ಜಲ, ಸಸ್ಯ ಸಂಪತ್ತು ರಕ್ಷಣೆ ಪಠ್ಯದಲ್ಲಿ ಅಳವಡಿಕೆ ಅಗತ್ಯ: ಎಲ್.ಎಸ್.ನಂಜರಾಜು ಅಭಿಪ್ರಾಯ

| Published : Sep 20 2024, 01:47 AM IST

ಜಲ, ಸಸ್ಯ ಸಂಪತ್ತು ರಕ್ಷಣೆ ಪಠ್ಯದಲ್ಲಿ ಅಳವಡಿಕೆ ಅಗತ್ಯ: ಎಲ್.ಎಸ್.ನಂಜರಾಜು ಅಭಿಪ್ರಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ನಾಲ್ಕು ತಿಂಗಳ ಹಿಂದೆ ಒಂದು ಶತಮಾನದಷ್ಟು ಕಂಡರಿಯದಷ್ಟು ರಣ ಬಿಸಿಲನ್ನು ನಾವು ಅನುಭವಿಸಿದೆವು. ಪ್ರಸ್ತುತ ದಿನಗಳಲ್ಲಿ ಅತ್ಯಧಿತ ತಾಪಮಾನಕ್ಕೆ ನಾವು, ನೀವೆಲ್ಲಾ ಸಾಕ್ಷಿಯಾಗಿದ್ದೇವೆ. ಇದರ ಕಾರಣವನ್ನು ಹುಡುಕಿದಾಗ ಭೂಮಿ ಯಾಕಿಷ್ಟು ಸುಡುತ್ತಿದೆ ಎಂದು ಆತಂಕವಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭೂಮಿ ಕಾಪಾಡಲು, ಜಲ ಮತ್ತು ಸಸ್ಯ ಸಂಪತನ್ನು ರಕ್ಷಿಸಲು ಪ್ರೌಢಶಿಕ್ಷಣದ ಪಠ್ಯದಲ್ಲಿ ವಿಷಯ ಅಳವಡಿಕೆ ತೀರಾ ಅಗತ್ಯ ಎಂದು ವಿಷಯ ತಜ್ಞ ಎಲ್.ಎಸ್.ನಂಜರಾಜು ತಿಳಿಸಿದರು.

ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಶಾಲಾ ವತಿಯಿಂದ ನಡೆದ ವಿಶ್ವ ಓಜೋನ್ ದಿನದ ನಿಮಿತ್ತ ವಿದ್ಯಾರ್ಥಿಗಳ ಮೂಲಕ ಸಸ್ಯ ಸಾಕ್ಷರತಾ ಆಂದೋಲನಾ ಕಾರ್‍ಯಕ್ರಮದಲ್ಲಿ ಮಾತನಾಡಿದರು.

ಸಸ್ಯ ಸಂಕುಲವು ಪ್ರಕೃತಿಯ ನಿಜವಾದ ಸಂಪತ್ತು. ಇದರ ಉಳಿವು ಮತ್ತು ಬೆಳವಣಿಗೆ ಜೊತೆಗೆ ಮನುಕುಲದ ರಕ್ಷಣೆ ಸಾಧ್ಯ. ನೀರು ಮತ್ತು ಸಸ್ಯ ಮಾನವ ಕುಲಕ್ಕೆ ಒದಗಿಬಾರದಿದ್ದರೆ ಮನುಕುಲದ ಅಸ್ತಿತ್ವವೇ ಹೋಗುತಿತ್ತು. ಈ ಸಂಪತ್ತನ್ನು ಮುಂದಿನ ತಲೆಮಾರಿಗೆ ರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ವಿದ್ಯಾರ್ಥಿ ಮೇಲಿದೆ ಎಂದು ಹೇಳಿದರು.

ಸಸ್ಯ ಎನ್ನುವುದು ಸರಳ ಸಾಕ್ಷರತೆ. ಪೂರ್ವಿಕರು ನೆಡುತೋಪು ಮತ್ತು ಗುಂಡು ತೋಪುಗಳಲ್ಲಿ ಸಸ್ಯ ಸಂರಕ್ಷಿಸಿ ಅತಿ ಹೆಚ್ಚು ಆಮ್ಲಜನಕವನ್ನು ಪಡೆದುಕೊಳ್ಳುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಆಮ್ಲಜನಕವನ್ನು ದುಡ್ಡುಕೊಟ್ಟು ಪಡೆಯುವಂತಹುದ್ದನ್ನು ಬೇರೆ ಬೇರೆ ರಾಷ್ಟ್ರಗಳಲ್ಲಿ ಕಾಣಬಹುದು.

ಕಳೆದ ನಾಲ್ಕು ತಿಂಗಳ ಹಿಂದೆ ಒಂದು ಶತಮಾನದಷ್ಟು ಕಂಡರಿಯದಷ್ಟು ರಣ ಬಿಸಿಲನ್ನು ನಾವು ಅನುಭವಿಸಿದೆವು. ಪ್ರಸ್ತುತ ದಿನಗಳಲ್ಲಿ ಅತ್ಯಧಿತ ತಾಪಮಾನಕ್ಕೆ ನಾವು, ನೀವೆಲ್ಲಾ ಸಾಕ್ಷಿಯಾಗಿದ್ದೇವೆ. ಇದರ ಕಾರಣವನ್ನು ಹುಡುಕಿದಾಗ ಭೂಮಿ ಯಾಕಿಷ್ಟು ಸುಡುತ್ತಿದೆ ಎಂದು ಆತಂಕವಾಗುತ್ತದೆ ಎಂದು ಹೇಳಿದರು.

ಪರಿಸರ ನಾಶದ ಮೂಲಕ ವಾತಾವರಣವನ್ನು ಅನೇಕ ಬಗೆಯಲ್ಲಿ ಕಲುಷಿತಗೊಳಿಸುತ್ತಿರುವ ನಾವು ಭೂಮಿ ಸುತ್ತಲೂ ರಕ್ಷಾ ಕವಚದಂತಿರುವ ಓಜೋನ್ ಪದರವನ್ನು ಶಿಥಿಲಗೊಳಿಸುತ್ತಿದ್ದೇವೆ. ಇವುಗಳೆಲ್ಲದರ ಪರಿಣಾಮವೇ ತಾಪಮಾನದ ಏರಿಕೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಮನುಷ್ಯ ತನ್ನ ಉಳಿವಿಗಾಗಿ ಗಿಡ- ಮರಗಳನ್ನು ನೆಟ್ಟು ಬೆಳೆಸದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ತಾಪಮಾನ ತಲುಪುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ ಎಂದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಭವ್ಯ ಅವರು ಸಸಿಗಳನ್ನು ವಿತರಿಸಿದರು. ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ವಿದ್ಯಾರ್ಥಿಗಳ ಮೂಲಕ ಸಸ್ಯಸಾಕ್ಷರತಾ ಕಾರ್‍ಯಕ್ರಮಗಳ ಮಾಹಿತಿ ನೀಡಿ, ಪ್ರತಿ ವರ್ಷ ಸಸಿಗಳನ್ನು ನೆಟ್ಟು ಬೆಳೆಸಿದ ವಿದ್ಯಾರ್ಥಿಗಳಿಗೆ 6 ಸಾವಿರ ನಗದನ್ನು ನೀಡಿ ಪುರಸ್ಕರಿಸಿದರು.

ಸಮಾರಂಭದಲ್ಲಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎಚ್.ಎಂ.ದೇವರಾಜು ಅಧ್ಯಕ್ಷತೆ ವಹಿಸಿದ್ದರು. ಚಿತ್ರಕೂಟದ ಮುಖ್ಯಸ್ಥ ಅರವಿಂದ ಪ್ರಭು, ಪರಿಚಯ ಪ್ರಕಾಶನದ ಮುಖ್ಯಸ್ಥ ಶಿವಕುಮಾರ್ ಆರಾಧ್ಯ, ಪರಿಸರ ಸಂಸ್ಥೆ ಕಾರ್‍ಯದರ್ಶಿ ಕೆ.ಪಿ. ಅರುಣಕುಮಾರಿ ಇತರರು ಹಾಜರಿದ್ದರು.

ವಿಶ್ವ ಓಜೋನ್ ದಿನದ ನಿಮಿತ್ತ ಚಿತ್ರಕಲಾ ಸ್ಪರ್ಧೆ, ವಿಜೇತ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಣೆ, ಸಸಿ ವಿತರಣೆ ಮತ್ತು ಸಸಿಗಳನ್ನು ನೆಡಲಾಯಿತು.