ಚಳ್ಳಕೆರೆ ನಗರದ ಎಚ್.ಪಿ.ಪಿ‌.ಸಿ ಕಾಲೇಜಿನಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಟಿ. ರಘುಮೂರ್ತಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಾವು ಜೀವಿಸುವ ಸುತ್ತಮುತ್ತಲ ಪರಿಸರವನ್ನು ಕಾಪಾಡಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ. ಇದು ನಮ್ಮ ಆದ್ಯ ಕರ್ತವ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದ ಎಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಾಗತಿಕ ತಾಪಮಾನ ಏರುಗತಿಯಲ್ಲಿ ಹೆಚ್ಚುತ್ತಿರುವ ಅಪಾಯದ ಸಂದರ್ಭದಲ್ಲಿ ನಾವಿದ್ದೇವೆ. ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸಬೇಕಿರುವುದರಿಂದ ಪ್ರತಿಯೊಬ್ಬರೂ ಇದೊಂದು ನಮ್ಮ ಮನೆಯ ಕೆಲಸ ಎಂಬಂತೆ ಗಿಡ ಬೆಳೆಸುವ ಸಂಕಲ್ಪ ಮಾಡಬೇಕು ಎಂದರು.

ಶಾಲಾ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಜಾಗೃತೆ ಮೂಡಿಸುವ ಕಡೆಗೆ ಶಿಕ್ಷಕ ಸಮೂಹ ಗಮನಹರಿಸಬೇಕು. ಈಗಿನಿಂದಲೇ ಗಿಡ ಬೆಳೆಸುವ ಮನೋಧೋರಣೆ ಬೆಳೆಸಿಕೊಂಡಾಗ ಮುಂದಿನ ಪೀಳಿಗೆಗೆ ಸಹಕಾರಿ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ದಿನಾಚರಣೆಯನ್ನು ಪ್ರತೀ ದಿನವೂ ಆಚರಿಸಬೇಕು. ನಮ್ಮ ಮನೆಯ ಮಕ್ಕಳಂತೆ ನಾವು ಗಿಡ ಮರಗಳನ್ನು ಪೊರೆಯಬೇಕಿದೆ. ಆಗ ಮಾತ್ರ ನಾವು ಪರಿಸರವನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಿಬಹುದು ಎಂದರು.

ಕೊರೋನಾ ಸಂದರ್ಭದಲ್ಲಿ ಮನುಷ್ಯ ಉತ್ತಮ ಗಾಳಿ, ಆಹಾರ, ಸ್ವಚ್ಛತಾ ಕ್ರಮಗಳನ್ನು ಹೇಗೆಲ್ಲಾ ಪಾಲಿಸುತ್ತಿದ್ದ ಎಂಬುದನ್ನು ನಮ್ಮ ತಲೆಮಾರು ನೋಡಿಬಿಟ್ಟಿದೆ. ಅಂತಹ ದುರುಳ ದಿನಗಳನ್ನು ಕಣ್ಣಾರೆ ಕಂಡಿರುವ ನಾವುಗಳು ಪರಿಸರವನ್ನು ಕಾಪಾಡುವ ಕಡೆಗೆ ಹೆಚ್ಚು ಕೆಲಸ ಮಾಡಬೇಕಿದೆ ಎಂದು ವಿವರಿಸಿದರು.

ನಗರಸಭಾ ಆಯುಕ್ತೆ ಡಾ.ನಾಗವೇಣಿ ಮಾತನಾಡಿ, ನಗರದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಲ ಪರಿಸರವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕಿದೆ. ನಗರಸಭೆ ಪರಿಸರ ಜಾಗೃತಿ ಸೇರಿದಂತೆ ಅನೇಕ ಜಾಗೃತಿ ಕ್ರಮಗಳನ್ನು ಕೈಗೊಂಡಿದೆ. ಕಸವನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಸಂಕಲ್ಪ ಮಾಡಬೇಕು. ಹಸಿ ಒಣ ಕಸವನ್ನು ಬೇರ್ಪಡಿಸಿ ನಗರಸಭಾ ವಾಹನಗಳಿಗೆ ಹಾಕಬೇಕು. ಪರಿಸರ ಉತ್ತಮವಾಗಿಟ್ಟುಕೊಂಡರೆ ಯಾವುದೇ ರೋಗ ರುಜಿನಗಳು ಬರುವುದಿಲ್ಲ. ನಾವು ಬರೀ ಬಾಯಿ ಮಾತಲ್ಲಿ ಪರಿಸರದ ಬಗ್ಗೆ ಮಾತನಾಡಬಾರದು. ಇದು ಎಲ್ಲರ ಕರ್ತವ್ಯ ಎಂದು ತಿಳಿದು ಕಾರ್ಯಪ್ರವೃತ್ತರಾಗಬೇಕು ಎಂದು ನುಡಿದರು.

ಪ್ರಾಂಶುಪಾಲ ಪ್ರೊ.ಎಂ.ಕೆ.ದೇವಪ್ಪ ಮಾತನಾಡಿ, ಕಾಲೇಜು ಕ್ಯಾಂಪಸ್ ಇದೀಗ ವಿಶ್ವ ವಿದ್ಯಾಲಯದ ಮಟ್ಟಕ್ಕೆ ಹೋಲುವಂತಹ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಕಾಲೇಜು ಆವರಣಕ್ಕೆ ಬಂದರೆ ಎಂಥದ್ದೋ ಅನುಭವವಾಗುತ್ತದೆ ಎಂದು ಬಣ್ಣಿಸಿದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಅಶೋಕ್, ಶ್ರೀಹರ್ಷ, ದರ್ಶನ್ ಇದ್ದರು.