ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಜೀವ ಸಂಕುಲಕ್ಕೆ ನೀರು ಅತ್ಯಗತ್ಯವಾಗಿದ್ದು, ಜಲಮೂಲಗಳ ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಹಿಳಾ ಅಧ್ಯಯನ ಕೇಂದ್ರ ಮತ್ತು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಹಾಗೂ ಬಿಎಲ್‌ಡಿಇಎ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜ್ ಸಹಯೋಗದಲ್ಲಿ ಜಲ ಸಖಿ-ಮಹಿಳಾ ಜಲ ಜಾಗೃತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಿಳೆಯರು ನೀರಿನ ಪಾರಂಪರಿಕ ಬಳಕೆದಾರರಾಗಿದ್ದಾರೆ. ನೀರು ಸಂರಕ್ಷಣೆಯಲ್ಲಿ ಮಹಿಳೆಯ ಪಾತ್ರ ಬಹುಮುಖ್ಯವಾಗಿದೆ. ನೀರಿನ ಮಹತ್ವ ಕುರಿತು ಅವರಿಗೆ ಸಾಕಷ್ಟು ಜ್ಞಾನವಿದೆ. ಮುಂದೊಂದು ದಿನ ನೀರಿಗಾಗಿಯೇ ಹೋರಾಟಗಳು ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ನೀರಿನ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕಿದೆ. ಅಂತಾರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ನೀರಿನ ಸದ್ಬಳಕೆ ಮತ್ತು ಸಂರಕ್ಷಣೆ ಕುರಿತು ಚರ್ಚೆಗಳು ನಡೆಯಬೇಕು ಎಂದು ಹೇಳಿದರು.
ಪ್ರಾಕೃತಿಕ ಜಲಮೂಲಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಕೇವಲ ಜನಪ್ರತಿನಿಧಿಗಳು ಮಾತ್ರ ಇದಕ್ಕೆ ಹೊಣೆಗಾರರಲ್ಲ. ಸಮಾಜದ ಎಲ್ಲರೂ ನೀರಿನ ಸಂರಕ್ಷಣೆಗೆ ಮುಂದಾಗಬೇಕು. ನೀರು ಮಿತವಾಗಿ ಬಳಸಬೇಕು. ನೀರಿನ ಬಗ್ಗೆ ಅಧ್ಯಯನ, ಸಂಶೋಧನೆ, ಡಾಕ್ಯುಮೆಂಟರಿ ಚಿತ್ರಗಳನ್ನು ಮಾಡಬೇಕು. ಮುಂದಿನ ಪೀಳಿಗೆಗೆ ನೀರು ಉಳಿಸುವ ಕೆಲಸವನ್ನು ಮಹಿಳೆಯರು ಜಲ ಸಖಿಯರಾಗಿ ಮಾಡಬೇಕು ಎಂದು ತಿಳಿಸಿದರು.ಸಬಲಾ ಸಂಸ್ಥೆ ಸಿಇಒ ಮತ್ತು ಸಿಂಡಿಕೇಟ್ ಸದಸ್ಯೆ ಮಲ್ಲಮ್ಮ ಯಾಳವಾರ ಮಾತನಾಡಿ, ಜೀವನದ ಶೈಲಿ ಬದಲಾಗುತ್ತಿದೆ. ಜೊತೆಗೆ ನೀರಿನ ಬಳಕೆ ಕೂಡ ಹೆಚ್ಚಾಗುತ್ತಿದೆ. ಅದು ನಿಲ್ಲಬೇಕು ಎಂದರು.
ಬಿಎಲ್‌ಡಿಇಎ ಕಾಲೇಜ್ ಆಫ್ ಎಂಜನಿಯರಿಂಗ್ ಮತ್ತು ಟೆಕ್ನಾಲಜಿ ನಿರ್ದೇಶಕ ಡಾ.ವಿ.ಜಿ.ಸಂಗಮ ಮಾತನಾಡಿ, ಮುಂದಿನ ಪೀಳಿಗೆಗೆ ನೀರು ಉಳಿಸುವ ಸಂಕಲ್ಪ ಪ್ರತಿಯೊಬ್ಬರು ಮಾಡಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಧಾರವಾಡದ ವಾಲ್ಮಿ ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಮಾತನಾಡಿ, ನೀರು ಮತ್ತು ನಾರಿ ಇಲ್ಲದಿದ್ದರೆ ಬದುಕು ದುಸ್ತರವಾಗುತ್ತದೆ. ಗಾಳಿ, ನೀರು, ಮಣ್ಣು ಮತ್ತು ಅನ್ನ ಪ್ರಾಕೃತಿಕವಾಗಿ ಪವಿತ್ರವಾಗಿವೆ. ಅವುಗಳನ್ನು ಕಲುಷಿತಗೊಳಿಸುವ ಕೆಲಸ ಮಾಡಬಾರದು. ರಾಜ್ಯದಲ್ಲಿ ೩೬ ಸಾವಿರ ಕೆರೆಗಳಿದ್ದು, ಅವುಗಳ ಸಂರಕ್ಷಣೆಯನ್ನು ಸರ್ಕಾರ ಮತ್ತು ಸಮಾಜ ಮಾಡಬೇಕು. ರಾಜ್ಯದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳನ್ನು ರಚಿಸಲಾಗಿದೆ. ಅವುಗಳಲ್ಲಿ ಮಹಿಳೆಯರು ಕಡ್ಡಾಯವಾಗಿ ಭಾಗಿಯಾಗುವಂತೆ ತಿಳಿಸಿದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ, ನಗರದ ಸಣ್ಣ ನೀರಾವರಿ ವಲಯದ ಅಧೀಕ್ಷಕ ಅಭಿಯಂತರರು ಪದ್ಮಜಾ.ಎಮ.ಎನ್, ಮಹಿಳಾ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಲಕ್ಷ್ಮೀದೇವಿ ಯಲ್ಲಪ್ಪ, ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಾಬು ಸಜ್ಜನ, ಅಧೀಕ್ಷಕ ಅಭಿಯಂತರ ಕಚೇರಿ ತಾಂತ್ರಿಕ ಸಹಾಯಕಿ ಮಹೇಶ್ವರಿ ಪಾಟೀಲ, ಡಾ.ಭಾಗ್ಯಶ್ರೀ ದೊಡಮನಿ, ಡಾ.ಸರೋಜಾ ಸಂತಿ, ಡಾ.ಶಶಿಕಲಾ ರಾಠೋಡ ಮುಂತಾದವರು ಇದ್ದರು.ಪ್ರಾಧ್ಯಾಪಕಿ ಸುವರ್ಣ ದೊಡಮನಿ ಪ್ರಾಸ್ತಾವಿಕ ಮಾತನಾಡಿದರು. ಪ್ರಾಧ್ಯಾಪಕರಾದ ಇಂ.ಬಿ.ಎಚ್.ಪೂಜಾರ ಮತ್ತು ಇಂದುಧರ ಹಿರೇಮಠ ಪರಿಚಯಿಸಿದರು. ಅನುರಾಧಾ ಮಳಗಿ ನಿರೂಪಿಸಿದರು. ಫಕಿರೇಶ ಅಗಡಿ ವಂದಿಸಿದರು.