ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ದೇಶದ ಪ್ರಜಾಪ್ರಭುತ್ವದ ದೃಷ್ಟಿಯಿಂದ ಸಂವಿಧಾನದ ಮೂಲ ಸಂರಚನೆಯನ್ನು ಕಾಪಾಡುವುದು ಅತಿ ಮುಖ್ಯವಾಗಿದೆ. ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಸಂವಿಧಾನದ 21ನೇ ಪರಿಚ್ಛೇದ ಸಂವಿಧಾನದ ಮೂಲ ಸಂರಚನೆಯ ಪ್ರಧಾನ ಭಾಗವಾಗಿದೆ. ಇದನ್ನು ರದ್ದುಪಡಿಸಿದರೆ, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಇಲ್ಲವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಹೇಳಿದರು.ನಗರದ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರು ರಚಿಸಿರುವ ಆತ್ಮಕಥೆ ಕನ್ನಡದ ‘ಕಳೆದ ಕಾಲ, ನಡೆದ ದೂರ’ ಹಾಗೂ ಇಂಗ್ಲೀಷ್ ಅವತರಣಿಕೆ ‘ಟೈಂಮ್ಸ್ ಸ್ಪೆಂಟ್, ಡಿಸ್ಟೆನ್ಸ್ ಟ್ರಾವೆಲ್ಡ್’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನ್ಯಾಯಮೂರ್ತಿಯಾಗಿ ತಾವು ನೀಡಿದ ಪ್ರತಿ ತೀರ್ಪಿನಲ್ಲಿಯೂ ಸಂವಿಧಾನದ ಮೂಲ ಸಂರಚನೆ ಮತ್ತು ಆಶಯವನ್ನು ಕಾಪಾಡುವುದಕ್ಕೆ ನ್ಯಾ.ಶಿವರಾಜ್ ಪಾಟೀಲ್ ಆದ್ಯತೆ ನೀಡಿದರು. ಅಷ್ಟೇ ಅಲ್ಲ ಸದಾ ಮಾನವೀಯ ಮೌಲ್ಯಗಳನ್ನು ಕಾಯ್ದುಕೊಂಡಿದ್ದಾರೆ. ವಿಷಯ ಗ್ರಹಿಕೆ, ಸಂಯಮ, ವಕೀಲರನ್ನು ನಡೆಸಿಕೊಳ್ಳುವ ರೀತಿ, ತೀರ್ಪಿನಲ್ಲಿನ ಸ್ಪಷ್ಟತೆ, ತ್ವರಿತ ನ್ಯಾಯದಾನದಿಂದ ಅಪಾರ ಗೌರವಕ್ಕೆ ಪಾತ್ರರಾಗಿದ್ದಾರೆ. ನಾನು ವಕೀಲನಾಗಿ ಕಂಡ ಅತ್ಯುತ್ತಮ ನ್ಯಾಯಮೂರ್ತಿಗಳು ಎಂದು ಹೇಳಿದರು.
ನ್ಯಾಯಮೂರ್ತಿ ಶಿವರಾಜ ಪಾಟೀಲ್ ಮಾತನಾಡಿ, ತಾವು ರಾಯಚೂರಿನಿಂದ 35 ಕಿಮೀ ದೂರದ ಹಿಂದುಳಿದ ಮತ್ತು ಕುಗ್ರಾಮವೊಂದರ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದೆ. ಅಲ್ಲಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗುವ ತನಕದ ಪ್ರಯಾಣದ ಎಲ್ಲ ವಿವರಗಳನ್ನ ಪುಸ್ತಕದಲ್ಲಿ ದಾಖಲಿಸಿದ್ದೇನೆ. ಜೀವನದಲ್ಲಿ ಸಂಪಾದಿಸಿದ ಜ್ಞಾನ, ಅನುಭವವನ್ನು ಇಂದಿನ ಪೀಳಿಗೆಯವರೆಗೆ ತಿಳಿಯಪಡಿಸಲು ಹಾಗೂ ಬದುಕಿನಲ್ಲಿ ಸಹಾಯ ಮಾಡಿದ, ಸಹಕರಿಸಿದ ಮತ್ತು ಪ್ರೀತಿ, ವಾತ್ಸಲ್ಯ ತೋರಿದವರನ್ನು ನೆನಪಿಸಿಕೊಳ್ಳಲು ಆತ್ಮಕಥೆ ಬರೆದಿರುವುದಾಗಿ ವಿವರಿಸಿದರು.ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ। ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿವರಾಜ ಪಾಟೀಲ್ ಅವರು ಆತ್ಮಕಥೆ ಬರೆಯುವ ಮೂಲಕ ಯುವಜನರಿಗೆ ತಮ್ಮ ಚಿಂತನೆ, ಅನುಭವ ತಲುಪಿಸುವ ಪ್ರಯತ್ನ ನಡೆಸಿದ್ದಾರೆ. ವೃಥಾ ಆರೋಪ ಮಾಡಿದ್ದರಿಂದ ಮನನೊಂದ ಅವರು ಕೂಡಲೇ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಅದು ಅವರ ಪ್ರಾಮಾಣಿಕತೆ ಮತ್ತು ನೈತಿಕತೆಗೆ ನಿದರ್ಶನ. ರಾಜೀನಾಮೆ ಸಲ್ಲಿಸಲು ಕೆಲವರು ಕುತಂತ್ರ ಮಾಡದಿದ್ದರೆ ಶಿವರಾಜ್ ಪಾಟೀಲ್, ಲೋಕಾಯುಕ್ತರಾಗಿ ಕರ್ನಾಟಕ ಜನತೆಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದರು ಎಂದು ನುಡಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ, ಮುಂದಿನ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್, ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗ್ರಪ್ರಸನ್ನ, ಎಂಜಿಎಸ್ ಕಮಲ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ್ ಹೆಗ್ಡೆ, ವಿ.ಗೋಪಾಲಗೌಡ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ನ್ಯಾ.ಶಿವರಾಜ್ ವಿ.ಪಾಟೀಲ್ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.