ಪ್ರಕೃತಿದತ್ತ ನೀರಿನ ಶುದ್ಧತೆ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಶಾಸಕ ಜಿ ಎಚ್. ಶ್ರೀನಿವಾಸ್

| Published : Dec 25 2023, 01:32 AM IST

ಪ್ರಕೃತಿದತ್ತ ನೀರಿನ ಶುದ್ಧತೆ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಶಾಸಕ ಜಿ ಎಚ್. ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕೃತಿದತ್ತವಾದ ನೀರನ್ನು ಶುಚಿಯಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 3.78 ಲಕ್ಷ ವೆಚ್ಚದಲ್ಲಿ ಕೆರೆ ಹೂಳೆತ್ತಿಸಿ ಸುಂದರವಾಗಿ ರೂಪಿಸಿದ್ದಾರೆ. ಗ್ರಾಮಸ್ಥರು ಕೆರೆಯನ್ನು ಶುಚಿಯಾಗಿಡಬೇಕು ಎಂದು ನಂದಿ ಗ್ರಾಮದಲ್ಲಿ ಪುನಶ್ಚೇತನಗೊಂಡ 564 ನೇ ನಮ್ಮೂರು ನಮ್ಮ ಕೆರೆ ನಾಮ ಫಲಕ ಅನಾವರಣ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ತರೀಕೆರೆ

ಪ್ರಕೃತಿದತ್ತವಾದ ನೀರನ್ನು ಶುಚಿಯಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ತರೀಕೆರೆ, ಗ್ರಾಮ ಪಂಚಾಯತ್ ಸುಣ್ಣದಹಳ್ಳಿ ಮತ್ತು ಊರ ಮುಂದಿನ ಕೆರೆ (ಗೋಕಟ್ಟೆ )ಕೆರೆ ಅಭಿವೃದ್ಧಿ ಸಮಿತಿ ನಂದಿ ಇವರ ಸಹಕಾರ ದೊಂದಿಗೆ ಸಮೀಪದ ನಂದಿ ಗ್ರಾಮದಲ್ಲಿ ಪುನಶ್ಚೇತನಗೊಂಡ 564 ನೇ ನಮ್ಮೂರು ನಮ್ಮ ಕೆರೆ ನಾಮ ಫಲಕ ಅನಾವರಣ, ಕೆರೆ ಬಾಗಿನ ಅರ್ಪಣೆ, ಕೆರೆಯಂಗಳದಲ್ಲಿ ಗಿಡ ನಾಟಿ, ಕೆರೆ ಸಮಿತಿಯವರಿಗೆ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 3.78 ಲಕ್ಷ ವೆಚ್ಚದಲ್ಲಿ ಕೆರೆ ಹೂಳೆತ್ತಿಸಿ ಸುಂದರವಾಗಿ ರೂಪಿಸಿದ್ದಾರೆ. ಗ್ರಾಮಸ್ಥರು ಕೆರೆಯನ್ನು ಶುಚಿಯಾಗಿಡಬೇಕು. ಕೆರೆ ಸುತ್ತ ಮುತ್ತ ಅರಣ್ಯ ಸಸಿ ನೆಟ್ಟಿದ್ದು ಕಾಪಾಡಿಕೊಳ್ಳಬೇಕು. ಗ್ರಾಮಾಭಿವೃದ್ಧಿ ಯೋಜನೆ ಇಂತಹ ಹತ್ತು ಹಲವು ಕಾರ್ಯಕ್ರಮ ನಡೆಸುತ್ತಾ ಸಮಾಜಕ್ಕೆ ಮಾದರಿಯಾಗಿದೆ. ದೇವಸ್ಥಾನಗಳ ಜೀರ್ಣೋದ್ಧಾರ, ಆರೋಗ್ಯ ಕಾರ್ಯಕ್ರಮ, ಸ್ವ ಸಹಾಯ ಸಂಘಗಳನ್ನು ರಚಿಸಿ ಪೂರಕ ಪ್ರಗತಿ ನಿಧಿ ನೀಡಿ ಕುಟುಂಬ ಅಭಿವೃದ್ಧಿ, ಕೃಷಿ ಕಾರ್ಯಕ್ರಮ ನಡೆಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅಭಿನಂದಿಸಿದರು.

ಚಿತ್ರದುರ್ಗ ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಅಭಿಯಂತರ ಹರೀಶ್ ನಾಯ್ಕ್ ಮಾತನಾಡಿ ಪ್ರತಿ ವರ್ಷ ತಾಲೂಕಿಗೆ ಒಂದು ಕೆರೆಯಂತೆ ಇದುವರೆಗೂ ರಾಜ್ಯಾದ್ಯಂತ 643 ಕೆರೆಗಳ ಹೂಳೆತ್ತಿಸಿ, ಪುನಶ್ಚೇತನ ಗೊಳಿಸಲಾಗಿದೆ. ಗ್ರಾಮದ ಕುಡಿಯುವ ನೀರಿನ ಮೂಲ ಕೆರೆ. ಆದರೆ ಇಂದು ಕೆರೆಗಳು ನಶಿಸುತ್ತಿವೆ, ನೀರಿನ ಅಭಾವ ಉಂಟಾಗುತ್ತಿದ್ದು ನೀರು ನಮಗೆಲ್ಲರಿಗೂ ಅತ್ಯಮೂಲ್ಯ ಎಂದು ಹೇಳಿದರು.

ಈಗಾಗಲೇ ಕೆರೆಯನ್ನು ಪುನಶ್ಚೇತನ ಗೊಳಿಸಿದ್ದು, ಒಂದು ಊರಿನಲ್ಲಿ ದೇವಸ್ಥಾನದಷ್ಟೆ ಪ್ರಾಮುಖ್ಯತೆ ಯನ್ನು ಕೆರೆಗೂ ನೀಡಬೇಕು. ಕೆರೆಗಳನ್ನು ಉಳಿಸಿದಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಹಾಗೂ ಅಕ್ಕ ಪಕ್ಕದ ಬಾವಿ ಬೋರ್ವೆಲ್ ಗಳಿಗೆ ಅಂತರ್ಜಲ ಹೆಚ್ಚಿ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ತಾಲೂಕು ಕ್ಷೇತ್ರ ಯೋಜನಾಧಿಕಾರಿ ಕೆ. ಕುಸುಮಾಧರ್‌ ಮಾತನಾಡಿ, ಯೋಜನೆ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಈ ಕೆರೆ ಹೂಳೆತ್ತಿಸಿ ಪುನಶ್ಚೇತನ ಗೊಳಿಸಿ ನೀಡುತಿದ್ದೇವೆ. ಕೆರೆಯನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.

ಪ್ರಕೃತಿದತ್ತವಾದ ನೀರನ್ನು ಮುಂದಿನ ಪೀಳಿಗೆಗೆ ನಾವು ಉಳಿಸಬೇಕು, ತಾಲೂಕಿನಾದ್ಯಂತ ಈಗಾಗಲೇ 6 ಕೆರೆಗಳ ಹೂಳೆತ್ತಿಸಿ ಪುನಶ್ಚೇತನ ಗೊಳಿಸಿದ್ದೇವೆ. ತಾಲೂಕಿನಲ್ಲಿ 2600 ಕ್ಕೂ ಹೆಚ್ಚು ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಕೃಷಿ ಅನುದಾನಗಳು, ಮಹಿಳಾ ಸಬಲೀಕರಣ, ಜ್ಞಾನವಿಕಾಸ ಕಾರ್ಯಕ್ರಮಗಳು, ಶುದ್ಧ ಕುಡಿಯುವ ಘಟಕಗಳು, ಅರೋಗ್ಯ ಭದ್ರತೆ ದೃಷ್ಟಿಯಿಂದ ಸಂಪೂರ್ಣ ಸುರಕ್ಷಾ, ಆರೋಗ್ಯ ರಕ್ಷಾ ಕಾರ್ಯಕ್ರಮ , ಸಂಘದ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ, ನಿರ್ಗತಿಕರಿಗೆ ಮಾಸಾಶನ, ಜನ ಮಂಗಳ ಕಾರ್ಯಕ್ರಮದ ಮೂಲಕ ಅಶಕ್ತರಿಗೆ ವಾಟರ್ ಬೆಡ್, ವ್ಹೀಲ್ ಚೇರ್, ವಾಕರ್ ನೀಡಿಕೆ, ದೇವಸ್ಥಾನಗಳಿಗೆ ಅನುದಾನ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಮೂಲಕ ಅನುದಾನ, ಸದಸ್ಯರಿಗೆ ವಿಮಾ ಯೋಜನೆಗಳು, ಹೀಗೆ ಅನೇಕ ಕಾರ್ಯಕ್ರಮವನ್ನು ತಾಲೂಕಿನಲ್ಲಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಇದರ ಸದುಪಯೋಗ ಸದಸ್ಯರು ಪಡೆಯಬೇಕು ಎಂದರು.

ಸುಣ್ಣದ ಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜಪ್ಪ.ಬಿ. ಮಾತನಾಡಿ ಒಂದು ಗ್ರಾಮದಲ್ಲಿ ಕೆರೆ, ಕುಂಟೆ, ದೇವಸ್ಥಾನಗಳು ಊರಿನ ಆಸ್ತಿ ಅವುಗಳ ರಕ್ಷಣೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಆದ್ಯ ಕರ್ತವ್ಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ಗ್ರಾಮಕ್ಕೆ ಉಪಯುಕ್ತವಾದ ಕೆರೆ ಪುನಶ್ಚೇತನ ಮಾಡಿರುವುದು ಶ್ಲಾಘನೀಯ ಎಂದರು.

ಕೆರೆ ಸಮಿತಿ ಅಧ್ಯಕ್ಷ ಎನ್.ಎಂ. ಮಲ್ಲಪ್ಪ ಮಾತನಾಡಿ ನಮ್ಮೂರಿನ ಕೆರೆ ಹೂಳೆತ್ತಿಸಿ ಕೊಟ್ಟಿರುವುದು ನಮಗೆ ಅತೀವ ಸಂತಸನ್ನು ಉಂಟುಮಾಡಿದೆ. ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ಗೌರವಪೂರ್ವಕ ಅಭಿನಂದನೆ ಎಂದು ಹೇಳಿದರು.

ಗ್ರಾಪಂ ಸದಸ್ಯರಾದ ಹರೀಶ್ ಎನ್. ಸಿ ಮತ್ತು ಮಮತ ಸುರೇಶ್, ಗ್ರಾಮದ ಮುಖಂಡರಾದ ಶಂಕರ ಲಿಂಗಪ್ಪ, ಕೆರೆ ಸಮಿತಿ ಸದಸ್ಯರಾದ ಪ್ರಸನ್ನ, ಬಸವರಾಜಪ್ಪ, ಸೇವಾಪ್ರತಿನಿಧಿ ಲೀಲಾ ಮತ್ತು ಆಶಾ, ಕೃಷಿ ಮೇಲ್ವಿಚಾರಕ ಸಂತೋಷ್, ವಲಯದ ಮೇಲ್ವಿಚಾರಕ ಸತೀಶ್, ಕೆರೆ ಸಮಿತಿ ಸದಸ್ಯರು, ಗ್ರಾಮಸ್ಥರು, ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.24ಕೆಟಿಆರ್.ಕೆ.8ಃ

ತರೀಕೆರೆ ಸಮೀಪದ ನಂದಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮ ಪಂಚಾಯತ್ ಸುಣ್ಣದಹಳ್ಳಿ ಮತ್ತು ಊರ ಮುಂದಿನ ಕೆರೆ (ಗೋಕಟ್ಟೆ )ಕೆರೆ ಅಭಿವೃದ್ಧಿ ಸಮಿತಿ ನಂದಿ ಇವರ ಸಹಕಾರದೊಂದಿಗೆ ಏರ್ಪಡಿಸಿದ್ದ ಪುನಶ್ಚೇತನಗೊಂಡ ನಮ್ಮೂರು ನಮ್ಮ ಕೆರೆಯ ನಾಮ ಫಲಕ ಅನಾವರಣ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಕೆರೆ ಸಮಿತಿ ಅಧ್ಯಕ್ಷ ಏನ್.ಎಂ. ಮಲ್ಲಪ್ಪ, ಚಿತ್ರದುರ್ಗ ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಅಭಿಯಂತರ ಹರೀಶ್ ನಾಯ್ಕ್

ಯೋಜನಾಧಿಕಾರಿ ಕೆ.ಕುಸುಮಾಧರ್ ಮತ್ತಿತರರು ಇದ್ದಾರೆ.

ಯೋಜನಾಧಿಕಾರಿ ಕೆ.ಕುಸುಮಾಧರ್ ಮತ್ತಿತರರು ಇದ್ದಾರೆ.