಪೇರಿನಿಂದ ಪರಿಸರ ಬಹಳಷ್ಟು ಹಾನಿಗೊಂಡಿದೆ. ಇವುಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಪರಿಸರಾಸಕ್ತರು ಸೇರಿದಂತೆ ಜಿಲ್ಲೆಯ ಜನತೆ ಯಥೆಚ್ಚವಾಗಿ ತಮ್ಮ ಮನೆಯಂಗಳ ಅಥವಾ ಖಾಲಿ ಸ್ಥಳಗಳಲ್ಲಿ ಸಸಿ ನೆಟ್ಟು ಪೋಷಿಸುವ ಮೂಲಕ ಪ್ರಕೃತಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದರು.

ಆಕಸ್ಮಿಕ ಅಥವಾ ಇನ್ಯಾವುದೇ ತಪ್ಪುಗಳಿಗೆ ಬಂಧಿಗಳಾಗುವ ಕೈದಿಗಳು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಕಾರಾಗೃಹದಲ್ಲಿ ಇರುವಷ್ಟು ದಿವಸಗಳು ಬದುಕಿನಲ್ಲಿ ಕಲಿತ ಪಾಠವೆಂದು ಪರಿಗಣಿಸಿ ಬಿಡುಗಡೆ ಬಳಿಕ ಸಾತ್ವಿಕ ಜೀವನ ನಡೆಸಬೇಕು. ಪೋಷಕರು, ಮಡದಿಯನ್ನು ಸೌಖ್ಯವಾಗಿ ಇರಿಸುವುದು ಹಾಗೂ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಕೊಡಿಸುವ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.

ಬ್ರಹ್ಮಕುಮಾರಿ ಸಂಸ್ಥೆ ಜಿಲ್ಲಾ ಸಂಚಾಲಕಿ ಭಾಗ್ಯ ಮಾತನಾಡಿ, ಪ್ರಕೃತಿಯನ್ನು ದೇವರೆಂದು ಪೂಜಿಸುವ ಮೂಲಕ ಕಾಪಾಡಿಕೊಳ್ಳುವ ಜವಬ್ದಾರಿ ನಾಗರೀಕರು ನಿರ್ವಹಿಸಬೇಕು. ಬಹುತೇಕ ಜೀವರಾಶಿಗೆ ತನ್ನದೇ ಕೊಡುಗೆ ನೀಡಿರುವ ಪರಿಸರವನ್ನು ಸಂರಕ್ಷಿಸುವ ಕಾರ್ಯದಲ್ಲಿ ಮುಂದಾಗಬೇಕು. ಅಲ್ಲಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರದ ಋಣ ತೀರಿಸಬೇಕು ಎಂದು ತಿಳಿಸಿದರು.

ಪ್ರಕೃತಿಗೆ ಪೂರಕವಾಗುವ ನಿಟ್ಟಿನಲ್ಲಿ ಅರಳಿ, ನೇರಳೆ, ಹೊಂಗೆ, ಹಲಸು ಸೇರಿದಂತೆ ಸಸಿಗಳನ್ನು ಮನೆಗಳ ಸಮೀಪದಲ್ಲಿ ಬೆಳೆಸಿದರೆ ಪರಿಶುದ್ಧ ವಾತಾವರಣ ನಿಮ್ಮದಾಗಲಿದೆ. ಮುಂದಿನ ಪೀಳಿಗೆಗೆ ಆ ಮರವೊಂದು ಪೂರ್ವಜರ ನೆನಪಾರ್ಥ ಶಾಶ್ವತವಾಗಿ ಉಳಿಯಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಬಿ.ಐ. ಹಿರಿಯ ವ್ಯವಸ್ಥಾಪಕ ಕೃಷ್ಣ ಕಿಶೋರ್, ಕಾರಾಗೃಹ ಅಧೀಕ್ಷಕ ಎಸ್.ಎಸ್. ಮೇಟಿ, ಸಹಾಯಕ ಜೈಲರ್ ಎಂ.ಕೆ.ನೆಲಧರಿ, ಯೋಗ ತರಬೇತುದಾರ ಡಾ. ಭಾಸ್ಕರ್ ಹಾಗೂ ಕಾರಾಗೃಹ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.