ಸಾರಾಂಶ
ಸಂವಿಧಾನ ರಕ್ಷಣೆ ಯುವ ಜನಾಂಗದ ಹೊಣೆ ವಿವಿಧತೆಯಲ್ಲಿ ಏಕತೆಯುಳ್ಳ ರಾಷ್ಟ್ರವಾಗಿರುವ ಭಾರತ ವಿಶ್ವಕ್ಕೆ ಮಾದರಿಯಾಗಿದೆ ಎಂದು ಡಾ.ಎಂ.ಬಿ. ಶ್ರೀಧರಮೂರ್ತಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಸಂವಿಧಾನ ರಕ್ಷಣೆ ಯುವ ಜನಾಂಗದ ಹೊಣೆ ವಿವಿಧತೆಯಲ್ಲಿ ಏಕತೆಯುಳ್ಳ ರಾಷ್ಟ್ರವಾಗಿರುವ ಭಾರತ ವಿಶ್ವಕ್ಕೆ ಮಾದರಿಯಾಗಿದೆ ಎಂದು ಡಾ.ಎಂ.ಬಿ. ಶ್ರೀಧರಮೂರ್ತಿ ಅಭಿಪ್ರಾಯಪಟ್ಟರು.ಪಟ್ಟಣದ ಮಧುಗಿರಿ ವಿದ್ಯಾ ಸಂಸ್ಥೆಯಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ದೇಶದ ಸಂವಿಧಾನ ವಿಶ್ವದಲ್ಲಿಯೇ ಅತ್ಯಂತ ಬೃಹತ್ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಹೊಂದಿದೆ. ಆದರೆ ಇಂದಿನ ಜನರಿಗೆ ಪ್ರಜಾಪ್ರಭುತ್ವ ಮತ್ತು ಗಣತಂತ್ರ ವ್ಯವಸ್ಥೆಯ ಮೌಲ್ಯದ ಅರಿವಿನ ಕೊರತೆ ಇದೆ ಎಂದರು.
ಟಿವಿವಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ವೈ. ಹೊಸಮನಿ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿ ಮಾತನಾಡಿ, ಸಂವಿಧಾನದ ಮಹತ್ವವನ್ನು ತಿಳಿಸಿದರು.ಉಪನ್ಯಾಸಕ ರಂಗಸ್ವಾಮಿ ಆಶಯ ನುಡಿಗಳನ್ನಾಡಿ, ಬ್ರಿಟಿಷರಿಂದ ಸ್ವತಂತ್ರ ಪಡೆದ ನಂತರ ಭವ್ಯ ಭಾರತಕ್ಕೆ ಅಗತ್ಯವಾದ ಸಂವಿಧಾನ ರಚಿಸಿಕೊಟ್ಟ ಹಿರಿಮೆ ಅಪಾರ ಜ್ಞಾನ ಪಡೆದಿದ್ದ ವಿಶ್ವಜ್ಞಾನಿ ಎಂದೇ ಮಾನ್ಯತೆ ಪಡೆದಿರುವ ಅಂಬೇಡ್ಕರ್ ಅವರ ವಿಚಾರಗಳನ್ನು ಸವಿವರವಾಗಿ ತಿಳಿಸಿ ಕೊಟ್ಟರು.
ಮುಖ್ಯ ಅತಿಥಿ ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ಹಲವಾರು ಧರ್ಮ ಜಾತಿ, ಭಾಷೆ ಸಂಸ್ಕೃತಿ ಉಳ್ಳ ದೇಶದ ಸರ್ವತೋಮುಖ ಅಭಿವೃದ್ಧಿಗೆ ಅನುಗುಣವಾಗಿ ಸಂವಿಧಾನ ರಚಿಸಿ, ಮೂಲಭೂತ ಹಕ್ಕು, ಸ್ವಾತ್ಯಂತ್ರ ಮತ್ತು ಕರ್ತವ್ಯವನ್ನು ಎಲ್ಲರೂ ಸಮಾನತೆಯಿಂದ ಅನುಭವಿಸುವಂತೆ ನೋಡಿಕೊಳ್ಳಲಾಗಿದೆ ಎಂದರು.ನಿವೃತ್ತ ಪ್ರಾಂಶುಪಾಲ ಡಾ.ಎಲ್. ಮಣಿಗಯ್ಯ, ಮಧುಗಿರಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಆರ್.ಸಿ.ವಿಜಯ್‌ಕುಮಾರ್ ಜೈನ್ ಮಾತನಾಡಿದರು.
ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಸಹಾಯ ನಿರ್ದೇಶಕ ವಿಶ್ವಪ್ರಸಾದ್, ಎಲ್ಲ ಕಾಲೇಜು ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.