ಕನ್ನಡಪ್ರಭ ವಾರ್ತೆ ಸೊರಬ
ಮನುಷ್ಯ ನಿಸರ್ಗದ ಕೂಸು. ನಿಸರ್ಗ ಮುನಿಸಿಕೊಂಡರೆ ಹೆತ್ತ ತಾಯಿ ಮುನಿಸಿಕೊಂಡಂತೆ. ಹಾಲುಣಿಸುವ ತಾಯಿ ವಿಷವುಣಿಸಿದರೆ ಬದುಕಲು ಸಾಧ್ಯವೇ. ಆದ್ದರಿಂದ ಪರಿಸರವನ್ನು ರಕ್ಷಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಸೊರಬ ಕಾನುಕೇರಿಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಇತಿಹಾಸ ಪ್ರಸಿದ್ಧ ಬಂಕಸಾಣದ ವರದಾ ಹಾಗೂ ದಂಡಾವತಿ ನದಿ ಸಂಗಮ ಕ್ಷೇತ್ರದ ತೀರದಲ್ಲಿ ಶ್ರೀ ಸಮಾಧಾನ ಹಿರೇಮಠ ಹಾಗೂ ಶ್ರೀ ಸದ್ಗುರು ಸೇವಾ ಟ್ರಸ್ಟ್ ಜಡೆ ವತಿಯಿಂದ ಆಯೋಜಿಸಿದ್ದ ವರದಾರತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವರದೆಗೆ ಆರತಿಯ ಅಗತ್ಯವಿಲ್ಲ. ಆರತಿ ಮಾಡಿದರೆ ವರದೆಗೆ ಸಂತೋಷ ಆಗುವುದಿಲ್ಲ. ಆರತಿ ಮಾಡದಿದ್ದರೆ ವರದೆಗೆ ದುಃಖ ಆಗುವುದಿಲ್ಲ. ಆದರೆ ವರದೆಯನ್ನು ಕಲುಷಿತಗೊಳಿಸಿದರೆ ವರದೆಗೆ ದುಃಖವಾಗುತ್ತದೆ. ನದಿಗಳನ್ನು ನಾಶಗೊಳಿಸಿದರೆ ಇಡೀ ಸಂಸ್ಕೃತಿಯನ್ನೇ ನಾಶಪಡಿಸಿದಂತೆ. ಜೀವ ಸಂಕುಲದ ಉಗಮ ಸ್ಥಾನವೇ ನದಿ ತೀರವಾಗಿದೆ ಎಂದರು.ಮನುಷ್ಯ ಇಂದು ಏನೆಲ್ಲಾ ಸಾಧನೆ ಮಾಡಿದ್ದಾನೆ. ಮಂಗಳನ ಅಂಗಳದಲ್ಲಿ ಮನೆ ಕಟ್ಟುವ ಚಿಂತನೆ ಮಾಡಿದ್ದಾನೆ. ಆದರೆ ವಿಜ್ಞಾನಿಗಳಿಗೆ ಒಂದು ಗ್ರಾಮ್ ಮಣ್ಣು ಅಥವಾ ಒಂದು ಹನಿ ನೀರು ತಯಾರಿಸಲು ಆಗುತ್ತಿಲ್ಲ. ಇದ್ದ ಬಹುಸುಂದರ ಜಗತ್ತನ್ನು ಬಿಟ್ಟು ಅನ್ಯ ಗ್ರಹದತ್ತ ಮುಖ ಮಾಡಿರುವುದು ಮನುಷ್ಯನ ಮೂರ್ಖತನಕ್ಕೆ ಸಾಕ್ಷಿ ಎನ್ನಬಹುದು.
ಕೊಟ್ಟ ಕುದುರೆಯ ಏರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಎನ್ನುವ ಪ್ರಭುದೇವರ ಮಾತಿನಂತೆ ಇದ್ದ ಬಹುಮಂಡಲವನ್ನು ಪ್ಲಾಸ್ಟಿಕ್‌ಮಯ ಮಾಡಿ ವಾತಾವರಣವನ್ನು ಕಲುಷಿತಗೊಳಿಸಿ ನಮಗೆ ಅದು ಸರಿಯಿಲ್ಲ ಇದು ಸರಿಯಿಲ್ಲ ಎಂದರೆ ಅದಕ್ಕೆ ಕಾರಣರು ಯಾರು ಎಂದು ಆಲೋಚಿಸಬೇಕು. ನೀರು ನೆಲವನ್ನು ರಾಸಾಯನಿಕಗಳಿಂದ ರಕ್ಷಿಸಿಕೊಳ್ಳಬೇಕು. ಇದೇ ನೀವು ನಿಮ್ಮ ಮಕ್ಕಳ ಹುಟ್ಟುಹಬ್ಬಕ್ಕೆ ಕೊಡುವ ದಿವ್ಯ ಹಾಗೂ ಅಮೂಲ್ಯ ಕಾಣಿಕೆಯಾಗಲಿದೆ ಎಂದರು.
ವರದಾರತಿಯ ದಿವ್ಯ ಸಾನ್ನಿಧ್ಯವನ್ನು ಗೊಗ್ಗೆಹಳ್ಳಿ ಪಂಚಮಠ ಸಂಸ್ಥಾನದ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಸಮ್ಮುಖವನ್ನು ಜಡೆ ಸಂಸ್ಥಾನ ಮಠದ ಕೆಂಪಿನ ಸಿದ್ಧವೃಷಭೇಂದ್ರ ಮಹಾಸ್ವಾಮಿಗಳು, ಡಾ. ಗುರುಬಸವ ಮಹಾಸ್ವಾಮಿಗಳು, ಲಕ್ಕವಳ್ಳಿ ಜೈನ ಮಠದ ಸ್ವಸ್ತಿ ವೃಷಭಸೇನ ಭಟ್ಟಾರಕ ಮಹಾಸ್ವಾಮಿಗಳು, ಹಿರೇಮಾಗಡಿಯ ಸ್ವಾದಿ ಚನ್ನಬಸವ ಮಹಾಸ್ವಾಮಿಗಳು ವಹಿಸಿದ್ದರು.
ಪೂಜಾ ಕೈಂಕರ್ಯಗಳನ್ನು ತಾಳಗುಪ್ಪ ಅರಮನಿ ಮಠದ ವೇ. ಸಿದ್ಧಲಿಂಗ ಶಾಸ್ತ್ರೀ, ವೇ. ಪಂಚಾಕ್ಷರಿ ಶಾಸ್ತ್ರೀ ಹಾಗೂ ವೇ. ಶಿವಕುಮಾರ ಶಾಸ್ತ್ರೀ ಮತ್ತು ಸಂಗಡಿಗರು ವಹಿಸಿದ್ದರು. ದುಗ್ಲಿಯ ಮಾಹೇಶ್ವರಿ ಭಜನಾ ಸಂಘದಿಂದ ಭಜನೆ ನೆರವೇರಿತು. ಬಂಕಸಾಣ, ಕಚವಿ, ಲಕ್ಕವಳ್ಳಿ, ಹೊಸಕೊಪ್ಪ, ಜಡೆ, ಆನವಟ್ಟಿ, ತಲಗಡ್ಡೆ ಗ್ರಾಮಗಳ ಸಾವಿರಾರು ಸದ್ಭಕ್ತರು ವರದಾರತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾದರು.