ಪ್ರಾಚೀನ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆ

| Published : Jan 10 2024, 01:45 AM IST

ಸಾರಾಂಶ

ಚನ್ನಪಟ್ಟಣ: ಹೊಸತನದ ಧಾವಂತದಲ್ಲಿ ಪ್ರಾಚೀನ ಸ್ಮಾರಕ, ಕಟ್ಟಡ, ವಸ್ತುಗಳು ನಾಶವಾಗಲು ಬಿಡಬಾರದು. ಪ್ರಾಚೀನ ಪರಂಪರೆ ಸಾರುವ ವಸ್ತುಗಳು ಮಾನವನ ವ್ಯಕ್ತಿತ್ವ ವಿಕಸನಕ್ಕೆ ಸಾಕ್ಷಿಯಾಗಿದ್ದು, ಅವು ಮುಂದಿನ ಪೀಳಿಗೆಗೂ ಉಳಿಯಬೇಕು ಎಂದು ಬಾಲಕರ ಸರ್ಕಾರಿ ಪ್ರೌಢಶಾಲೆ ಉಪಪ್ರಾಂಶುಪಾಲರಾದ ಆರ್.ಎನ್.ಗಿರಿಜಾ ತಿಳಿಸಿದರು.

ಚನ್ನಪಟ್ಟಣ: ಹೊಸತನದ ಧಾವಂತದಲ್ಲಿ ಪ್ರಾಚೀನ ಸ್ಮಾರಕ, ಕಟ್ಟಡ, ವಸ್ತುಗಳು ನಾಶವಾಗಲು ಬಿಡಬಾರದು. ಪ್ರಾಚೀನ ಪರಂಪರೆ ಸಾರುವ ವಸ್ತುಗಳು ಮಾನವನ ವ್ಯಕ್ತಿತ್ವ ವಿಕಸನಕ್ಕೆ ಸಾಕ್ಷಿಯಾಗಿದ್ದು, ಅವು ಮುಂದಿನ ಪೀಳಿಗೆಗೂ ಉಳಿಯಬೇಕು ಎಂದು ಬಾಲಕರ ಸರ್ಕಾರಿ ಪ್ರೌಢಶಾಲೆ ಉಪಪ್ರಾಂಶುಪಾಲರಾದ ಆರ್.ಎನ್.ಗಿರಿಜಾ ತಿಳಿಸಿದರು.

ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರಾಚ್ಯಪ್ರಜ್ಞೆ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಇತಿಹಾಸ ಗೊತ್ತಿಲ್ಲದೆ ಭವಿಷ್ಯ ನಿರ್ಮಾಣ ಅಸಾಧ್ಯ. ನಮ್ಮ ಕಣ್ಣೆದುರಿನಲ್ಲೇ ಅನೇಕ ಸ್ಮಾರಕಗಳು ನಾಶವಾಗುತ್ತಿವೆ. ಆದರೆ, ಸಾರ್ವಜನಿಕರಲ್ಲಿ ಜಾಗೃತಿಯಾಗುತ್ತಿಲ್ಲ. ಹಾಗಾಗಿ ಸ್ಮಾರಕ, ಅವಶೇಷಗಳ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು. ಪ್ರಾಚೀನ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಕಾರ್ಯಕ್ರಮದ ನೋಡಲ್ ಅಧಿಕಾರಿ ಯೋಗೇಶ್ ಚಕ್ಕೆರೆ ಮಾತನಾಡಿ, ರಾಜ್ಯದಲ್ಲಿ ಪ್ರಾಚೀನ ಸ್ಮಾರಕಳು, ಶಾಸನಗಳು ಸೇರಿದಂತೆ ಇತಿಹಾಸದ ತಿಳಿಸುವ ಸಮೃದ್ಧ ಪರಂಪರೆಯೇ ಇದೆ. ಇವುಗಳ ಸಂರಕ್ಷಣೆ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿದ್ದಾಗಿನಿಂದಲೇ ಜಾಗೃತಿ ಮೂಡಿಸಲು ಪ್ರತಿವರ್ಷ ಪ್ರಾಚ್ಯ ಪ್ರಜ್ಞಾ ಕಾರ್ಯಕ್ರಮದಡಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಹಳೆಕಾಲದ ವಸ್ತುಗಳನ್ನು ಜೋಪಾನವಾಗಿ ತೆಗೆದಿಟ್ಟುಕೊಳ್ಳಬೇಕು. ಪ್ರಾಚೀನ ಸ್ಮಾರಕ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಸ್ಕೃತಿ ಹಾಗೂ ಪರಂಪರೆ ಸಂಪತ್ತಿನ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ತಗಚಗೆರೆ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಸಂಪನ್ಮೂಲ ಶಿಕ್ಷಕ ಜಯರಾಮ್, ಜೆ.ಬ್ಯಾಡರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಸಂಪನ್ಮೂಲ ಶಿಕ್ಷಕ ಡಾ.ಸೋಮಶೇಖರ್, ಬಾಲಕರ ಸರ್ಕಾರಿ ಪ್ರೌಢಶಾಲೆಯ ಕನ್ನಡ ಅಧ್ಯಾಪಕ ದುಂಡಪ್ಪ ಮುದುಡಗಿ ಮಾತನಾಡಿದರು.

ಪ್ರಾಚ್ಯಪ್ರಜ್ಞೆ ಸ್ಪರ್ಧೆಯ ಅಂಗವಾಗಿ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಚಿತ್ರಕಲೆ, ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಚಕ್ಕೆರೆ ಪ್ರೌಢಶಾಲೆಯ ಶಿಕ್ಷಕಿ ಲತಾ, ಆದರ್ಶ ವಿದ್ಯಾಲಯದ ಶಿಕ್ಷಕ ರಮೇಶ್, ಇಗ್ಗಲೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಚಂದ್ರಶೇಖರ್, ಮಂಗಳವಾರಪೇಟೆ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿ ಸೌಮ್ಯ ನಾಯಕ್, ಚಿತ್ರಕಲಾ ಶಿಕ್ಷಕಿ ಯೋಗಿತಾ, ಶಿಕ್ಷಕರಾದ ಸಂತೋಷ್ ಕುಮಾರ್ ಬಾದಾಮಿಕರ್, ಸವಿತಾ ಇತರರಿದ್ದರು.

ಬಾಕ್ಸ್...................

ವಿಜೇತ ವಿದ್ಯಾರ್ಥಿಗಳು

ಭಾಷಣ ಸ್ಪರ್ಧೆಯಲ್ಲಿ ಜೆ.ಬ್ಯಾಡರಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಹರ್ಷಿತ (ಪ್ರಥಮ), ಬೈರಾಪಟ್ಟಣ ಸರ್ಕಾರಿ ಪ್ರೌಢಶಾಲೆ ದಿವ್ಯಶ್ರೀ (ದ್ವಿತೀಯ), ಬೇವೂರುಮಂಡ್ಯ ಯೋಗನರಸಿಂಹ ಸ್ವಾಮಿ ಪ್ರೌಢಶಾಲೆ ಮೋನಿಷಾ (ತೃತೀಯ), ರಸಪ್ರಶ್ನೆ ಸ್ಪರ್ಧೆಯಲ್ಲಿ ಚಕ್ಕೆರೆ ಸರ್ಕಾರಿ ಪ್ರೌಢಶಾಲೆ ನವ್ಯಶ್ರೀ ತಂಡ (ಪ್ರಥಮ), ಬಾಲಕರ ಪ್ರೌಢಶಾಲೆಯ ಹೇಮ ತಂಡ (ದ್ವಿತೀಯ), ಇಗ್ಗಲೂರು ಸರ್ಕಾರಿ ಪ್ರೌಢಶಾಲೆಯ ದಿಲೀಪ್ ತಂಡ (ತೃತೀಯ), ಚಿತ್ರಕಲೆ ಸ್ಪರ್ಧೆಯಲ್ಲಿ ಬಾಲಕಿಯರ ಪ್ರೌಢಶಾಲೆಯ ಅನನ್ಯ(ಪ್ರಥಮ), ಹಾರೋಕೊಪ್ಪ ಸರ್ಕಾರಿ ಪ್ರೌಢಶಾಲೆಯ ಸೋನು(ದ್ವಿತೀಯ), ಬಾಲಕರ ಪ್ರೌಢಶಾಲೆಯ ಪಂಕಜ್(ತೃತೀಯ), ಪ್ರಬಂಧ ಸ್ಪರ್ಧೆಯಲ್ಲಿ ಹಾರೋಕೊಪ್ಪ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಹನೀಷಾ(ಪ್ರಥಮ), ಮಂಗಳವಾರಪೇಟೆ ಸರ್ಕಾರಿ ಪ್ರೌಢಶಾಲೆಯ ಲಾವಣ್ಯ(ದ್ವಿತೀಯ), ಚಕ್ಕೆರೆ ಸರ್ಕಾರಿ ಪ್ರೌಢಶಾಲೆಯ ನೋಕಿತಾ (ತೃತೀಯ) ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು. ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.

ಪೊಟೋ೯ಸಿಪಿಟಿ೩:

ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರಾಚ್ಯಪ್ರಜ್ಞೆ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.