ಕನ್ನಡಪ್ರಭ ವಾರ್ತೆ ವಿಜಯಪುರಗೋವುಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬ ರೈತನ ಕರ್ತವ್ಯ. ಕನಿಷ್ಠ ಒಂದು ಆಕಳವನ್ನಾದರೂ ಸಾಕುವ ಕೆಲಸವಾಗಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಗೋವುಗಳನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬ ರೈತನ ಕರ್ತವ್ಯ. ಕನಿಷ್ಠ ಒಂದು ಆಕಳವನ್ನಾದರೂ ಸಾಕುವ ಕೆಲಸವಾಗಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ತಾಲೂಕಿನ ಕಗ್ಗೋಡ ಗ್ರಾಮದಲ್ಲಿರುವ ಸಿದ್ದೇಶ್ವರ ಸಂಸ್ಥೆಯ ರಾಮನಗೌಡ ಬಾ. ಪಾಟೀಲ (ಯತ್ನಾಳ) ಗೋರಕ್ಷಾ ಕೇಂದ್ರದಲ್ಲಿ ಗೋ ಶಾಲೆ ಆಶ್ರಯದಲ್ಲಿ ನಡೆದ ಗೋ ಆಧಾರಿತ ಕೃಷಿಕರ ಚಿಂತನಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೋವು ಕಾಮಧೇನು ಕಲ್ಪವೃಕ್ಷ ಎಂಬ ಭಾವನೆಯಿಂದ ಸಾವಿರಾರು ವರ್ಷಗಳ ಹಿಂದಿನಿಂದಲೂ ನಮ್ಮ ಪೂರ್ವಜರು ಇಡೀ ಪ್ರಾಣಿಗಳಲ್ಲಿಯೇ ಗೋವಿಗೆ ಅತ್ಯುನ್ನತ ಮಹತ್ವ ಕೊಟ್ಟಿದ್ದಾರೆ. ನಾವು ಆಧುನಿಕತೆಯಲ್ಲಿ ಯಾಂತ್ರಿಕೃತ ಒಕ್ಕಲುನಕ್ಕೆ ಒಳಗಾಗಿ, ಹಸುಗಳನ್ನು ಸಾಕುವುದು ಬಹಳ ಕಡಿಮೆ ಆಗಿದೆ. ಆದರೆ, ವಿದೇಶದಲ್ಲಿ ಬೆಳಗ್ಗೆ ಆಕಳುಗಳ ಮೇಲೆ ಕೈಯಾಡಿಸಿದರೆ ಬಿಪಿ ನಾರ್ಮಲ್ ಇರುತ್ತದೆ ಅಂತ ಹಸು ಸಾಕುತ್ತಿದ್ದಾರೆ ಎಂದು ತಿಳಿಸಿದರು.ಕೃಷಿ ಕ್ಷೇತ್ರದಲ್ಲಿ ಗೋ ಆಧಾರಿತ ಆರ್ಥಿಕತೆ ಅಭಿವೃದ್ಧಿ ಪಡಿಸಲು ಹಾಗೂ ಕೃಷಿಕರು ಗೋ ಆಧಾರಿತ ಕೃಷಿ ಹಾಗೂ ಸಾವಯವ ಕೃಷಿ ಅಳವಡಿಸಿಕೊಂಡು ಆರ್ಥಿಕ ಸಬಲತೆ ಪಡೆಯವ ದೃಷ್ಟಿಯಿಂದ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ನೀಡುವ ಅತ್ಯಮೂಲ್ಯವಾದ ಮಾಹಿತಿ ಪಡೆದುಕೊಂಡು ನಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಹಾಗೂ ಆರ್ಥಿಕವಾಗಿ ಸಬಲವಾಗಲು ಗೋ ಆಧಾರಿತ ಕೃಷಿ, ಸಾವಯವ ಕೃಷಿ ಅಳವಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಪಶು ವೈದ್ಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ ಸಂಶೋದನಾ ನಿರ್ದೇಶಕ ಡಾ.ಶಿವಪ್ರಕಾಶ.ಬಿ.ವಿ ರವರು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ರಾಹುಲಕುಮಾರ ಭಾವಿದೊಡ್ಡಿ, ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ಆರ್.ಎಸ್.ಪದರಾ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಗಂಗಾಧರ ದೇಸಾಯಿ ಸೇರಿದಂತೆ ಸಿದ್ದೇಶ್ವರ ಸಂಸ್ಥೆ ಪದಾಧಿಕಾರಿಗಳು, ಪ್ರಗತಿಪರ ರೈತರು, ಸಾವಯವ ಕೃಷಿ ಅವಲಂಬಿತ ಸಾವಿರಾರು ಕೃಷಿಕರು ಉಪಸ್ಥಿತರಿದ್ದರು.
ನಂತರ ನಡೆದ ಗೋಷ್ಠಿಗಳಲ್ಲಿ ಗೋ ಆಧಾರಿತ ಕೃಷಿ ಮತ್ತು ಆರ್ಥಿಕತೆ ಕುರಿತು ಗೋ ಆಧಾರಿತ ಕೃಷಿ ಚಿಂತಕ ಹಾಗೂ ಸಲಹೆಗಾರ ಡಾ.ಪ್ರಾಣೇಶ ಜಹಾಗೀರದಾರ, ಗೋ ಉತ್ಪನ್ನಗಳ ತಯಾರಿಕೆ ಕುರಿತು ತಜ್ಞ ಡಾ.ಸುಧೀಂದ್ರ ದೇಶಪಾಂಡೆ ಹಾಗೂ ಸಾವಯವ ಕೃಷಿ ಕುರಿತು ಡಾ.ರವಿಂದ್ರ ಬೆಳ್ಳಿ ಮಾಹಿತಿ ನೀಡಿದರು. ಇದೇ ವೇಳೆ ರೈತರು ಗೋ ಶಾಲೆ, ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರ, ಗೋ ಉತ್ಪನ್ನಗಳ ತಯಾರಿಕೆ ಘಟಕ ಮತ್ತು ಎರೆಹುಳು ಘಟಕಗಳಿಗೆ ಭೇಟಿ ನೀಡಿ ಮಾರ್ಗದರ್ಶನ ಪಡೆದುಕೊಂಡರು.ಸದ್ಯ ನಮ್ಮ ಗೋಶಾಲೆಯಲ್ಲಿ ಒಂದೂವರೆ ಸಾವಿರ ಹಸುಗಳನ್ನು ಸಾಕಿದ್ದೇವೆ. ನಮ್ಮ ಸೇವೆಗೆ ಅನೇಕ ರೈತರು ಕೂಡ ಮೇವಿನ ಕಾಣಿಕೆ ನೀಡುತ್ತಾರೆ. ಈ ಹಿಂದೆ ಆಗುತ್ತಿದ್ದ ನೀರಿನ ಸಮಸ್ಯೆಗೂ ಪರಿಹಾರ ಸಿಕ್ಕಿದೆ. ವಯಸ್ಸಾದ ಆಕಳುಗಳನ್ನು ಇಲ್ಲಿ ತಂದು ಬಿಡುತ್ತಾರೆ. ಇಲ್ಲಿನ ಆಕಳುಗಳ ತುಪ್ಪ, ಗೋಮೂತ್ರ, ಸೆಗಣಿಯಿಂದ ಅನೇಕ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತೇವೆ.-ಬಸನಗೌಡ ಪಾಟೀಲ ಯತ್ನಾಳ, ಶಾಸಕ