ವಿಬಿ ಜಿ ರಾಮ್ ಜಿ ಯೋಜನೆಯಡಿ ದುಡಿಯುವ ಕೂಲಿಕಾರರು ದಿನವಿಡೀ ಕಾಯಕದಲ್ಲಿ ತೊಡಗುವುದರಿಂದ ಆಸ್ಪತ್ರೆಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಸಮಯದ ಕೊರತೆ ಎದುರಿಸುತ್ತಾರೆ.
ಹರಪನಹಳ್ಳಿ: ಗ್ರಾಮೀಣ ಭಾಗದ ಶ್ರಮಿಕ ವರ್ಗದವರು ದೈಹಿಕ ಶ್ರಮದ ಜತೆಗೆ ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ, ಬಿಸಿಲು, ಮಳೆ ಎನ್ನದೆ ದುಡಿಯುವ ಕೂಲಿಕಾರರ ಆರೋಗ್ಯ ರಕ್ಷಣೆಯೇ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ವಿಜಯನಗರ ಜಿಪಂ ಜಿಲ್ಲಾ ಸಂಯೋಜಕ ಫಾಜಿಲ್ ಅಹಮದ್ ತಿಳಿಸಿದರು.
ತಾಲೂಕಿನ ನಂದಿಬೇವೂರು ಗ್ರಾಪಂ ವ್ಯಾಪ್ತಿಯ ಕಣವಿಹಳ್ಳಿ ಗ್ರಾಮದ ಗೋಕಟ್ಟೆ ಪುನಶ್ಚೇತನ ಕಾಮಗಾರಿ ಸ್ಥಳದಲ್ಲಿ ಗ್ರಾಮ ಆರೋಗ್ಯ ಅಭಿಯಾನದಡಿ ವಿಬಿ ಜಿ ರಾಮ್ ಜಿ ಕೂಲಿ ಕಾರ್ಮಿಕರಿಗಾಗಿ ಹಮ್ಮಿಕೊಂಡಿದ್ದ ವಿಶೇಷ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.ಕಾಮಗಾರಿ ಸ್ಥಳದಲ್ಲೇ ಆರೋಗ್ಯ ಸೇವೆ -
ವಿಬಿ ಜಿ ರಾಮ್ ಜಿ ಯೋಜನೆಯಡಿ ದುಡಿಯುವ ಕೂಲಿಕಾರರು ದಿನವಿಡೀ ಕಾಯಕದಲ್ಲಿ ತೊಡಗುವುದರಿಂದ ಆಸ್ಪತ್ರೆಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಸಮಯದ ಕೊರತೆ ಎದುರಿಸುತ್ತಾರೆ. ಈ ನಿಟ್ಟಿನಲ್ಲಿ ಕೂಲಿಕಾರರು ದುಡಿಯುವ ಸ್ಥಳಕ್ಕೇ ತೆರಳಿ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷಧೋಪಚಾರ ಒದಗಿಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.ನಂದಿಬೇವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಎಸ್.ಪಿ. ಹಾಲಸ್ವಾಮಿ ಮಾತನಾಡಿ, ಶ್ರಮಿಕರು ಕೇವಲ ದೈನಂದಿನ ಕೂಲಿಯನ್ನಷ್ಟೇ ಗಮನಿಸದೆ, ತಮ್ಮ ದೇಹದ ಸ್ವಾಸ್ಥ್ಯದ ಕಡೆಗೂ ಗಮನ ನೀಡಬೇಕು. ಸಣ್ಣಪುಟ್ಟ ಕಾಯಿಲೆಗಳೆಂದು ನಿರ್ಲಕ್ಷ್ಯ ವಹಿಸಿದರೆ ಭವಿಷ್ಯದಲ್ಲಿ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಕಾಲಕಾಲಕ್ಕೆ ರಕ್ತದೊತ್ತಡ, ಮಧುಮೇಹ ಸೇರಿದಂತೆ ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ಪಿಡಿಒ ಪ್ರಕಾಶ್ ಮಾತನಾಡಿ, ಜಲಮೂಲಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಗೋಕಟ್ಟೆಗಳು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದರ ಜತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿಯಾಗಿವೆ,ಇಂತಹ ಕಾಮಗಾರಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಮಿಕರು ತಮ್ಮ ಜೀವನೋಪಾಯದ ಜತೆಗೆ ಪರಿಸರ ಸಂರಕ್ಷಣೆಗೂ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.ಕೆಲಸದ ಅವಧಿಯಲ್ಲಿ ಕುಡಿಯಲು ಶುದ್ಧ ನೀರನ್ನು ಬಳಸಬೇಕು ಹಾಗೂ ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಶಿಬಿರದಲ್ಲಿ ಸಿಕ್ಕ ಸೇವೆಗಳು : ಆರೋಗ್ಯ ಶಿಬಿರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿ ಪಾಲ್ಗೊಂಡು ಕಾಮಗಾರಿ ಸ್ಥಳದಲ್ಲಿದ್ದ ನೂರಾರು ಕೂಲಿಕಾರರ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಿದರು. ರಕ್ತದೊತ್ತಡ (ಬಿಪಿ), ಸಕ್ಕರೆ ಕಾಯಿಲೆ (ಶುಗರ್), ರಕ್ತಹೀನತೆ ತಪಾಸಣೆ ಕೈಗೊಂಡು ಅಗತ್ಯವಿರುವವರಿಗೆ ಸ್ಥಳದಲ್ಲೇ ಉಚಿತವಾಗಿ ಮಾತ್ರೆ ಹಾಗೂ ಔಷಧ ವಿತರಿಸಲಾಯಿತು. ಜ್ವರ, ಕೀಲು ನೋವು, ಸುಸ್ತು ಮೊದಲಾದ ದೂರು ಹೊಂದಿದ್ದ ಕಾರ್ಮಿಕರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಮಾರ್ಗದರ್ಶನ ನೀಡಲಾಯಿತು.ತಾಲೂಕು ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಾ ಅಧಿಕಾರಿ ಗೀತಾ, ಪ್ರಯೋಗಶಾಲಾ ತಂತ್ರಜ್ಞ ಪ್ರವೀಣ ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿ ತ್ಯಾಗರಾಜ್ ಗ್ರಾಪಂ ಕಾರ್ಯದರ್ಶಿ ಶಶಿಕುಮಾರ್, ಎಸ್‌ಡಿಎಎ ಭೀಮನಾಯ್ಕ, ಬಿಎಫ್‌ಟಿ ರಮೇಶ್ ಬೂದಿಹಾಳ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕಾಯಕ ಬಂಧುಗಳು ಮತ್ತು ಕಣವಿಹಳ್ಳಿ ಗ್ರಾಮದ ಕೂಲಿಕಾರರು ಉಪಸ್ಥಿತರಿದ್ದರು.