ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ವನ್ಯ ಸಂಪತ್ತಿಗೆ ತೊಂದರೆಯಾಗುವಂತೆ ಗಣಿಗಾರಿಕೆ ಸೇರಿದಂತೆ ಇತರೆ ಚಟುವಟಿಕೆಗಳು ನಡೆಯುತ್ತಿರುವುದರಿಂದ ಮನುಷ್ಯ ಮತ್ತು ಪ್ರಾಣಿ ಸಂಘರ್ಷ ಹೆಚ್ಚುತ್ತಿದೆ. ಇದನ್ನ ತಡೆಯುವ ನಿಟ್ಟಿನಲ್ಲಿ ವನ್ಯಸಂಪತ್ತು ಸಂರಕ್ಷಣೆಯೇ ಸರ್ಕಾರಗಳ ಮೊದಲ ಆದ್ಯತೆಯಾಗಬೇಕಿದೆ. ಜನ ಸಾಮಾನ್ಯರು ಕೂಡ ಸ್ವಯಂ ಪ್ರೇರಣೆಯಿಂದ ವನ್ಯ ಸಂರಕ್ಷಣೆಗೆ ಮುಂದಾಗುವ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ವನ್ಯಜೀವಿ ತಜ್ಞ ಸೇನಾನಿ ಹೇಳಿದರು.ನಗರದ ಕುಮಾರಕೃಪಾ ರಸ್ತೆಯ ಚಿತ್ರಕಲಾ ಪರಿಷತ್‌ನಲ್ಲಿ ಗುರುವಾರ ಪತ್ರಕರ್ತ ಸಿದ್ದು ಪಿನಾಕಿ ರಚಿತ ‘ಪಿನಾಕಿ ದಿ ಫ್ಯಾಂಟಮ್ - ವನ್ಯಜೀವನದ ಅನಾವರಣ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ವನ್ಯ ಸಂಪತ್ತು ಅತ್ಯಮೂಲ್ಯವಾದದ್ದು, ವನ್ಯ ಸಂಪತ್ತಿಗೆ ತೊಂದರೆಯಾಗುವಂತಹ ಯಾವ ಕ್ರಮಗಳಿಗೂ ಮಾನವ ಮುಂದಾಗಬಾರದು. ಸ್ವಲ್ಪಮಟ್ಟಿಗೆ ಸಮಸ್ಯೆ ಎಂದು ಕಂಡು ಬಂದರೂ ಸಹಿಸಿಕೊಳ್ಳದೇ ತಕ್ಷಣವೇ ವನ್ಯ ಜೀವಿಗಳು ಪ್ರತಿಕ್ರಿಯಿಸಲು ಪ್ರಾರಂಭ ಮಾಡುತ್ತವೆ ಎಂದು ಕೆಲ ಉದಾಹರಣೆಗಳ ಸಹಿತ ವಿವರಿಸಿದರು.
ಒಡಿಶಾ ಗಡಿಪ್ರದೇಶದಲ್ಲಿ ಮಿತಿ ಮೀರಿದ ಗಣಿಗಾರಿಕೆಯ ಪರಿಣಾಮ ಒಡಿಶಾ ಅರಣ್ಯ ಪ್ರದೇಶದಲ್ಲಿದ್ದ ಆನೆಗಳು ಛತ್ತೀಸ್‌ಗಢದ ಜನವಸತಿ ಪ್ರದೇಶಕ್ಕೆ ಬಂದು ಶಾಶ್ವತವಾಗಿ ನೆಲಸಲು ಪ್ರಾರಂಭ ಮಾಡಿದ್ದವು. ಗಣಿಗಾರಿಗಾರಿಕೆ ವ್ಯಾಪ್ತಿಯ ಅಸು-ಪಾಸಿನ ಮರಗಿಡಗಳ ಎಲೆಗಳ ಮೇಲಿನ ಸಣ್ಣ ದೂಳಿನ ಕಣಗಳು ಆನೆಗಳ ಶಾಶ್ವತ ವಲಸೆಗೆ ಕಾರಣವಾಯಿತು ಎಂಬುದು ಕನ್ನಡಿಗ ವನ್ಯ ತಜ್ಞ ಅಜಯ್ ದೇಸಾಯಿ ಅವರ ಸಂಶೋಧನೆಯಿಂದ ತಿಳಿದು ಬಂದ ಸಂಗತಿ. ಅವರು ಈ ಸಂಬಂಧ ವರದಿಯನ್ನು ಛತ್ತೀಸ್‌ಗಢ ಸರ್ಕಾರಕ್ಕೂ ನೀಡಿದ್ದರು ಎಂಬುದನ್ನು ತಿಳಿಸಿದರು.ಇಂತಹ ಚಟುವಟಿಕೆಗಳು ವನ್ಯಜೀವಿ ಹಾಗೂ ಮಾನವನ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣೆ ಸರ್ಕಾರಗಳ ಮೊದಲ ಆದ್ಯತೆಯಾಗಬೇಕಿದೆ. ಜನರೂ ಅರಿವು ಮೂಡಿಸಿಕೊಳ್ಳಬೇಕು. ವನ್ಯ ಸಂಪತ್ತು ಕುರಿತಾಗಿ ಗುಣಮಟ್ಟದ ಸಂಶೋಧನೆಯಲ್ಲಿ ಸರ್ಕಾರ ಅಥವಾ ಇತರರು ತೊಡಗಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಮತ್ತೋರ್ವ ವನ್ಯಜೀವಿ ತಜ್ಞ ಕೃಪಾಕರ ಅವರು ಮಾತನಾಡಿ, ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿ ಸಾಕಷ್ಟು ಯೋಜನೆಗಳು ಪೂರ್ವ ಯೋಜಿತವಾಗಿರದ ಕಾರಣ ವೈಫಲ್ಯಗಳನ್ನು ಕಾಣಬಹುದಾಗಿದೆ. ಏಕಾಏಕಿ ಕಾರ್ಯಯೋಜನೆಗಳನ್ನು ಪ್ರಕಟಿಸಿ ಅವುಗಳನ್ನು ವೇಗವಾಗಿ ಜಾರಿ ಮಾಡುವ ಪರಿಣಾಮ ಸಮರ್ಪಕವಾಗಿ ಅನುಷ್ಠಾನಗೊಳ್ಳದಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅಂತಹ ಯಾವುದೇ ಯೋಜನೆಗಳು ಯಶಸ್ವಿಗೊಳ್ಳಬೇಕಾದರೆ, ಅಧಿಕಾರಿ ಹಾಗೂ ನುರಿತ ತಜ್ಞರ ಕಾರ್ಯಕ್ಷಮತೆ ಅಗತ್ಯವಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅರಣ್ಯ ಅಧಿಕಾರಿಗಳಾದ ಲಿಂಗರಾಜು, ಹರ್ಷಭಾನು, ಪತ್ರಕರ್ತ ಕುಮಾರ ರೈತ, ಕೃತಿ ಕರ್ತೃ ಸಿದ್ದು ಪಿನಾಕಿ, ಪುಸ್ತಕ ಪ್ರಕಾಶಕಿ ಎನ್.ಬಿ.ರಾಜೇಶ್ವರಿ ಉಪಸ್ಥಿತರಿದ್ದರು.