ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಹೊಣೆ: ನ್ಯಾ. ರಾಜೇಶ್

| Published : Jul 23 2025, 01:48 AM IST

ಸಾರಾಂಶ

ಕಾಣೆಯಾದ ಮಕ್ಕಳ ಪತ್ತೆಯ ಜಿಲ್ಲಾ ಮಟ್ಟದ ಕಾರ್ಯಪಡೆ ತಂಡವು ತಾಲೂಕಿನ ಕೊರಲಗುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ ಹಾಗೂ ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಿತು.

ಕಾಣೆಯಾದ ಮಕ್ಕಳ ಪತ್ತೆಯ ಜಿಲ್ಲಾ ಮಟ್ಟದ ಕಾರ್ಯಪಡೆ ತಂಡದಿಂದ ಶಾಲೆಗೆ ಭೇಟಿ, ಪರಿಶೀಲನೆ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಕಾಣೆಯಾದ ಮಕ್ಕಳ ಪತ್ತೆಯ ಜಿಲ್ಲಾ ಮಟ್ಟದ ಕಾರ್ಯಪಡೆ ತಂಡವು ತಾಲೂಕಿನ ಕೊರಲಗುಂದಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ ಹಾಗೂ ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಿತು.

ತಂಡದಲ್ಲಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರಲ್ಲದೆ, ಬಾಲ್ಯ ವಿವಾಹ ಪದ್ಧತಿಯಿಂದಾಗುವ ಅಪಾಯಗಳು ಕುರಿತು ಮನವರಿಕೆ ಮಾಡಿಕೊಟ್ಟರು.

ಪ್ರಸ್ತುತ ದಿನಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ದೌರ್ಜನ್ಯ ಮತ್ತು ಮಾನಸಿಕ-ದೈಹಿಕ ಹಿಂಸೆ ನಡೆಯುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು. ಪ್ರತಿದಿನ ಶಾಲೆಗೆ ಬರಬೇಕು. ಪೋಷಕರು ಸಹ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಈ ಕುರಿತು ಶಿಕ್ಷಕರು ನಿಗಾವಹಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರೂ ಹೊಣೆಗಾರಿಕೆಯಿಂದ ಜವಾಬ್ದಾರಿ ನಿರ್ವಹಿಸಬೇಕು ಎಂದು ಸೂಚಿಸಿದರು.

ಹಿರಿಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಚಂದ್ರಕಾಂತ್ ನಂದಾರೆಡ್ಡಿ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ನಾಪತ್ತೆ, ಬಾಲಕಾರ್ಮಿಕ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗುತ್ತಿದ್ದು, ಮಕ್ಕಳು ಇಂತಹ ಸಂದರ್ಭದಲ್ಲಿ ಪೊಲೀಸ್ ತುರ್ತು ಸಹಾಯವಾಣಿ 112 ಹಾಗೂ ಮಕ್ಕಳ ಸಹಾಯವಾಣಿ 1098 ಗೆ ಸಂಪರ್ಕಿಸುವ ಮೂಲಕ ಸಹಾಯ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ತಮಗೆ ಯಾವುದೇ ತೊಂದರೆಯಾದಲ್ಲಿ ಸಹಾಯವಾಣಿಗೆ ಕರೆ ಮಾಡಿ ಎಂದು ತಿಳಿಸಿದರು.

ನಿಮ್ಮ ಸುತ್ತ-ಮುತ್ತಲ ಪ್ರದೇಶದಲ್ಲಿ ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಬಾಲಕಾರ್ಮಿಕ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ಕಂಡು ಬಂದರೆ ತಕ್ಷಣ ಮಕ್ಕಳ ಸಹಾಯವಾಣಿ 1098/112 ಕರೆ ಮಾಡಿ. ಬಾಲ್ಯ ವಿವಾಹ ತಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳು ಸಹ ಕೈ ಜೋಡಿಸಿ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆ ನಾಗಪ್ಪ ತಿಳಿಸಿದರು.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಬಿ.ಉಮಾದೇವಿ ಮಾತನಾಡಿದರು. ಬಳಿಕ ತಂಡದ ಸದಸ್ಯರು ಕೊರಲಗುಂದಿ ಗ್ರಾಪಂ ಕಚೇರಿಗೆ ಆಕಸ್ಮಿಕ ಭೇಟಿ ನೀಡಿ ಮಕ್ಕಳಿಗೆ ಸಂಬಂಧಿಸಿದ ದಾಖಲೆ ಪರಿಶೀಲಿಸಿದರು. ಮಹಿಳೆಯರ ಮತ್ತು ಮಕ್ಕಳು ಕಾವಲು ಸಮಿತಿಯ ಸಭೆಯನ್ನು ಪ್ರತಿ ಮೂರು ತಿಂಗಳೊಮ್ಮೆ ನಡೆಸಿ, ಸಭೆಯ ನಡವಳಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲು ಸೂಚಿಸಿದರು. ಇದೇ ವೇಳೆ ಮಕ್ಕಳ ವಿಶೇಷ ಗ್ರಾಮಸಭೆ ಹಮ್ಮಿಕೊಂಡು ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಶಾಲೆಗೆ ದೀರ್ಘ ಗೈರಾದ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತು ಮಾಹಿತಿ ಪಡೆಯಲಾಯಿತು. ಈ ಕುರಿತು ಮಕ್ಕಳ ಮನೆ ಭೇಟಿ ನೀಡಿ ಪೋಷಕರ ಮನವೊಲಿಸಿ ಪುನಃ ಶಾಲೆಗೆ ಕರೆತರಲು ಶಾಲಾ ಶಿಕ್ಷಣ ಇಲಾಖೆಯ ಉಪ-ನಿರ್ದೇಶಕರಿಗೆ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಸೂಚನೆ ನೀಡಿದರು. ಈ ಕುರಿತು ಕ್ರಮ ಕೈಗೊಂಡ ವರದಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.

ಶಾಲೆಯಲ್ಲಿದ್ದ ದೂರು ಪೆಟ್ಟಿಗೆಯನ್ನು ತೆರೆಯಲಾಗಿ ಅದರಲ್ಲಿ 3 ದೂರುಗಳು ಕಂಡುಬಂದಿದ್ದು, ಶಾಲೆಗೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮತ್ತು ಖಾಯಂ ಶಿಕ್ಷಕರ ನೇಮಕ ಮಾಡಲು ದೂರಿನಲ್ಲಿ ಕೋರಲಾಗಿತ್ತು. ಅದರನ್ವಯ ಈ ಕುರಿತು ಸಂಬಂಧಿಸಿದ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದರು. ಮೋಕಾ ಪೊಲೀಸ್ ಠಾಣೆ ಪಿಎಸ್‌ಐ ಕಾಳಿಂಗ, ಜಿಲ್ಲಾ ಬಾಲನ್ಯಾಯ ಮಂಡಳಿಯ ಸದಸ್ಯೆ ಪುಷ್ಪಲತಾ, ರೀಡ್ಸ್ ಸಂಸ್ಥೆಯ ನಿರ್ದೇಶಕ ತಿಪ್ಪೇಸ್ವಾಮಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ವೇದಾವತಿ, ರವಿಚಂದ್ರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸಿ.ಈಶ್ವರ ರಾವ್, ಚನ್ನಬಸಪ್ಪ ಪಾಟೀಲ್, ಸುಧಾ, ಪಿಎಚ್‌ಸಿ ವೈದ್ಯಾಧಿಕಾರಿ ನೋಶಿನ್, ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿ ಲಲಿತಮ್ಮ, ಶಾಲೆಯ ಮುಖ್ಯಗುರು ಭಾರತಿ, ರಮೇಶ್ ಮತ್ತು ಸಹಶಿಕ್ಷಕರು, ಸ್ವಯಂಸೇವಾ ಸಂಸ್ಥೆಗಳ ಸಿಬ್ಬಂದಿಗಳಾದ ಶಿಲ್ಪಾ, ಲಕ್ಷ್ಮಿ, ಬಸಮ್ಮ ಸೇರಿದಂತೆ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.