ಅಡಕೆ ಮಾನ ಕಾಪಾಡಿ, ಹೆಚ್ಚು ಸಂಶೋಧನೆ ಕೈಗೊಳ್ಳಿ

| Published : Sep 21 2024, 01:53 AM IST

ಸಾರಾಂಶ

ಅನಾದಿ ಕಾಲದಿಂದಲೂ ಮಂಗಳ ಕಾರ್ಯಗಳಲ್ಲಿ ಸ್ಥಾನ ಪಡೆದ ಅಡಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆಯೆಂದು ಕೇಂದ್ರದಲ್ಲಿ ಅಡಕೆ ಮಾನ ಹರಾಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಡಕೆಯಿಂದ ಉಪ ಉತ್ಪನ್ನಗಳನ್ನು ಹೆಚ್ಚು ಹೆಚ್ಚಾಗಿ ಉತ್ಪಾದಿಸುವತ್ತ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಆ ಮೂಲಕ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.

- ಮಂಗಲ ಕಾರ್ಯದಲ್ಲಿ ಸ್ಥಾನ ಪಡೆದ ಅಡಕೆಯಿಂದ ಉಪ ಉತ್ಪನ್ನ ತಯಾರಿಕೆಯಾಗಲಿ: ಸಿರಿಗೆರೆ ಶ್ರೀ ಸಲಹೆ - ದಾವಣಗೆರೆ ಅಡಕೆ ಅಭಿವೃದ್ಧಿ ಪರಿಷ್ಕರಣ-ಮಾರಾಟ ಸಹಕಾರ ಸಂಘ ರಜತ ಮಹೋತ್ಸವ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಅನಾದಿ ಕಾಲದಿಂದಲೂ ಮಂಗಳ ಕಾರ್ಯಗಳಲ್ಲಿ ಸ್ಥಾನ ಪಡೆದ ಅಡಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆಯೆಂದು ಕೇಂದ್ರದಲ್ಲಿ ಅಡಕೆ ಮಾನ ಹರಾಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಡಕೆಯಿಂದ ಉಪ ಉತ್ಪನ್ನಗಳನ್ನು ಹೆಚ್ಚು ಹೆಚ್ಚಾಗಿ ಉತ್ಪಾದಿಸುವತ್ತ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಆ ಮೂಲಕ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ದಾವಣಗೆರೆ ಅಡಕೆ ಅಭಿವೃದ್ಧಿ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ (ದಾಮ್ಕೋಸ್‌) ರಜತ ಮಹೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಅವರು, "ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬರೋಲ್ಲ " ಎಂಬ ಗಾದೆಮಾತಿದೆ. ಕೇಂದ್ರ ಸರ್ಕಾರ ಅಡಕೆಯಿಂದ ಕ್ಯಾನ್ಸರ್ ಬರುತ್ತದೆಂದು ಹೇಳಿ, ಅಡಕೆ ಮಾನ ಹರಾಜು ಮಾಡುತ್ತಿದೆ. ಆದರೆ, ಅಡಕೆಯಿಂದ ಕ್ಯಾನ್ಸರ್ ಬರುವುದಿಲ್ಲ ಎಂದರು.

ಗುಟ್ಕಾ ರಾಸಾಯನಿಕದಿಂದಲೇ ಕ್ಯಾನ್ಸರ್‌:

ಅಡಕೆ ಕ್ಯಾನ್ಸರ್‌ಕಾರಕ ಅಲ್ಲ. ಗುಟ್ಕಾ ತಯಾರಿಸುವಾಗ ಅದಕ್ಕೆ ಸೇರಿಸುವ ರಾಸಾಯನಿಕದಿಂದ ಕ್ಯಾನ್ಸರ್ ಬರುತ್ತದೆ. ಗುಟ್ಕಾ ಮಾಡುವಾಗ ರಾಸಾಯನಿಕ ಪದಾರ್ಥ ಮಿಶ್ರಣ ಮಾಡುತ್ತಾರೆ. ಅದನ್ನು ಸೇವಿಸಿದಾಗಷ್ಟೇ ಕ್ಯಾನ್ಸರ್ ಬರುತ್ತದೆ. ಅಡಕೆಯಿಂದ ಉಪ್ಪಿನಕಾಯಿ, ಅಗರ ಬತ್ತಿ, ಬಟ್ಟೆ ತಯಾರಿಕೆ, ಅಡಕೆ ಟೀ ಹೀಗೆ ನಾನಾ ಉಪ ಉತ್ಪನ್ನಗಳನ್ನು ಮಾಡಲಾಗುತ್ತದೆ. ಅಡಕೆಯಿಂದ ಉಪ ಉತ್ಪನ್ನಗಳನ್ನು ತಯಾರಿಸುವ ಮೂಲಕ ಅಡಕೆ ಎಂಬುದು ಗುಡ್ ಕಾಸ್‌ಗೆ ಬಳಕೆಯಾಗಬೇಕು. ಈ ಮೂಲಕ ಅಡಕೆಗೆ ಒಳ್ಳೆಯ ಮರ್ಯಾದೆಯೂ ಸಿಗುವಂತಾಗಲಿ ಎಂದು ಹೇಳಿದರು.

ಬೆಳೆಗಾರರು ಸಲಹೆಗಳ ಪಡೆಯಬೇಕು:

ಮಂಗಳೂರಿನ ಕ್ಯಾಂಪ್ಕೋ ಅಧ್ಯಕ್ಷ ಕಿಶೋರಕುಮಾರ ಕೊಡ್ಗಿ ಮಾತನಾಡಿ, ಅಡಕೆಯಿಂದ ಉತ್ತಮ ಬೆಲೆ ನಿರೀಕ್ಷಿಸುವುದಾದರೆ ಅದರ ಗುಣಮಟ್ಟವನ್ನು ನಿರಂತರ ಕಾಯ್ದುಕೊಳ್ಳಬೇಕು. ಗುಣಮಟ್ಟ ಇಲ್ಲದಿದ್ದರೆ ಅಡಕೆಗೆ ಬೆಲೆ ಸಿಗುವುದಿಲ್ಲ. ಅಡಕೆಗೆ ಗುಣಮಟ್ಟ ಇಲ್ಲವಾದರೆ ಅದು ಜನಾರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಉತ್ತಮ ಬೆಳವಣಿಗೆಯಲ್ಲ. ಇಂತಹದ್ದನ್ನು ಕ್ಯಾಂಪ್ಕೋ ಸಹ ಒಪ್ಪುವುದಿಲ್ಲ. ಹಾಗಾಗಿ, ಬೆಳೆಗಾರರು ಅಡಕೆ ಗುಣಮಟ್ಟವನ್ನು ನಿರಂತರ ಕಾಯ್ದುಕೊಳ್ಳಬೇಕು. ಕ್ಯಾಂಪ್ಕೋ, ತುಮ್ಕೋಸ್‌, ದಾಮ್ಕೋಸ್‌ನಂತಹ ಸಂಸ್ಥೆಗಳ ಸಲಹೆಗಳನ್ನು ಬೆಳೆಗಾರರು ಪಡೆಯಬೇಕು ಎಂದರು.

ಕರ್ನಾಟಕದ ಅಡಕೆಗೆ ಉತ್ತರ ಭಾರತದಲ್ಲಿ ಉತ್ತಮ ಬೆಲೆ, ಮರ್ಯಾದೆ ಇದೆ. ಅಲ್ಲಿನ ಜನರಿಗೆ ಬೇಕಾಗಿರುವುದು ಗುಣಮಟ್ಟದ ಅಡಕೆ. ಕಳಪೆ ಅಡಕೆ ಇದ್ದರೆ ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಕೆಲ ದಿನಗಳ ಹಿಂದೆ ಸುಮಾರು 500 ಲೋಡ್ ಅಡಕೆ ವಾಪಸ್‌ ಆಗಿದೆ. ಬೆಳೆಗಾರರು ಇದರ ಬಗ್ಗೆ ಜಾಗ್ರತೆ ವಹಿಸಬೇಕು. ತುಸ್ಕೋಸ್‌ ಅಡಕೆಯೆಂದರೆ ಅಪಾರ ಬೇಡಿಕೆ ಇದೆ. ದಾಮ್ಕೋಸ್‌ ಅಡಕೆಗೂ ಉತ್ತಮ ಬೆಲೆ, ಬೇಡಿಕೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ದಾಮ್ಕೋಸ್ ಗುಣಮಟ್ಟದ ಅಡಕೆಗೆ ನಿರಂತರ ಆದ್ಯತೆ ನೀಡಲಿ ಎಂದು ತಿಳಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಅಡಕೆಯಿಂದ ಕ್ಯಾನ್ಸರ್ ರೋಗ ಬರುವುದಿಲ್ಲ. ನಾನೊಬ್ಬ ದಂತ ವೈದ್ಯೆಯಾಗಿ ಈ ಮಾತು ಹೇಳುತ್ತಿದ್ದೇನೆ. ಆದರೆ, ಅಡಕೆಗೆ ಮಿಶ್ರಣ ಮಾಡುವ ರಾಸಾಯನಿಕಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಾಗಿವೆ. ದಾವಣಗೆರೆ ತಾಲೂಕಿನಲ್ಲಿ 20 ಸಾವಿರಕ್ಕೂ ಅಧಿಕ ಅಡಕೆ ಬೆಳೆಗಾರರಿದ್ದಾರೆ. ಆದರೆ, ದಾಮ್ಕೋಸ್‌ನಲ್ಲಿ ಕೇವಲ 1400 ಸದಸ್ಯರಿದ್ದಾರೆ. ಮುಂದಿನ ದಿನಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾಗಲಿ. ನಮ್ಮ ಸಮಸ್ಯೆಗಳನ್ನು ಸರ್ಕಾರದ ಮುಂದಿಡುವಾಗ ನಮ್ಮ ಸಂಖ್ಯಾಬಲ ಬೇಕಾಗುತ್ತದೆ. ಹಾಗಾಗಿ, ದಾಮ್ಕೋಸ್‌ನಲ್ಲಿ ಅಡಕೆ ಬೆಳೆಗಾರರು ಸದಸ್ಯತ್ವ ಪಡೆಯಲು ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

ದಾಮ್ಕೋಸ್‌ ಅಧ್ಯಕ್ಷ ಬಿ.ಕೆ.ಶಿವಕುಮಾರ ಹಳೇಬಾತಿ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮುದೇಗೌಡ್ರ ಗಿರೀಶ, ಜಿ.ಆರ್.ಷಣ್ಮುಖಪ್ಪ, ದಾಮ್ಕೋಸ್ ಸಂಸ್ಥಾಪಕ ಅಧ್ಯಕ್ಷ ಎಚ್.ಜಯಣ್ಣ, ಅಧ್ಯಕ್ಷ ಆರ್.ಎಂ. ರವಿ ಅಜ್ಜಿಹಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ, ಪತ್ರಕರ್ತ ಸದಾನಂದ ಹೆಗಡೆ, ದಾಮ್ಕೋಸ್‌ ನಿರ್ದೇಶಕರಾದ ಎಚ್.ಜಿ. ಮಲ್ಲಿಕಾರ್ಜುನ, ಜಿ.ಸಿ.ವಾಮದೇವಪ್ಪ, ಎಚ್.ಜಿ. ಮರುಳಸಿದ್ದಪ್ಪ, ಬಿ.ಬಸವರಾಜಯ್ಯ, ಕೆ.ಜಿ.ಉಮೇಶ, ಎಂ.ಆರ್. ಮಂಜುನಾಥಯ್ಯ, ಎ.ಜಿ. ರೇವಣಸಿದ್ದಪ್ಪ, ಎಚ್.ಎಸ್. ಮಂಗಳಗೌರಮ್ಮ, ಕೆ.ಸುಧಾ, ಕೆ.ಪಾಲಾಕ್ಷಮ್ಮ, ಬೇತೂರು ನರೇಂದ್ರ ಇತರರು ಇದ್ದರು.

- - -

ಟಾಪ್‌ ಕೋಟ್‌ ಅಡಕೆಯನ್ನು ಬೇರೆಡೆ ಮಾರಾಟ ಮಾಡುವುದಕ್ಕೆ ಶೇ.11ರಷ್ಟು ತೇವಾಂಶ ಇರಲೇಬೇಕು. ಆದರೆ, ಈಗ ಶೇ.7ರಷ್ಟು ತೇವಾಂಶ ನಿಗದಿಪಡಿಸಲಾಗಿದೆ. ಇದರಿಂದ ನಷ್ಟವಾಗುತ್ತಿದೆ. ಈ ಬಗ್ಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಲೋಕಸಭೆಯಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತುವ ಮೂಲಕ ಅಡಕೆ ಬೆಳೆಗಾರರ ಹಿತಕಾಯಬೇಕು

- ಕಿಶೋರಕುಮಾರ ಕೊಡ್ಗಿ, ಅಧ್ಯಕ್ಷ, ಕ್ಯಾಂಪ್ಕೋ, ಮಂಗಳೂರು

- - - -20ಕೆಡಿವಿಜಿ1:

ದಾವಣಗೆರೆಯಲ್ಲಿ ದಾಮ್ಕೋಸ್‌ ರಜತ ಮಹೋತ್ಸವ ಸಮಾರಂಭದಲ್ಲಿ ಸಿರಿಗೆರೆ ಶ್ರೀಗಳು, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ ಕುಮಾರ ಕೂಡ್ಗಿ, ದಾಸ್ಕೋಸ್ ಅಧ್ಯಕ್ಷ ಬಿ.ಕೆ.ಶಿವಕುಮಾರ ಇತರರು ಸಂಸ್ಥೆಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. -20ಕೆಡಿವಿಜಿ2:

ದಾವಣಗೆರೆಯಲ್ಲಿ ದಾಮ್ಕೋಸ್‌ ರಜತ ಮಹೋತ್ಸವ ಸಮಾರಂಭವನ್ನು ಸಿರಿಗೆರೆ ಶ್ರೀಗಳು ಉದ್ಘಾಟಿಸಿದರು. ಸಂಸದೆ ಡಾ.ಪ್ರಭಾ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರಕುಮಾರ ಕೂಡ್ಗಿ, ದಾಮ್ಕೋಸ್‌ ಅಧ್ಯಕ್ಷ ಬಿ.ಕೆ.ಶಿವಕುಮಾರ ಇತರರು ಇದ್ದರು.