ಸಾರಾಂಶ
ಧಾರವಾಡ: ಭಾರತೀಯ ಸಂವಿಧಾನ ಮೂಲಭೂತ ಕರ್ತವ್ಯಗಳ ಪರಿಚ್ಛೇದ 51(ಎ)(ಜಿ) ಅಡಿ, ನಮ್ಮ ನೈಸರ್ಗಿಕ ಪರಿಸರದ ಭಾಗವಾದ ಅರಣ್ಯ,ಕೆರೆ,ಸರೋವರ, ನದಿ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸಿ,ಅಭಿವೃದ್ಧಿ ಪಡಿಸುವ ಹೊಣೆ, ಪ್ರತಿಯೊಬ್ಬ ಪ್ರಜೆಗೆ ಕಡ್ಡಾಯಗೊಳಿಸಿದೆ ಎಂದು ಖ್ಯಾತ ಸಂಶೋಧಕ, ಬೆಂಗಳೂರಿನ ಹೊಳೆಮತ್ತಿ ನೇಚರ್ ಫೌಂಡೇಶನ್ ಸಂಸ್ಥಾಪಕ ಡಾ.ಸಂಜಯ ಗುಬ್ಬಿ ಹೇಳಿದರು.
ಪರಿಸರ ಭವನದಲ್ಲಿ ಹಳ್ಳಿಗೇರಿಯ ನೇಚರ್ ಫಸ್ಟ್ ಇಕೋ ವಿಲೇಜ್ ಹಾಗೂ ಧಾರವಾಡದ ನೇಚರ್ ರಿಸರ್ಚ್ ಸೆಂಟರ್ ಸಂಯುಕ್ತ ಆಶ್ರಯದಲ್ಲಿ ಮಾತೋಶ್ರೀ ಸಿದ್ದಲಿಂಗವ್ವ ಹಿರೇಮಠ ಹಾಗೂ ವಿರೂಪಾಕ್ಷಯ್ಯ ಹಿರೇಮಠ ಪರಿಸರ ವಿಚಾರೋಪನ್ಯಾಸದಲ್ಲಿ ವನ್ಯಜೀವಿಗಳ ರಮ್ಯಲೋಕ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.1996ರ ವರೆಗೆ ಅರಣ್ಯ ಎಂಬ ಪದಕ್ಕೆ ನಿರ್ಧಿಷ್ಟ ವ್ಯಾಖ್ಯೆ ಅಥವಾ ಅರ್ಥ ಶಾಸನಬದ್ಧ ರೂಪದಲ್ಲಿ ಇರಲಿಲ್ಲ.ಗೋದಾವರ್ಮನ್ ಪ್ರಕರಣದಲ್ಲಿ, ಅರಣ್ಯದ ಅರ್ಥ ವ್ಯಾಪ್ತಿ ನಿರ್ಧರಿಸಲಾಯಿತು.1927 ರಲ್ಲಿ ಬ್ರಿಟಿಷ ಆಳ್ವಿಕೆಯ ಭಾರತದಲ್ಲಿ, ಇಂಡಿಯಾ ಫಾರೆಸ್ಟ್ ಆಕ್ಟ್ ಜಾರಿಗೆ ಬಂದಿತು. ಸ್ವಾತಂತ್ರ್ಯದ ಬಳಿಕ 1952 ರಲ್ಲಿ ಇಂಡಿಯಾ ಫಾರೆಸ್ಟ್ ಪಾಲಸಿ ಹಾಗೂ 1963 ರಲ್ಲಿ ಕರ್ನಾಟಕ ಫಾರೆಸ್ಟ್ ಆಕ್ಟ್ ಜಾರಿಗೊಳಿಸಲಾಯಿತು. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಲ್ಲಿ ಜಾರಿಗೊಂಡ ಬಳಿಕ, ಕಾಡಿನ ಪ್ರಾಣಿ, ಅವುಗಳ ಆವಾಸಸ್ಥಾನ ಮತ್ತು ಆಹಾರ-ವಿಹಾರ ಪ್ರದೇಶಗಳ ಸಂರಕ್ಷಣೆಗೆ, ಸಾಮುದಾಯಿಕ ಸಹಭಾಗಿತ್ವದಲ್ಲಿ ಒತ್ತು ನೀಡಲಾಯಿತು ಎಂದು ಮಾಹಿತಿ ನೀಡಿದರು.
ಸರಿಯಾದ ತಿಳಿವಳಿಕೆ ಮತ್ತು ವೈಜ್ಞಾನಿಕ ಅಧ್ಯಯನವಿಲ್ಲದೇ,ಯೋಜಿತ ಕ್ಷೇತ್ರ ಕಾರ್ಯಗಳನ್ನು ಆಧರಿಸಿದ ಆಕರಗಳ ವಿಶ್ಲೇಷಣೆ ಇಲ್ಲದೇ,ಮನುಷ್ಯ ಕೇಂದ್ರಿತ ಅಭಿವೃದ್ಧಿ ಮಾದರಿಗಳು, ವನ್ಯಜೀವಿಗಳ ಬದುಕನ್ನು ದುಸ್ತರ ಗೊಳಿಸುತ್ತವೆ. ಅವುಗಳನ್ನು ಒಳಗೊಂಡ ಸಮಗ್ರ ಮತ್ತು ತಾಳಿಕೆ-ಬಾಳಿಕೆ ಬರುವ, ಸ್ಥಳೀಯ ಮಟ್ಟದ ಅಧ್ಯಯನ ಆಧಾರಿತ ಪುಟ್ಟ ಮಾದರಿಗಳು, ವನ್ಯಜೀವಿಗಳಿಗೆ ಅವುಗಳ ಹಕ್ಕನ್ನು ದಯಪಾಲಿಸುತ್ತವೆ ಎಂದು ಡಾ.ಸಂಜಯ ಗುಬ್ಬಿ ಅಭಿಪ್ರಾಯಪಟ್ಟರು.ನೇಚರ್ ರಿಸರ್ಚ್ ಸೆಂಟರ್ ಸಂಸ್ಥಾಪಕ ಕಾರ್ಯಾಧ್ಯಕ್ಷ ಪಂಚಾಕ್ಷರಿ ಹಿರೇಮಠ ಅಧ್ಯಕ್ಷತೆ ವಹಿಸಿ,ಮಾನವ ಮತ್ತು ವನ್ಯಜೀವಿಗಳ ಮಧ್ಯದ ಸಂಘರ್ಷಕ್ಕೆ ಪರ್ಯಾಯ ಪರಿಹಾರ ಕ್ರಮಗಳನ್ನು ಕಂಡುಕೊಳ್ಳಲು, ಯುವ ವಿಜ್ಞಾನಿಗಳಿಗೆ ಫೆಲೋಶಿಪ್ ಮತ್ತು ಸಂಶೋಧನಾ ಕಾರ್ಯಕ್ಕೆ ಆರ್ಥಿಕ ಸಹಾಯ ಒದಗಿಸಲು ಯೋಜಿಸಲಾಗಿದೆ. ಕ್ಷೇತ್ರ ಮಟ್ಟದ ಶ್ರೇಷ್ಠ ತಜ್ಞರ ಸಮಿತಿ ಮಾರ್ಗದರ್ಶನ ನೀಡಲಿದೆ ಎಂದರು.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಗೋಪಾಲ ಕಡೇಕೋಡಿ, ನಾಗರಿಕ ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ, ಡಾ.ಸಂಜಯ ಗುಬ್ಬಿ ಸನ್ಮಾನಿಸಿದರು. ವಿನಾಯಕ ಇನಾಮದಾರ ಪ್ರಾರ್ಥಿಸಿದರು. ಪಕ್ಷಿ ತಜ್ಞ ಆರ್.ಜಿ.ತಿಮ್ಮಾಪೂರ ಸ್ವಾಗತಿಸಿದರು. ಹರ್ಷವರ್ಧನ ಶೀಲವಂತ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಧೀರಜ್ ವೀರನಗೌಡರ ಸಂವಾದ ನಡೆಸಿದರು. ಅನಿಲ ಅಳ್ಳೊಳ್ಳಿ ನಿರೂಪಿಸಿದರು. ಮಂಜುನಾಥ ಹಿರೇಮಠ ವಂದಿಸಿದರು. ಡಾ. ಪ್ರಕಾಶ ಭಟ್, ಡಾ.ಸಂಜೀವ ಕುಲಕರ್ಣಿ, ಕೃಷ್ಣಕುಮಾರ ಭಾಗವತ, ಪ್ರೊ. ಗಂಗಾಧರ ಕಲ್ಲೂರ ಇದ್ದರು.