ಸಜ್ಜನರ ಬದಲು ದುರ್ಜನರ ರಕ್ಷಣೆ

| Published : Oct 13 2024, 01:03 AM IST

ಸಾರಾಂಶ

ಚಿಕ್ಕಮಗಳೂರು: ನಾಡಹಬ್ಬ ದಸರಾದ ಉದ್ದೇಶವೇ ಸಜ್ಜನರ ರಕ್ಷಣೆ ದುರ್ಜನರ ಸಂಹಾರ. ಆದರೆ, ದಸರಾ ಸಂದರ್ಭದಲ್ಲಿಯೇ ಕಾಂಗ್ರೆಸ್ ಸರ್ಕಾರ ಕೋಮುಗಲಭೆ ಹುಟ್ಟು ಹಾಕಲು ಯತ್ನಿಸಿದವರ ವಿರುದ್ಧದ ಮೊಕ್ಕದ್ದಮೆಗಳನ್ನು ವಾಪಸ್ಸು ಪಡೆಯುವ ಮೂಲಕ ರಾಷ್ಟ್ರಘಾತುಕ ನಿರ್ಣಯ ಕೈಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮಗಳೂರು: ನಾಡಹಬ್ಬ ದಸರಾದ ಉದ್ದೇಶವೇ ಸಜ್ಜನರ ರಕ್ಷಣೆ ದುರ್ಜನರ ಸಂಹಾರ. ಆದರೆ, ದಸರಾ ಸಂದರ್ಭದಲ್ಲಿಯೇ ಕಾಂಗ್ರೆಸ್ ಸರ್ಕಾರ ಕೋಮುಗಲಭೆ ಹುಟ್ಟು ಹಾಕಲು ಯತ್ನಿಸಿದವರ ವಿರುದ್ಧದ ಮೊಕ್ಕದ್ದಮೆಗಳನ್ನು ವಾಪಸ್ಸು ಪಡೆಯುವ ಮೂಲಕ ರಾಷ್ಟ್ರಘಾತುಕ ನಿರ್ಣಯ ಕೈಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಕ್ಯಾಬಿನೆಟ್‌ನಲ್ಲಿ ತೆಗೆದುಕೊಂಡ ನಿರ್ಣಯದ ಮರು ಪರಿಶೀಲನೆ ನಡೆಸಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಕೋರ್ ಕಮಿಟಿ ಮತ್ತು ರಾಜ್ಯಾಧ್ಯಕ್ಷರ ಜೊತೆಗೆ ಚರ್ಚೆ ಮಾಡಿ ಹುಬ್ಬಳ್ಳಿ ಚಲೋ ಚಳವಳಿಗೆ ಕರೆ ನೀಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಕೋಮು ಗಲಭೆಗೆ ಯಾರು ಕಾರಣಕರ್ತರಾಗಿದ್ದರೋ ಅವರ ವಿರುದ್ಧದ ಮೊಕ್ಕದ್ದಮೆಗಳನ್ನು ಕ್ಯಾಬಿನೆಟ್‌ನಲ್ಲಿ ವಾಪಸ್ ಪಡೆದಿದ್ದಾರೆ. ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಬಂದವರು, ಆಂಜನೇಯಸ್ವಾಮಿ ದೇವಾಲಯದ ಮೇಲೆ ಕಲ್ಲು ತೂರಾಟ ನಡೆಸಿದವರು ಕನ್ನಡಪರ ಹೋರಾಟಗಾರರೇ ಅಥವಾ ರೈತ ಹೋರಾಟಗಾರರೇ ಎಂದು ಪ್ರಶ್ನಿಸಿದರು.

ಕೋಮು ಗಲಭೆಗೆ ಯತ್ನಿಸಿದವರ ವಿರುದ್ಧದ ಪ್ರಕರಣಗಳನ್ನು ವಾಪಸ್ಸು ಪಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ದಸರಾ ಸಂದರ್ಭದಲ್ಲಿಯೇ ದುಷ್ಟರ ರಕ್ಷಣೆಗೆ ನಿಂತಿರುವುದು ವಿಪರ್ಯಾಸವಾಗಿದೆ ಎಂದರು.

ನಾಡ ಹಬ್ಬ ದಸರಾಗೆ ಅದರದ್ದೇಯಾದ ಗೌರವವಿದೆ. ಆದರೆ, ಕಾಂಗ್ರೆಸ್ ಸರ್ಕಾರ ದಸರಾ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಂಡಿದೆ. ಎಲ್ಲಿ ರಾಜಕಾರಣ ಮಾಡಬೇಕು, ಎಲ್ಲಿ ಮಾಡಬಾರದು ಎನ್ನುವ ಕನಿಷ್ಠ ಪರಿಜ್ಞಾನವೂ ಕಾಂಗ್ರೆಸ್ ನಾಯಕರಿಗೆ ಇಲ್ಲವಾಗಿದೆ ಎಂದು ಹರಿಹಾಯ್ದರು.

ನಾಡಹಬ್ಬ ದಸರಾ ಉದ್ಘಾಟನೆ ವೇಳೆ ಚಾಮುಂಡಿ ಬೆಟ್ಟದಲ್ಲಿ ನಾಡ ಸಂಸ್ಕೃತಿ, ಪರಂಪರೆ ಬಗ್ಗೆ ಮಾತನಾಡಲಿಲ್ಲ. ಇದರ ಬದಲು ರಾಜಕಾರಣ ಮಾತನಾಡಲು ವೇದಿಕೆಯನ್ನು ಬಳಸಿಕೊಂಡರು. ನಾಡಹಬ್ಬ ದಸರಾ, ಚಾಮುಂಡೇಶ್ವರಿ ಗುಣಗಾನ, ಮೈಸೂರು ಮಹಾರಾಜರ ಕೊಡುಗೆ ಸ್ಮರಿಸುವ ಕೆಲಸ ಮಾಡಬೇಕಿತ್ತು. ಆದರೆ, ಇದಾವುದನ್ನು ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದಾದ ಬಳಿಕ ಸರ್ಕಾರಿ ದುಡ್ಡಲ್ಲಿ ಜಾಹೀರಾತನ್ನು ನೀಡಿದ್ದಾರೆ. ಆದರೆ, ತಾವು ನೀಡಿರುವ ಜಾಹೀರಾತಿನಂತೆಯೇ ನಡೆದುಕೊಳ್ಳುವಲ್ಲಿ ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ. ದಸರಾ ಸಂದರ್ಭದಲ್ಲಿಯೇ ಸಜ್ಜನರ ರಕ್ಷಣೆ ಬದಲು ದುರ್ಜನರ ರಕ್ಷಣೆಗೆ ಮುಂದಾಗುವ ಮೂಲಕ ತಮ್ಮ ಇಬ್ಬಗೆ ನೀತಿ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಎಫ್‌ಡಿಪಿಐ ಹಾಗೂ ಪಿಎಫ್ಐನ ಎರಡು ಸಾವಿರಕ್ಕೂ ಅಧಿಕ ಜನರ ವಿರುದ್ಧದ ಪ್ರಕರಣ ವಾಪಸ್ ಪಡೆದಿದ್ದರು. ಇದರ ಪರಿಣಾಮವಾಗಿ ರಾಜು ಹತ್ಯೆ, ರುದ್ರೇಶ್ ಹತ್ಯೆ ಸೇರಿದಂತೆ ಸರಣಿ ಕೊಲೆಗಳು ನಡೆದಿದ್ದವು. ಮತ್ತೆ ಕರ್ನಾಟಕದಲ್ಲಿ ಸರಣಿ ಹತ್ಯೆ ಪ್ರಕರಣಗಳನ್ನು ಪುನರ್ ಸ್ಥಾಪಿಸುವ ಉದ್ದೇಶದಿಂದ ದುಷ್ಟರ ಮೇಲಿದ್ದ ಮೊಕ್ಕದ್ದಮೆಗಳನ್ನು ವಾಪಸು ಪಡೆಯಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನನ್ನ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಿರಿ ಎಂದು ಮನವಿ ಮಾಡಿಲ್ಲ: ಇದೆ ವೇಳೆ ಸಿ.ಟಿ.ರವಿ ವಿರುದ್ಧದ ಪ್ರಕರಣವನ್ನು ವಾಪಸ್ ಪಡೆದಿದ್ದೇವೆ ಎಂದು ಹೇಳಿದ್ದಾರೆ. ಬಾಗೇಪಲ್ಲಿಯಲ್ಲಿ ನನ್ನ ವಿರುದ್ಧ ಯಾವುದೇ ಪ್ರಕರಣವು ದಾಖಲಾಗಿರಲಿಲ್ಲ. ಆದರೆ, ಸರ್ಕಾರ ತಪ್ಪು ಮಾಹಿತಿ ನೀಡಿದೆ. ನಾನು ಎಂದು ನನ್ನ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಿರಿ ಎಂದು ಸರ್ಕಾರಕ್ಕೆ ಮನವಿ ಮಾಡಿರಲಿಲ್ಲ. ಕಳೆದ ಲೋಕಸಭಾ ಚುನಾವಣೆ ವೇಳೆ ನನ್ನ ಟ್ವೀಟ್ ಆಧರಿಸಿ ನಾಲ್ಕು ಕೇಸುಗಳನ್ನು ಹಾಕಿದ್ದರು. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗುವಂತ ನಾನೇನು ಟ್ವೀಟ್ ಮಾಡಿರಲಿಲ್ಲ. ಆದರೂ ದೂರು ದಾಖಲು ಮಾಡಲಾಗಿತ್ತು. ಈ ಪ್ರಕರಣಗಳಿಗೆ ನಾನು ಹೈಕೋರ್ಟ್‌ನಿಂದ ಸ್ಟೇ ತಂದಿದ್ದೇನೆ. ಇವುಗಳ ಹೊರತು ನನ್ನ ಮೇಲೆ ಬೇರೆ ಯಾವುದೇ ಪ್ರಕರಣಗಳಿಲ್ಲ. ಆದರೆ, ಸರ್ಕಾರ ನನ್ನ ಬಗ್ಗೆ ತಪ್ಪು ಮಾಹಿತಿ ನೀಡಿದೆ ಎಂದು ದೂರಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೋಲಾರದಲ್ಲಿ ರೈತರ ಮೇಲೆ ಹಿಂದೆ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯುವಂತೆ ಅರ್ಜಿ ಸಲ್ಲಿಸಿದ್ದೆ. ಆದರೆ. ನನ್ನ ಮೇಲಿನ ಪ್ರಕರಣ ಹಿಂಪಡೆಯಿರಿ ಎಂದು ಎಂದೂ ಅರ್ಜಿ ಸಲ್ಲಿಸಿಲ್ಲ. ರೈತರ ವಿರುದ್ಧ ದಾಖಲಾಗಿದ್ದ ಕೇಸು ಹಿಂಪಡೆಯಿರಿ ಎಂದು ಸಲ್ಲಿಸಿದ ಅರ್ಜಿ ಇಂದು ಸರ್ಕಾರದ ಮುಂದಿರಬಹುದು. ಸರ್ಕಾರವೆಂದೂ ರಾಷ್ಟ್ರಘಾತಕ ಶಕ್ತಿಗಳ ಜೊತೆಗೆ ನನ್ನ ಹೆಸರನ್ನು ಜೋಡಿಸಬಾರದು ಎಂದು ಆಗ್ರಹಿಸಿದರು.