ಕಾರವಾರ: ಪ್ರತಿಯೊಬ್ಬ ವ್ಯಕ್ತಿಯೂ ಗೌರವ ಮತ್ತು ಸಂತೋಷದಿಂದ ಬದುಕಲು ಇರುವ ಹಕ್ಕುಗಳು ಮಾನವ ಹಕ್ಕುಗಳಾಗಿದ್ದು, ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಯೂ ಇವುಗಳನ್ನು ರಕ್ಷಿಸುವ ಸಂರಕ್ಷಣಾಧಿಕಾರಿಗಳಿದ್ದು, ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್ ಹೇಳಿದರು.

ಅವರು ಬುಧವಾರ ಜಿಪಂ ಸಭಾಂಗಣದಲ್ಲಿ, ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಪ್ರಕರಣಗಳ ವಿಚಾರಣೆ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದರು. ಸರ್ಕಾರ ಜಾರಿಗೆ ತರುವ ಜನೋಪಯೋಗಿ ಯೋಜನೆಗಳು ಮತ್ತು ಸರ್ಕಾರಿ ಸೇವೆಗಳನ್ನು ಅಧಿಕಾರಿಗಳು ಅನಗತ್ಯ ವಿಳಂಬಕ್ಕೆ ಆಸ್ಪದ ನೀಡದೇ ಸಾರ್ವಜನಿಕರಿಗೆ ಒದಗಿಸಬೇಕು, ಯಾವುದೇ ಒತ್ತಡದಲ್ಲಿದ್ದರೂ ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ತಾಳ್ಮೆ ಮತ್ತು ಸೌಜನ್ಯದೊಂದಿಗೆ ವರ್ತಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ನೆರವು ಒದಗಿಸಬೇಕು ಎಂದರು.

ರಾಜ್ಯ ಮಾನವ ಹಕ್ಕು ಆಯೋಗವು ಬೆಂಗಳೂರಿನಲ್ಲಿ ಮಾತ್ರ ಕಚೇರಿಯನ್ನು ಹೊಂದಿದ್ದು, ಆಯೋಗದ ಹೆಸರನ್ನೇ ಬಳಸಿಕೊಂಡು ಕೆಲವು ಸಂಘ-ಸಂಸ್ಥೆಗಳು ವಿವಿಧ ಕಚೇರಿಗೆ ಭೇಟಿ ನೀಡುತ್ತಿರುವುದು ಆಯೋಗದ ಗಮನಕ್ಕೆ ಬಂದಿದ್ದು, ಅಧಿಕಾರಿಗಳು ಅಂತಹ ಸಂಸ್ಥೆಗಳ ಕುರಿತು ಪೊಲೀಸ್ ಇಲಾಖೆಗೆ ಮತ್ತು ಆಯೋಗಕ್ಕೆ ದೂರು ಸಲ್ಲಿಸುವಂತೆ ಅವರು ತಿಳಿಸಿದರು.

ಮಾನವ ಹಕ್ಕು ಉಲ್ಲಂಘನೆ ಕುರಿತಂತೆ ಆಯೋಗದಲ್ಲಿ ಪ್ರತಿ ತಿಂಗಳು ಸುಮಾರು 500 ದೂರುಗಳು ಸ್ವೀಕರವಾಗುತ್ತಿದ್ದು, ದೂರುಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವ ಸಲುವಾಗಿ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದ 29 ಜಿಲ್ಲೆಗಳಲ್ಲಿ ಭೇಟಿ ನೀಡಿದ್ದು, ಆಯೋಗದಲ್ಲಿ ಈ ಹಿಂದೆ ದಾಖಲಾಗಿದ್ದ 8000 ಪ್ರಕರಣಗಳಲ್ಲಿ ಪ್ರಸ್ತುತ 3000 ಇತ್ಯರ್ಥಪಡಿಸಲು ಬಾಕಿ ಇದೆ ಎಂದರು.

ಜಿಲ್ಲೆಗೆ ಸಂಬಂಧಿಸಿದಂತೆ ಆಯೋಗದಲ್ಲಿ ಒಟ್ಟು 30 ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು, ಇಂದು ನಡೆದ ವಿಚಾರಣೆಯಲ್ಲಿ ಎಲ್ಲ ಪ್ರಕರಣಗಳ ಸಂಪೂರ್ಣ ವಿಚಾರಣೆ ನಡೆಸಲಾಗಿದೆ. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ಸ್ಥಳಾವಕಾಶದ ಕೊರತೆಯಿದ್ದು, ಹೊಸದಾಗಿ ನಿರ್ಮಾಣವಾಗುತ್ತಿರುವ ಪಕ್ಕದ ಕಟ್ಟಡಕ್ಕೆ ಅಗತ್ಯ ಸಂಖ್ಯೆಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಂತೆ, ಕ್ರಿಮ್‌ನಲ್ಲಿ ರೇಡಿಯಾಲಜಿಸ್ಟ್ ಹುದ್ದೆಯನ್ನು ಭರ್ತಿ ಮಾಡುವ ಬಗ್ಗೆ, ಜಿಲ್ಲಾ ಕಾರಾಗೃಹವನ್ನು ಶೀಘ್ರದಲ್ಲಿ ನವೀಕರಣಗೊಳಿಸುವ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ ಎಂದರು.


ಆಯೋಗದ ನ್ಯಾಯಾಂಗ ಸದಸ್ಯ ಎಸ್.ಕೆ. ವಂಟಿಗೋಡಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಜೀವನ ನಿರ್ವಹಣೆಗೆ ಸಮಾನ ಅವಕಾಶಗಳು ದೊರೆಯಬೇಕು ಎನ್ನುವುದು ಆಯೋಗದ ಉದ್ದೇಶವಾಗಿದೆ ಎಂದರು.

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಇದ್ದರು.